32.2 C
Udupi
Saturday, May 2, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 509

ಭರತೇಶ ಶೆಟ್ಟಿ,ಎಕ್ಕಾರು

ಸಂಚಿಕೆ ೫೦೯ ಮಹಾಭಾರತ

ಭದ್ರಾವತಿ ಪುರದರಸು ಯವನಾಶ್ವನನ್ನು ಆದರಾತಿಥ್ಯಗಳಿಂದ ಸತ್ಕರಿಸಿ “ಧರ್ಮಕಾರ್ಯವನ್ನು ಅರಿತು ಬೆಂಬಲಿಸುತ್ತಿರುವ ನಿನ್ನ ಉದಾರ ಮನಸ್ಸನ್ನು ಬಹುವಾಗಿ ಮೆಚ್ಚಿಕೊಂಡಿದ್ದೇವೆ. ಮಾತ್ರವಲ್ಲ ನಿನ್ನ ದೇಶದ ಸರ್ವಸ್ವ, ಕೋಶ, ಸೇನೆಯನ್ನು ನಮ್ಮ ಯಾಗ ಸಹಾಯಕ್ಕೆ ಸಮರ್ಪಿಸಿ ಮಹಾತ್ಮನಾಗಿರುವೆ. ಭದ್ರಾವತಿ ಪುರದ ರಕ್ಷಣೆ ಹಾಗೂ ಸಮೃದ್ಧಿ ಈಗ ನಮ್ಮೆಲ್ಲರ ಹೊಣೆಯಾಗಿದೆ. ನೀನು ಆ ಕುರಿತಾಗಿ ನಿಶ್ಚಿಂತನಾಗಿರು.” ಎಂದು ಕೃತಜ್ಞತೆಯ ಜೊತೆ ಭದ್ರತೆಯ ಭರವಸೆಯನ್ನೂ ಇತ್ತನು.

ಯವನಾಶ್ವನಿಂದ ಪ್ರಾಪ್ತವಾದ ದಿವ್ಯ ಕುದುರೆಯನ್ನು ಯಥೋಚಿತ ವಿಧಿಗಳಿಂದ ಪೂಜಿಸಿ ಪ್ರತ್ಯೇಕ ಲಾಯದಲ್ಲಿ ಗೌರವಪೂರ್ವಕವಾಗಿ ಬಂಧಿಸಲಾಯಿತು. ಇನ್ನು ಕಾಲಕ್ಷೇಪ ಸೂಕ್ತವಲ್ಲ ಎಂದು ಅರಿತ ಧರ್ಮರಾಯ ಸೋದರ ಭೀಮಸೇನನನ್ನು ಕರೆದು “ಇನ್ನು ಮುಂದೆ ಆಗಬೇಕಾಗಿರುವ ಯಾಗ ಕಾರ್ಯಗಳಿಗೆ ಶ್ರೀಕೃಷ್ಣನ ನಿರ್ದೇಶನ ಅತ್ಯಗತ್ಯ. ಹಾಗಾಗಿ ಆತನನ್ನು ಇಲ್ಲಿಗೆ ಕರೆತರುವುದು ಅವಶ್ಯಕ. ನೀನು ದ್ವಾರಕೆಗೆ ಹೋಗಿ ಪರಮಾತ್ಮನನ್ನು ಕರೆತರಬೇಕು” ಎಂದು ಆದೇಶ ಮಾಡಿದನು.

ಭೀಮಸೇನನು ಯುವರಾಜ, ಮಹಾರಾಜನಾದ ಅಣ್ಣನ ಆಜ್ಞಾಪಾಲಕನಾಗಿ ದ್ವಾರಕೆಗೆ ಹೊರಟನು. ಸಮುದ್ರ ಮಧ್ಯಭಾಗದಲ್ಲಿರುವ ದಿವ್ಯ ಭವ್ಯ ಪುರ, ನಗರಗಳ, ಉದ್ಯಾನ ಗೋಪುರಗಳ ಸೌಂದರ್ಯವನ್ನು ಕಣ್ತುಂಬಿಸುತ್ತಾ ದ್ವಾರಕೆಯ ರಾಜಬೀದಿಯನ್ನು ಕ್ರಮಿಸಿ ಆಸ್ಥಾನ ಪ್ರವೇಶಿಸಿದನು. ರಾಜೋಚಿತ ಸತ್ಕಾರಗಳು ಆದ ಬಳಿಕ ಏಕಾಂತದಲ್ಲಿ ಶ್ರೀಕೃಷ್ಣನ ಜೊತೆ ಕುಶಲೋಪರಿ ವಿನಿಮಯದಲ್ಲಿ ತೊಡಗಿದನು. ಮರುತ್ತ ರಾಜನಿಂದ ಉಳಿಸಲ್ಪಟ್ಟ ಶಿವಾನುಗ್ರಹಿತ ನಿಧಿಯನ್ನು ಹಿಮಾಲಯದಿಂದ ಯಾಗ ಕಾರ್ಯಕ್ಕಾಗಿ ತಂದ ವಿಚಾರ, ಯವನಾಶ್ವನಿಂದ ಯಾಗಕ್ಕಾಗಿ ಕುದುರೆ, ಬೊಕ್ಕಸ, ಸೇನೆ ಪಡೆದ ಸಂಗತಿಗಳೆಲ್ಲವನ್ನೂ ಸವಿವರವಾಗಿ ತಿಳಿದನು. ಹರ್ಷಚಿತ್ತನಾಗಿ ಅಶ್ವಮೇಧ ಯಾಗ ಸಿದ್ಧತೆಯ ಪ್ರಾಥಮಿಕ ಕಾರ್ಯಗಳ ಯಶಸ್ಸಿನ ಕಥನ ತಿಳಿದು ಅಭಿನಂದಿಸಿದನು. ಆ ಬಳಿಕ ಭೀಮಸೇನ “ಹಸ್ತಿನೆಯ ಮಹಾರಾಜನಾಗಿರುವ ನನ್ನಣ್ಣ ಧರ್ಮರಾಯ ಇನ್ನು ಮುಂದೆ ಆಗ ಬೇಕಾಗಿರುವ ಯಾಗದ ಮುಂದುವರಿಕೆಗಾಗಿ ನಿಮ್ಮ ಉಪಸ್ಥಿತಿಯ ಅಪೇಕ್ಷೆ ವ್ಯಕ್ತಪಡಿಸಿದ್ದಾನೆ. ಹಾಗಾಗಿ ಕರೆತರಲು ನನ್ನನ್ನು ದ್ವಾರಕೆಗೆ ಕಳುಹಿಸಿದ್ದಾನೆ, ಹಾಗಾಗಿ ಬಂದವನಿದ್ದೇನೆ.” ಎಂದು ತಾನು ಬಂದಿರುವ ಕಾರ್ಯ ಕಾರಣ ವಿವರಿಸಿದನು. ಸುದ್ದಿ ತಿಳಿದ ಶ್ರೀಕೃಷ್ಣ ಸಂತೋಷಗೊಂಡು “ಹಾಗೆಯೆ ಆಗಲಿ, ಹಸ್ತಿನಾವತಿಗೆ ಹೊರಡೋಣ” ಎಂದು ಸಮ್ಮತಿ ಸೂಚಿಸಿ ಸಿದ್ಧನಾದನು.

ಶ್ರೀಕೃಷ್ಣನು ತಂದೆ ವಸುದೇವನಿಗೂ, ಅಣ್ಣ ಬಲರಾಮನಿಗೂ ಪಾಂಡವರ ಅಶ್ವಮೇಧ ಯಾಗದ ವಿಚಾರವನ್ನು ತಿಳಿಸಿ ಅಪ್ಪಣೆ ಪಡೆದನು. ಸ್ವಯಂ ದೇವರು ಅವತರಿಸಿ ಬಂದವನಾಗಿದ್ದರೂ ಲೋಕಧರ್ಮವನ್ನು ಮೀರದೆ ಅನುಮತಿ ಪಡೆದನು. ದ್ವಾರಕೆಯ ಸಮಸ್ತ ಸೈನ್ಯವನ್ನು ಸಜ್ಜುಗೊಳಿಸಿ, ಭೋಜ, ಅಂಧಕ, ವೃಷ್ಣಿ, ಸಾತ್ವತ, ಕುಕುರ ಮೊದಲಾದ ಯಾದವ ಪಂಗಡದ ಮುಖಂಡರೆಲ್ಲರಿಗೂ ತಿಳಿಸಿ ಅವರಲ್ಲಿ ಪ್ರಮುಖ ವೀರರನ್ನು ಜೊತೆಗೂಡಿಸಿದನು. ಮಾತ್ರವಲ್ಲದೆ ತನ್ನವರಾದ ಪ್ರದ್ಯುಮ್ನ, ಅನಿರುದ್ಧ, ಗದ, ಸಾಂಬ, ಸಾತ್ಯಕಿ, ಕೃತವರ್ಮ ಮುಂತಾದವರೆಲ್ಲರನ್ನೂ ತನ್ನೊಂದಿಗೆ ಹೊರಡಿಸಿದನು. ನೂರಾರು ಬಂಡಿಗಳಲ್ಲಿ, ಆನೆಗಳಲ್ಲಿ ಧರ್ಮರಾಜನ ಮುಖೇನ ವಿರಚಿಸಲ್ಪಡುವ ಯಾಗಕ್ಕೆ ಕಾಣಿಕೆಯಾಗಿ ಧನಕನಕ, ಮುತ್ತು ರತ್ನಾದಿಗಳನ್ನು ಹೇರಿಕೊಂಡು ಸಿದ್ಧಗೊಳಿಸಿದನು. ಇಷ್ಟು ಸಾಲದು ಎಂಬಂತೆ ಸಹಸ್ರಾರು ಗೋವುಗಳನ್ನೂ, ದಾಸ ದಾಸಿಯರನ್ನೂ, ಪ್ರಬುದ್ಧ ಪರಿಚಾರಕರು ಕೂಡಿದ ಪರಿವಾರವನ್ನೂ ಸನ್ನದ್ಧರಾಗಿ ಹೊರಡಲು ಅಪ್ಪಣೆ ಮಾಡಿದನು. ತನ್ನ ಅಷ್ಟ ಮಹಿಷಿಯರಾದ ಭೀಷ್ಮಕನ ಮಗಳು ರುಕ್ಮಿಣಿ, ಸತ್ರಾಜಿತನ ಮಗಳು ಸತ್ಯಭಾಮೆ, ಜಾಂಬವಂತನ ಮಗಳು ಜಾಂಬವತಿ, ಶೃತಕೀರ್ತಿಯ ಮಗಳು ಭದ್ರೆ, ಸೂರ್ಯನ ಮಗಳು ಕಾಳಿಂದಿ, ಜಯತ್ಸೇನನ ಮಗಳು ಮಿತ್ರವಿಂದೆ, ನಗ್ನಜಿತನ ಮಗಳು ಸತ್ಯೆ, ಮದ್ರರಾಜನ ಮಗಳು ಲಕ್ಷ್ಮಣಿಯರನ್ನು ಸೇರಿಸಿ ತನ್ನ ಮಕ್ಕಳೂ ಸಮೇತನಾಗಿ ಸಿದ್ಧನಾದನು. ಇಷ್ಟಾದರೂ ಸಾಕಾಗದೆ ತನ್ನ ಪ್ರೀತಿಯ ತಂಗಿ, ಅರ್ಜುನನ ಮಡದಿ, ವೀರ ಅಭಿಮನ್ಯು ಕುಮಾರನ ಮಾತೆಯಾದ ಸುಭದ್ರೆಯನ್ನು ಹೊರಡಿಸಿದನು. ಶ್ರೀಕೃಷ್ಣನು ಸಕಲ ಪರಿವಾರ ಪರಿವೃತನಾಗಿ ಭೀಮಸೇನನೊಂದಿಗೆ ವಿಜೃಂಬಣೆಯ ಮೆರವಣಿಗೆ ಹೊರಟಂತೆ ಹಸ್ತಿನಾವತಿಗೆ ಹೊರಟನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page