ವೈದ್ಯಕೀಯ ಕಾಲೇಜುಗಳ ಹೆಚ್ಚುವರಿ ಶುಲ್ಕ ವಸೂಲಿ ವಿರುದ್ಧ ಕೆಇಎ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ವೈದ್ಯಕೀಯ ಕಾಲೇಜುಗಳು ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ, ವಿದ್ಯಾರ್ಥಿಗಳು ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದೂರು ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಇಎ, ಯುಜಿ ಮತ್ತು ಪಿಜಿ ಪ್ರವೇಶದ ವೇಳೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಶುಲ್ಕವನ್ನು ಈಗಾಗಲೇ ಕೆಇಎಗೆ ಪಾವತಿಸುತ್ತಾರೆ. ಬಳಿಕ ಆ ಹಣವನ್ನು ಪ್ರಾಧಿಕಾರವು ನೇರವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಜಮಾ ಮಾಡುತ್ತದೆ. ಆದರೂ ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳು ಹೆಚ್ಚುವರಿ ಶುಲ್ಕ ಪಡೆಯಲು ಮುಂದಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಕೆಇಎ ತಿಳಿಸಿದೆ.
ರಾಜ್ಯ ಸರ್ಕಾರ ಮತ್ತು ಕಾಲೇಜುಗಳ ನಡುವಿನ ಒಪ್ಪಂದದಂತೆ 30 ಸಾವಿರ ರೂ. ಸ್ಕಿಲ್ ಲ್ಯಾಬ್ ಶುಲ್ಕ ಹಾಗೂ 15 ರೂ. ಇತರೆ ಶುಲ್ಕ ವಸೂಲಿ ಮಾಡಲು ಮಾತ್ರ ಅವಕಾಶವಿದೆ. ಇದಕ್ಕಿಂತ ಹೆಚ್ಚಿನ ಮೊತ್ತ ಪಡೆದರೆ ವಿದ್ಯಾರ್ಥಿಗಳು ತಕ್ಷಣ ದೂರು ನೀಡುವಂತೆ ತಿಳಿಸಲಾಗಿದೆ.



























