31.8 C
Udupi
Thursday, April 23, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 495

ಭರತೇಶ ಶೆಟ್ಟಿ,ಎಕ್ಕಾರು

ಧರ್ಮರಾಯನು ಅಜ್ಜ ಭೀಷ್ಮಾಚಾರ್ಯರ ಪಾದಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ನಮಸ್ಕರಿಸಿದನು. “ಅಜ್ಜಾ ಗುರುವಿನಂತೆ ನನಗೆ ಬಹುವಿಧ ಉಪದೇಶ ಮಾಡಿದ್ದೀರಿ. ಜ್ಞಾನ ಭಿಕ್ಷುವಾಗಿ ಅನರ್ಘ್ಯ ದಾನವನ್ನು ಪಡೆದು ಪುನೀತನಾಗಿದ್ದೇನೆ. ಈ ಸಮಯ ನನಗೆ ನಿಮ್ಮಿಂದ ಏನು ಅಪ್ಪಣೆ ಅಜ್ಜಾ?” ಎಂದು ಕೇಳಿದನು.

ಭೀಷ್ಮಾಚಾರ್ಯರು ಹರಸುತ್ತಾ “ವತ್ಸಾ! ನೀನು ಜ್ಞಾನಿಯಾಗು, ತಪೋಧನನಾಗು, ದಾನಶೀಲನಾಗು. ಯಾಕೆಂದರೆ ವಿದ್ಯಾವಂತರು, ತಪಸ್ವಿಗಳು, ದಾನಿಗಳು ಲೋಕಪೂಜ್ಯರಾಗಿ ಇಹದಲ್ಲೂ ಪರದಲ್ಲೂ ಸೌಖ್ಯವನ್ನು ಹೊಂದುತ್ತಾರೆ. ಅನ್ನದಾನ ಮಾಡಿದರೆ ಪ್ರಾಣದಾನ ಮಾಡಿದ ಹಾಗೆ. ವೇದಾಧ್ಯಯನ, ಇಂದ್ರಿಯ ನಿಗ್ರಹ, ವೈರಾಗ್ಯಗಳಿಗೆ ಸಮಾನವಾದ ಸ್ಥಾನವನ್ನು ದಾನವೂ ಪಡೆದಿದೆ. ಹಾಗಾಗಿ ರಾಜನಾದ ನೀನು ಸತ್ಪಾತ್ರರನ್ನು ಗುರುತಿಸಿ ದಾನ ನೀಡುತ್ತಿರು. ಹೇಗೆ ಬಿತ್ತದೆ ಬಯಸಿದ ಬೆಳೆಯಾಗುವುದಿಲ್ಲವೋ ಹಾಗೆಯೆ ಸತ್ಕಾರ್ಯ ಮಾಡದೆ ಪುಣ್ಯ ಪ್ರಾಪ್ತವಾಗದು. ದಾನದಿಂದ ಭೋಗಯೋಗ್ಯವಾದುದು, ವೃದ್ಧರ ಸೇವೆಯಿಂದ ಪ್ರಜ್ಞೆ, ಅಹಿಂಸೆಯಿಂದ ದೀರ್ಘ ಆಯಸ್ಸು ಪ್ರಾಪ್ತವಾಗುತ್ತದೆ. ಈ ವಿಚಾರಗಳೆಲ್ಲವನ್ನು ಈ ಹಿಂದೆ ಒಮ್ಮೆ ವ್ಯಾಸರು ಮೈತ್ರೇಯರಿಗೆ ಹೇಳಿದ್ದರು. ಆದುದರಿಂದ ನಿನ್ನ ಉತ್ತರೋತ್ತರ ಶ್ರೇಯಸ್ಸಿಗಾಗಿ ದಾನ ಮಾಡು, ಧರ್ಮನಿಷ್ಠರ ಸೇವೆ ಮಾಡು, ಅಹಿಂಸಾ ನಿರತನಾಗಿ ಸುಖವಾಗಿ ಬಾಳು. ಒಳ್ಳೆಯದಾದುದನ್ನು ಮಾಡಬೇಕು, ಆಡಬೇಕು, ಎಣಿಸಬೇಕು. ಯಾವ ಪ್ರಾಣಿಯೇ (ಪ್ರಾಣ ಇರುವುದು ಪ್ರಾಣಿ) ಆಗಿರಲಿ ಅದು ಹುಟ್ಟುವಾಗಲೆ ಅದರ ಸ್ವಭಾವ ಮತ್ತು ಕಷ್ಟ ಸುಖಗಳು ನಿರ್ಧಾರಿತವಾಗಿರುತ್ತವೆ. ಆದರೆ ಕಷ್ಟ ಸುಖಗಳೇನು ಬಂದರೂ ಅದರ ಪ್ರಭಾವ ನಾವು ಮಾಡುವ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಜಾಗರೂಕರಾಗಿರಬೇಕು. ಸದಾ ಸತ್ಕರ್ಮದ ಮೇಲೆ ವಿಶ್ವಾಸವಿರಿಸಿ ಶೃದ್ಧೆಯನ್ನು ಮೈಗೂಡಿಸಿಕೊಳ್ಳಬೇಕು. ಕಾಲವು ಬುದ್ಧಿಯನ್ನು ಪ್ರವೇಶಿಸಿ ಅದು ಧರ್ಮಾಧರ್ಮಗಳಲ್ಲಿ ಪ್ರವರ್ತಿಸುವಂತೆ ಮಾಡಬಲ್ಲುದು. ಆದರೆ ಒಂದು ವಿಚಾರವನ್ನು ಸ್ಪಷ್ಟವಾಗಿ ತಿಳಿದಿರು – ಯಾವಾಗಲೂ ಜಯವಾಗುವುದು ಮಾತ್ರ ಧರ್ಮಕ್ಕೆ, ಅದರಿಂದಲೆ ಶ್ರೇಯಸ್ಸು ಪ್ರಾಪ್ತವಾಗುತ್ತ ಹೋಗುತ್ತದೆ.”

ಹೀಗೆ ಧರ್ಮರಾಯನು ಅಜ್ಜ ಭೀಷ್ಮಾಚಾರ್ಯರಿಂದ ಅನುಗ್ರಹಿತನಾಗಿ ಸಂದೇಹಗಳನ್ನು ಪರಿಹರಿಸಿಕೊಂಡು, ತಿಳಿಯಬೇಕಾದುದೆಲ್ಲವನ್ನೂ ತಿಳಿದುಕೊಂಡು ಕೃತಕೃತ್ಯನಾದನು. ಪಿತಾಮಹನಿಗೆ ವಂದಿಸಿ ಶ್ರೀಕೃಷ್ಣನ ಜೊತೆ ಹಸ್ತಿನಾವತಿಗೆ ತೆರಳಲು ಅನುಜ್ಞೆಯನ್ನು ಬೇಡಿದನು.

ಆಗ ಭೀಷ್ಮಾಚಾರ್ಯರು “ಧರ್ಮಕುಮಾರಾ! ನೀನು ರಾಜ್ಯ ರಾಜಧಾನಿಗೆ ಹೊರಡು. ರಾಜನಿಲ್ಲದೆ ಅರಾಜಕತೆ ಆಗಬಾರದು. ನನ್ನ ಬಗ್ಗೆ ವ್ಯಥೆ ಪಡಬೇಡ. ಕೆಲ ದಿನಗಳ ಬಳಿಕ ಸೂರ್ಯ ಉತ್ತರಕ್ಕೆ ತಿರುಗಿದೊಡನೆ, ಅಂದರೆ ಉತ್ತರಾಯಣ ಆರಂಭವಾದಾಗ ನೀನು ಕೃಷ್ಣನ ಜೊತೆಯಲ್ಲಿ, ಸಪರಿವಾರ ಸಹಿತನಾಗಿ ನನ್ನ ಬಳಿ ಒಮ್ಮೆ ಬಂದು ಹೋಗು. ಅಲ್ಲಿಯವರೆಗೆ ನಾನು ಕಾಲದ ಪ್ರತೀಕ್ಷೆಯಲ್ಲಿರುತ್ತೇನೆ. ನಿನಗೆ ಉತ್ತರೋತ್ತರವಾಗಲಿ” ಎಂದು ಹರಸಿ ಹಾರೈಸಿ ಬೀಳ್ಕೊಟ್ಟರು.

ದಿನಗಳು ಕಳೆಯತೊಡಗಿದವು. ಧರ್ಮರಾಯ ಮಹಾರಾಜನಾಗಿದ್ದಾನೆ. ಒಂದು ಸುದಿನ ಉತ್ತರಾಯಣ ಬಂದೇ ಬಿಟ್ಟಿತು.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page