27.7 C
Udupi
Sunday, April 26, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 603

ಭರತೇಶ ಶೆಟ್ಟಿ ,ಎಕ್ಕಾರು

ಅಗ್ನಿಯು ಮರುತ್ತ ರಾಜನಲ್ಲಿಗೆ ಬಂದು “ಮಹಾರಾಜಾ! ನಾನು ಇಂದ್ರನ ಅನುಜ್ಞೆಯನ್ನು ಪಾಲಿಸಲು ಬಂದವನು, ನೀನು ಈ ಮೊದಲು ಮಹಾಯಾಗವನ್ನು ಮಾಡಲು ನಿರ್ಧರಿಸಿ ದೇವಗುರು ಬ್ರಹಸ್ಪತಿ ಆಚಾರ್ಯರನ್ನು ಕೇಳಿಕೊಂಡಿರುವೆ. ಅವರು ಯಾವ ಕಾರಣದಿಂದ ಬೇಡ ಎಂದು ಹೇಳಿದರೆಂಬುದು ಜಿಜ್ಞಾಸೆಗೆ ಬಿಟ್ಟ ವಿಚಾರ. ಆದರೆ ದೇವಗುರು ಆಗದು ಎಂದು ಕೈಬಿಟ್ಟ ಯಾಗವನ್ನು ಅವಧೂತ ಸಂವರ್ತನಿಂದ ನೆರವೇರಿಸಲು ನೀನು ಮುಂದಾಗಬಾರದು.” ಎಂದು ನುಡಿದನು. ಆಗ ಮಹಾರಾಜ ಮರುತ್ತನು ಪೂರ್ಣ ವೃತ್ತಾಂತವನ್ನು ವಿವರಿಸುತ್ತಾ “ಅಗ್ನಿದೇವನೇ, ನಾನು ಲೋಕ ಕಲ್ಯಾಣಾರ್ಥವಾಗಿ ಈ ಯಾಗ ವಿರಚಿಸಲು ಮುಂದಾಗಿದ್ದೇನೆ. ದೇವಗುರುಗಳಾದ ಬ್ರಹಸ್ಪತಿ ಆಚಾರ್ಯರನ್ನು ಕಡೆಗಣಿಸಿ ಅನ್ಯರ ಮುಖೇನ ನಾನು ಈ ಯಾಗ ಮಾಡಿಸಲು ಮನಮಾಡಿದವನಲ್ಲ. ಅವರು ಆಗದು ಎಂದು ಹೇಳಿದ ಬಳಿಕ ನಾನು ಸಂವರ್ತರ ಬಳಿ ಹೋಗಿ ಬಹು ವಿಧಾನಗಳಿಂದ ಪ್ರಯತ್ನಿಸಿ ಶ್ರಮಪೂರ್ವಕವಾಗಿ ಒಪ್ಪಿಸಿ ಯಾಗ ಮಾಡಿಸಲು ತಯಾರಾಗಿರುವುದು. ಅದೂ ನಾರದರು ಬಂದು ನಿರ್ದೇಶನವಿತ್ತ ಬಳಿಕ. ಒಬ್ಬರು ಆಗದು ಎಂದು ತಿರಸ್ಕರಿಸಿದ ಕಾರ್ಯಕ್ಕೆ ಬದಲಿಯಾಗಿ ಬಂದು ಮಾಡುವ ಕಾರ್ಯಕ್ಕೆ ಮೊದಲು ಒಪ್ಪದಿದ್ದರೂ, ನಂತರ ನನ್ನ ವಿನಂತಿಯನ್ನು ಮನ್ನಿಸಿ ಬಂದಿರುವ ಸಂವರ್ತನನ್ನು ಇನ್ನು ಬಿಡಲಾದೀತೆ? ಬಿಟ್ಟರೆ ಅದು ಧರ್ಮವಾದೀತೆ? ಇಂದ್ರನು ನಮಗೆ ದೇವನಾಗಿದ್ದಾನೆ. ಆತನ ಅನುಗ್ರಹ ನಮಗೆ ಬಹುಮೂಲ್ಯ. ದೇವರಾಜನು ನಮಗೆಲ್ಲರಿಗೂ ಕೃಪೆ ತೋರುವಂತೆ ಮಾಡಬೇಕು” ಎಂದು ಸಂಪ್ರಾರ್ಥಿಸಿದನು.

ಇವರಿಬ್ಬರ ಸಂವಾದವನ್ನು ಕೇಳುತ್ತಿದ್ದ ಅವಧೂತ ಸಂವರ್ತರು “ಹೇ ರಾಜನೇ! ಪ್ರಸ್ತುತ ಬೆಳವಣಿಗೆಗಳಿಂದ ನೀನು ಭಯಗೊಳ್ಳಬೇಡ. ಅಗ್ನಿ ನಮಗೆ ಪೂಜನೀಯನು. ಹವ್ಯವಾಹನನ (ಹವ್ಯವಾಹನ = ಯಾಗದ ಹವಿಸ್ಸನ್ನು ಸಮರ್ಪಿಸಿದ ದೇವತೆಗಳಿಗೆ ತಲುಪಿಸುವ ಮಾಧ್ಯಮ ಅಥವಾ ವಾಹಿನಿ) ಹೊರತಾಗಿ ಯಾಗ ನಡೆಯದು. ಹಾಗಾಗಿ ಅಗ್ನಿದೇವ ನಮಗೆ ಪ್ರಾಮುಖ್ಯನಾಗಿದ್ದಾನೆ. ನಾವು ಅಗ್ನಿಯನ್ನು ಪೂಜಿಸ ಬೇಕಾದುದು ಧರ್ಮ. ಆದರೆ ಈಗ ಇಂದ್ರನ ಪಕ್ಷಪಾತಿಯಾಗಿ ಬಂದು, ಆತನ ಆಜ್ಞಾನುವರ್ತಿಯಾಗಿ ಸ್ವಾರ್ಥ ಸಾಧನೆಗೆ ಮುಂದಾಗಿರುವುದು ಯುಕ್ತವಲ್ಲ. ನೀನು ಮೊದಲು ವಿವೇಕಿಯಾಗು. ಭಯಪಡದೆ, ಅತಿ ವಿನಯ ತೋರದೆ ತರ್ಕಿಸಿ ನೋಡು. ನೀನು ಧರ್ಮವನ್ನಾಗಲಿ, ನ್ಯಾಯವನ್ನಾಗಲಿ ಮೀರಿ ನಡೆದಿಲ್ಲ. ಹಾಗಿರುವಾಗ ಧೈರ್ಯ ಕಳಕೊಳ್ಳುವುದು ಸಮಂಜಸವಲ್ಲ. ಯಾಗಕ್ಕೆ ಬೇಕಾದ ಅಗ್ನಿ ಸ್ಥಾಪನೆ ಮಾಡಬೇಕಾದುದು ಯಾಜಕನ ಕೆಲಸ. ಅರಣಿಯನ್ನುಜ್ಜಿ ಅವಾಹಿಸಿ ಅಗ್ನಿಯನ್ನು ಸೃಜಿಸುವ ಕಾರ್ಯ ಯಾಜಕನಾದವರು ಅಗ್ನಿ ಸ್ಥಾಪನೆ ಮಾಡುತ್ತಾರೆ. ಈ ಸತ್ಯ ಸಂಗತಿಯನ್ನು ಇಂದ್ರ ಮತ್ತು ಅಗ್ನಿಯೂ ತಿಳಿದಿರಬೇಕು” ಎಂದರು. ಅಂದರೆ ಸ್ವಯಂ ಸಂವರ್ತನೇ ಈ ಕಾರ್ಯ ಮಾಡಬೇಕು. ಸಾಧನೆಯ ಬಲದ ಮೇಲಿನ ವಿಶ್ವಾಸ ಈ ಮಾತು ಪ್ರಸ್ತಾಪಿಸುವಲ್ಲಿ ಕಾರಣವಾಗಿತ್ತು.

ಈ ಮಾತನ್ನು ಸಂವರ್ತ ಹೇಳುತ್ತಿದ್ದಂತೆಯೆ ಅಲ್ಲಿಂದ ಅಗ್ನಿದೇವ ಹೊರಟು ಇಂದ್ರನಿಗೆ ಪೂರ್ಣ ವಿಚಾರ ತಿಳಿಸಿದನು. ಅಷ್ಟಕ್ಕೆ ಸುಮ್ಮನಾಗದ ಇಂದ್ರನು ‘ಧೃತರಾಷ್ಟ್ರ’ ಎಂಬ ಹೆಸರಿನ ಗಂಧರ್ವನ್ನು ಕರೆಯಿಸಿ ದೂತನಾಗಿ ತನ್ನ ಮುಖವಾಣಿಯನ್ನು ತಿಳಿಸಲು ಕಳುಹಿಸಿಕೊಟ್ಟನು. ಗಂಧರ್ವ ರಾಜ ಮರುತ್ತನಲ್ಲಿಗೆ ಬಂದು “ಅಯ್ಯಾ ರಾಜನೇ! ದೇವರಾಜ ಇಂದ್ರನ ಮಹಿಮೆ ನಿನಗೆ ತಿಳಿದಿದೆ. ಒಲಿದರೆ ಇಂದ್ರ ಸರ್ವ ಕಾಮನೆಗಳನ್ನು ಪೂರೈಸಬಲ್ಲ ಅನುಗ್ರಹ ಕಾರಕನೂ ಹೌದು. ಹಾಗೆಂದು ಒಂದೊಮ್ಮೆ ಮುನಿದರೆ ಸರ್ವನಾಶವನ್ನೂ ಮಾಡಬಲ್ಲನು‌. ಹೀಗಿರಲು ನೀನು ಸಂವರ್ತನ ಮುಖೇನ ಈ ಯಾಗ ಮಾಡಿಸಬಾರದು” ಎಂದು ಇಂದ್ರನ ಅಭಿಮತವನ್ನು ವಿವರಿಸಿದನು.

ಹಾಗೆ ಹೊರಟು ಗಂಧರ್ವ ಮರುತ್ತನ ಬಳಿಗೆ ಬಂದನು. ಬಂದ ಅತಿಥಿಗೆ ವಂದಿಸಿ ಸತ್ಕರಿಸಿದನು. ಆಗ ಗಂಧರ್ವ ತಾನು ಬಂದ ಕಾರಣ ತಿಳಿಸಿ ಯಾಗವನ್ನು ದೇವಗುರು ಬೃಹಸ್ಪತಿ ಆಚಾರ್ಯರ ಮುಖೇನ ಮಾಡಿಸುವಂತೆ ಇಂದ್ರ ನಿರ್ದೇಶನವನ್ನು ಸೂಚಿಸಿದನು. ಆಗ ಮರುತ್ತನು “ಅಯ್ಯಾ ಶ್ರೇಷ್ಠನೇ, ನಾನು ಈ ಯಾಗವನ್ನು ನನ್ನ ಸ್ವಾರ್ಥಕ್ಕಾಗಿ ಮಾಡಿಸುತ್ತಿರುವುದಲ್ಲ. ಲೋಕಕಲ್ಯಾಣದ ಕಾಮ್ಯಾರ್ಥವಾಗಿ ಮಾಡುತ್ತಿದ್ದೇನೆ. ಒಮ್ಮೆ ಸಂವರ್ತರ ಬಳಿ ಹೋಗಿ ಹೇಗೋ ಒಪ್ಪಿಸಿ ಯಾಗಕ್ಕಾಗಿ ಕರೆ ತಂದ ಬಳಿಕ ಅವರನ್ನು ಹೇಗೆ ತ್ಯಜಿಸಲಿ? ಹಾಗೆ ತೊರೆದರೆ ಅನ್ಯಾಯವಾಗದೆ? ಹಾಗೆಂದು ನಮ್ಮ ಸಾಮ್ರಾಜ್ಯ ಮತ್ತು ಪ್ರಜೆಗಳ ಹಿತದೃಷ್ಟಿಯಿಂದ ಕೈಗೊಂಡಿರುವ ಈ ಯಾಗದಲ್ಲಿ ಇಂದ್ರನಿಗೂ ಹವಿರ್ಭಾಗವಿದೆ. ಆತನ ಸಂತೃಪ್ತಿ ನಮ್ಮ ಉದ್ದೇಶವಾಗಿದೆ. ಕೃಪೆದೋರಿ ದೇವರಾಜ ಕುಪಿತನಾಗದೆ ನಮ್ಮನ್ನು ಸಂರಕ್ಷಿಸಬೇಕು” ಎಂದು ಬೇಡಿಕೊಂಡನು. ಗಂಧರ್ವನು ಬಂದ ವಿಚಾರ ತಿಳಿಸಿ ಮರಳಿ ದೇವಲೋಕಕ್ಕೆ ಹೋದನು. ರಾಜ ಮರುತ್ತನು ಹೇಳಿದ ವಿಚಾರ ವಿವರಿಸಿ, ರಾಜನು ಸಂವರ್ತನ ಮೂಲಕ ವಿರಚಿಸಲು ಸಿದ್ಧತೆ ಮಾಡಿಕೊಂಡಿದ್ದು, ಯಾಗವನ್ನು ಅವರಿಂದಲೇ ನೆರವೇರಿಸುವುದಾಗಿ ಇಂದ್ರನಿಗೆ ತಿಳಿಸಿದನು.

ಈ ಉತ್ತರವನ್ನು ಕೇಳುತ್ತಿದ್ದಂತೆ ಕ್ರೋಧಿತನಾದ ದೇವೇಂದ್ರನು “ನನ್ನ ಆಜ್ಞೆಯನ್ನು ಮೀರಿ ಯಾಗ ವಿರಚಿಸಲು ಮುಂದಾದ ಮರುತ್ತನನ್ನು ಹಾಗೆಯೆ ಬಿಡಲಾಗದು. ತಕ್ಕ ಶಾಸ್ತಿ ಮಾಡುತ್ತೇನೆ” ಎಂದು ನುಡಿದು ವಜ್ರಾಯುಧವನ್ನು ಧರಿಸಿದನು. ಮುಂದಾಗಿ ಸೂಕ್ತ ಬಲ ಪರಿವೃತನಾಗಿ ಹೊರಟನು‌.

ಮರುತ್ತನ ಯಾಗ ಶಾಲೆ ಪ್ರವೇಶಿಸಿದ ಇಂದ್ರನು “ಹೇ ಮರುತ್ತ ರಾಜನೆ! ನೀನು ಯಾಗ ಮಾಡುತ್ತಿರುವ ಉದ್ದೇಶ ನಮ್ಮನ್ನು ಮೆಚ್ಚಿಸುವುದು. ಆದರೆ ಅದಕ್ಕೆ ತದ್ವಿರುದ್ದವಾಗಿ ನನ್ನನ್ನು ಕೆರಳಿಸುತ್ತಿರುವೆ. ಸಮಾಧಾನದಿಂದ ಎರಡೆರಡು ಬಾರಿ ನಿನಗೆ ಮರ್ಯಾದೆ ತೋರಿ ಸಂವರ್ತನ ಮುಖೇನ ಯಾಗ ಮಾಡಿಸಬೇಡ, ಹಾಗೂ ಬೇಕೆಂದಾದರೆ ಬ್ರಹಸ್ಪತಿ ಆಚಾರ್ಯರ ಮುಖೇನ ಮಾಡಿಸು ಎಂದು ತಿಳಿಯಪಡಿಸಿದೆ. ನೀನು ಯಾಗ ಮಾಧ್ಯಮದಿಂದ ಸಮರ್ಪಿಸುವ ಹವಿಸ್ಸನ್ನು ಸ್ವೀಕರಿಸಿ ನಿನ್ನ ಮನೋಕಾಮನೆಗಳನ್ನು ನೆರವೇರಿಸಬೇಕಾದ ನನ್ನ ಆಜ್ಞೆಯನ್ನು ಧಿಕ್ಕರಿಸಿ ಉದ್ದಟತನ ತೋರಲು ಹೊರಟಿರುವುದು ವಿಪರ್ಯಾಸ. ಕೇವಲ ಸಂವರ್ತನನ್ನು ಬೆಂಬಲಿಸಿ ಅನಾಹುತವನ್ನು ಮೈ ಮೇಲೆ ಎಳೆದುಕೊಳ್ಳದಿರು. ಹಾಗೂ ನೀನು ಹಠ ತೋರಿದೆ ಎಂದಾದರೆ ಇದೋ ನೋಡು ನನ್ನ ವಜ್ರಾಯುಧ ದಂಡನೆಗೆ ಸಿದ್ಧವಾಗಿದೆ” ಎಂದು ತನ್ನ ಆಯುಧವನ್ನೆತ್ತಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page