
ಬೆಂಗಳೂರು/ಕೊಪ್ಪಳ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ರವಿವಾರ ಕೋಳೂರು-ಕಾಟ್ರಳ್ಳಿಯಲ್ಲಿ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಆದರೆ ಬದಲಾವಣೆ ಅನಿವಾರ್ಯವಾದರೆ ಪರ್ಯಾಯವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ಸಿಎಂ ಬದಲಾವಣೆ ವಿಚಾರ ಬಂದರೆ ಶಾಸಕರ ಅಭಿಪ್ರಾಯ ಕಡ್ಡಾಯವಾಗಿ ಕೇಳಬೇಕು. ಡಿ.ಕೆ. ಶಿವಕುಮಾರ್ ವಿರುದ್ಧ ನಾನು ಏನೂ ಹೇಳಿಲ್ಲ. ಅವರು ಸಿಎಂ ಆಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲವೆಂದು ಪ್ರಶ್ನಿಸಿದ ರಾಯರೆಡ್ಡಿ, ನಾನು ಯಾರ ಪರವೂ ಅಲ್ಲ, ಕಾಂಗ್ರೆಸ್ ಬೆಂಬಲಿಗನಾಗಿ ಸಿದ್ದರಾಮಯ್ಯ ಅವರ ಆಡಳಿತ ಮೆಚ್ಚಿ ಮಾತನಾಡುತ್ತಿದ್ದೇನೆ ಎಂದರು.
ಇತ್ತೀಚೆಗೆ ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿದ್ದೇನೆ. ಉಂಟಾಗುತ್ತಿರುವ ಗೊಂದಲಗಳಿಗೆ ಅಂತ್ಯ ತರಲು ಹಾಗೂ ಸಚಿವ ಸಂಪುಟ ಪುನರ್ ರಚನೆ ಮಾಡಿ ಹೊಸಬರು-ಹಿರಿಯರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.



















