9, 10ನೇ ತರಗತಿಗೆ ಮೂರು ಭಾಷೆಗಳ ಅಧ್ಯಯನ ಕಡ್ಡಾಯ!

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2026ರ ಜುಲೈ 1ರಿಂದ ಜಾರಿಗೆ ಬರುವಂತೆ ಪಠ್ಯಕ್ರಮದಲ್ಲಿ ಮಹತ್ವದ ಬದಲಾವಣೆ ಘೋಷಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF) ಶಿಫಾರಸಿನ ಆಧಾರದಲ್ಲಿ ಹೊಸ ನಿಯಮವನ್ನು ದೇಶದ ಎಲ್ಲಾ ಸಿಬಿಎಸ್ಇ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
ಹೊಸ ನಿಯಮದಂತೆ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಮೂರು ಭಾಷೆಗಳ ಅಧ್ಯಯನ ಕಡ್ಡಾಯವಾಗಲಿದೆ. ಈವರೆಗೆ ಎರಡು ಭಾಷೆಗಳಷ್ಟೇ ಕಲಿಯುವ ಅವಕಾಶವಿದ್ದರೂ, ಈಗ ಮೂರು ಭಾಷೆಗಳನ್ನು ಓದಬೇಕಾಗುತ್ತದೆ.
ವಿದ್ಯಾರ್ಥಿಗಳು ಆಯ್ಕೆ ಮಾಡುವ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಅಥವಾ ಸ್ಥಳೀಯ ಭಾಷೆಗಳಾಗಿರಬೇಕು. ಕನ್ನಡ, ಹಿಂದಿ, ತಮಿಳು, ಸಂಸ್ಕೃತ ಮುಂತಾದ ಭಾಷೆಗಳಿಗೆ ಆದ್ಯತೆ ನೀಡಲಾಗಿದ್ದು, ಮೂರನೇ ಭಾಷೆಯಾಗಿ ಇಂಗ್ಲಿಷ್ ಅಥವಾ ವಿದೇಶಿ ಭಾಷೆಯನ್ನು ಆಯ್ಕೆ ಮಾಡಬಹುದು.
ಹತ್ತನೇ ತರಗತಿಯ ಮಂಡಳಿ ಪರೀಕ್ಷೆಯಲ್ಲಿ ಕೇವಲ ಎರಡು ಭಾಷೆಗಳಿಗೆ ಮಾತ್ರ ಲಿಖಿತ ಪರೀಕ್ಷೆ ನಡೆಯಲಿದೆ. ಮೂರನೇ ಭಾಷೆಯ ಮೌಲ್ಯಮಾಪನವನ್ನು ಶಾಲಾ ಮಟ್ಟದಲ್ಲೇ ಆಂತರಿಕವಾಗಿ ನಡೆಸಲು ಮಂಡಳಿ ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಈ ಹೊಸ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ವಿಷಯಗಳ ಸಂಖ್ಯೆ ಹೆಚ್ಚಾಗಲಿದ್ದು, ಶಾಲೆಗಳು ಸ್ಥಳೀಯ ಭಾಷಾ ಶಿಕ್ಷಕರ ನೇಮಕಾತಿ ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆ ತರಬೇಕಾದ ಪರಿಸ್ಥಿತಿ ಎದುರಾಗಿದೆ.























