
ಬೆಂಗಳೂರು: ಮೂಡಬಿದಿರೆ ಅಮಾನತುಗೊಂಡ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಶಿಕ್ಷಕಿ ನೀಡಿದ ಅತ್ಯಾಚಾರ ಆರೋಪ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಈ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಂದೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಮಧ್ಯಂತರ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಇನ್ಸ್‌ಪೆಕ್ಟರ್ ಪರ ವಕೀಲರು, ಮಹಿಳೆಯೊಂದಿಗೆ ಒಪ್ಪಿತ ಸಂಬಂಧವಿತ್ತು ಹಾಗೂ ಅತ್ಯಾಚಾರ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ವಾದಿಸಿದರು. ಆದರೆ ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಪೀಠ, ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿರುವುದು ಅಧಿಕಾರದ ದುರುಪಯೋಗವಲ್ಲವೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿತು.
ಸಂತ್ರಸ್ತೆ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಎಫ್ಐಆರ್ ದಾಖಲಾಗಿದೆ. ಇನ್ಸ್‌ಪೆಕ್ಟರ್ ಸಂದೇಶ್ ಮೇಲೆ ಇದಕ್ಕೂ ಮೊದಲು ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪಗಳು ಕೇಳಿಬಂದಿದ್ದು, ಇತ್ತೀಚೆಗೆ ಕೆಲವು ಪ್ರಕರಣಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು.
ಶಿಕ್ಷಕಿ ದೂರಿನಲ್ಲಿ, 2018ರಿಂದ 2023ರವರೆಗೆ ಹಲವು ಸಂದರ್ಭಗಳಲ್ಲಿ ಬೆದರಿಕೆ ಮತ್ತು ಒತ್ತಡದ ಮೂಲಕ ನಿರಂತರವಾಗಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ. ಜೀವಭಯ ಮತ್ತು ಕುಟುಂಬದ ಗೌರವದ ಕಾರಣದಿಂದ ಇದುವರೆಗೆ ಮೌನವಾಗಿದ್ದೆ ಎಂದು ಅವರು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.





















































































