
ನವದೆಹಲಿ: ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆಯಿಂದ ಜಾಗತಿಕ ಆರ್ಥಿಕ ಪರಿಸ್ಥಿತಿ ಅಸ್ಥಿರವಾಗಿರುವ ಹಿನ್ನೆಲೆ, ಚಿನ್ನ ಖರೀದಿಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ ಕೆಲವೇ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಆಮದು ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಶೇ.6ರಿಂದ ಶೇ.15ಕ್ಕೆ ಏರಿಕೆ ಮಾಡಿ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ.
ವಿದೇಶಿ ವಿನಿಮಯದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಚಿನ್ನ ಬಳಕೆದಾರ ರಾಷ್ಟ್ರವಾಗಿದ್ದು, ಸುಂಕ ಏರಿಕೆಯಿಂದ ಚಿನ್ನ ಮತ್ತು ಬೆಳ್ಳಿ ಖರೀದಿ ಬೇಡಿಕೆ ಇಳಿಯುವ ಸಾಧ್ಯತೆ ಇದೆ. ಇದರಿಂದ ವ್ಯಾಪಾರ ಕೊರತೆ ತಗ್ಗಿ ರೂಪಾಯಿ ಮೌಲ್ಯಕ್ಕೂ ಸಹಕಾರಿಯಾಗಬಹುದು ಎಂದು ವರದಿಗಳು ತಿಳಿಸಿವೆ.
ಹೊಸ ನಿಯಮದಂತೆ ಚಿನ್ನ ಮತ್ತು ಬೆಳ್ಳಿ ಆಮದು ಮೇಲೆ 10% ಮೂಲ ಕಸ್ಟಮ್ಸ್ ಸುಂಕ ಹಾಗೂ 5% AIDC ಸೆಸ್ ವಿಧಿಸಲಾಗಿದ್ದು, ಒಟ್ಟು ತೆರಿಗೆ ಪ್ರಮಾಣ 15%ಕ್ಕೆ ತಲುಪಿದೆ. ಸುಂಕ ಹೆಚ್ಚಳದಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಚಿನ್ನ ಆಮದು ಶೇ.24.1ರಷ್ಟು ಏರಿಕೆಯಾಗಿ 72 ಶತಕೋಟಿ ಡಾಲರ್‌ಗೆ ತಲುಪಿದ್ದರೆ, ಬೆಳ್ಳಿ ಆಮದು ಶೇ.149.6ರಷ್ಟು ಹೆಚ್ಚಳ ಕಂಡಿದೆ. ಇದರ ನಡುವೆ ಸುಂಕ ಏರಿಕೆಯಿಂದ ಚಿನ್ನ ಕಳ್ಳಸಾಗಣೆ ಹೆಚ್ಚಾಗುವ ಆತಂಕವಿದೆ ಎಂದು ಜುವೆಲ್ಲರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.






















