
ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಋತುಚಕ್ರದ ಅವಧಿಯಲ್ಲಿ ಒಂದು ದಿನ ವೇತನ ಸಹಿತ ರಜೆ ನೀಡುವ ನೀತಿ ಸಂಬಂಧ, ಉದ್ಯೋಗದಾತರಿಗೆ ಶೋಕಾಸ್ ನೋಟಿಸ್ ನೀಡಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದೆ.
2025ರ ನವೆಂಬರ್ 20ರಂದು ಕಾರ್ಮಿಕ ಇಲಾಖೆ ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವ ನೀತಿ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್ ಸಂಘ ಸಲ್ಲಿಸಿದ ಅರ್ಜಿ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದೆ.
ಅರ್ಜಿದಾರರ ಪರ ವಕೀಲರು, ಈ ನೀತಿ ಉದ್ಯಮಿಗಳಿಗೆ ಹಾನಿಕಾರಕವಾಗಿದ್ದು, ಶೋಕಾಸ್ ನೋಟಿಸ್‌ಗಳಿಂದ ಸಮಸ್ಯೆ ಹೆಚ್ಚುತ್ತಿದೆ ಎಂದು ವಾದಿಸಿದರು. ಆದರೆ, ಮಹಿಳಾ ವಕೀಲರ ಪರವಾಗಿ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ತಿಳಿಸಲಾಯಿತು.


ವಾದಗಳನ್ನು ಆಲಿಸಿದ ನ್ಯಾಯಪೀಠ, ವಿಚಾರಣೆ ನಡೆಯುತ್ತಿರುವ ವೇಳೆ ನೋಟಿಸ್ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಶೋಕಾಸ್ ನೋಟಿಸ್ ನೀಡದಂತೆ ಸೂಚಿಸಿ, ಪ್ರಕರಣವನ್ನು ಮಾ.24ಕ್ಕೆ ಮುಂದೂಡಿತು.







