27.4 C
Udupi
Sunday, March 22, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 461

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೪೯೧ ಮಹಾಭಾರತ

ಭೀಷ್ಮಾಚಾರ್ಯರು ಧರ್ಮರಾಯನ ಪ್ರಶ್ನೆ ಕೇಳಿ ಸಂತೋಷಗೊಂಡರು. “ಅಯ್ಯಾ ಕುಮಾರಾ! ನೀನು ಕೇಳಿರುವ ಜಿಜ್ಞಾಸೆ ಬಹಳ ಸೂಕ್ಷ್ಮವಾದ ವಿಚಾರ. ಅವಲಂಬನೆ ಬಂಧನವಾಗಿ ಮನುಷ್ಯನನ್ನು ಹಿಡಿದಿಟ್ಟುಕೊಂಡಿರುತ್ತದೆ ನಿಜ. ಅದರಿಂದ ಮುಕ್ತಿ ಸಾಧ್ಯವೇ? ಎಂದು ಕೇಳಿರುವೆ. ನಿನ್ನ ಜ್ಞಾನ ವೃದ್ಧಿಗಾಗಿ ಪೂರಕವಾದ ಒಂದು ಕಥೆಯನ್ನು ಹೇಳುತ್ತೇನೆ ಕೇಳು.

ಹಿಂದೆ ಕಾಶ್ಯಪ ಎಂಬ ಹೆಸರಿನ ಋಷಿಯೋರ್ವನಿದ್ದನು. ಒಂದು ದಿನ ಆತ ತನ್ನ ಪುತ್ರನೊಂದಿಗೆ ನಡೆದುಕೊಂಡು ಹೋಗುವಾಗ ಶ್ರೀಮಂತನಾದ ಓರ್ವ ವೈಶ್ಯನ ರಥವೊಂದು ಎದುರಿನಿಂದ ಬರುತ್ತಿತ್ತು. ಕಾಶ್ಯಪನ ಮಗ ಅದೇನು ಚೇಷ್ಟೆ ಮಾಡಿದನೊ! ಮಾರ್ಗದ ಮಧ್ಯಕ್ಕೆ ತಕ್ಷಣ ತಿರುಗಿ ಆಕಸ್ಮಿಕವಾಗಿ ರಥದಡಿಗೆ ಬಿದ್ದು ಬಿಟ್ಟನು. ಭಾರವಾದ ರಥದ ಚಕ್ರಗಳು ಆ ಮಗುವಿನ ಮೇಲೆ ಹರಿದು ಹೋದ ಪರಿಣಾಮ ಪ್ರಾಣ ಪಕ್ಷಿಯೆ ಹಾರಿ ಹೋಯಿತು.

ಋಷಿ ಕಾಶ್ಯಪರಿಗೆ ತನ್ನ ಮಗನ ದುರ್ಮರಣವನ್ನು ಕಂಡು ಕಡು ದುಃಖ ಒತ್ತರಿಸಿ ಬಂದು, ಇನ್ನು ಬದುಕುವುದು ಬೇಡ ಎಂಬಷ್ಟು ಜಿಗುಪ್ಸೆ ಮೂಡಿತು. ತಾನಿನ್ನು ಸಾಯ ಬೇಕು, ಪ್ರಾಣತ್ಯಾಗ ಮಾಡುವುದಕ್ಕೆ ಸಿದ್ಧ ಎಂದು ದೃಢ ಸಂಕಲ್ಪ ತಾಳಿದನು. ಮಗನ ಬಗ್ಗೆ ಕಾಶ್ಯಪನಿಗಿದ್ದ ಮಮಕಾರ, ಪ್ರೀತಿ, ಅವಲಂಬನೆ ಕಂಡು, ಮಗನಿಲ್ಲದೆ ಬದುಕಲಾರೆ ಎಂಬಂತಾಗಿದ್ದ ಕಾಶ್ಯಪನ ಸ್ಥಿತಿ ಕಂಡು ದೇವರಾಜ ಇಂದ್ರನಿಗೆ ಕರುಣೆದೋರಿತು. ತಕ್ಷಣ ಆತ ನರಿಯ ರೂಪ ತಾಳಿ ಕಾಶ್ಯಪನಿದ್ದಲ್ಲಿಗೆ ಬಂದನು.

ರೋದಿಸುತ್ತಿದ್ದ ಋಷಿಯನ್ನು ಕಂಡು “ಅಯ್ಯಾ ಮಹಾತ್ಮನೇ! ನಿನ್ನನ್ನು ನೋಡಿ ಗೌರವವೂ, ಅಭಿಮಾನವೂ ಮೂಡಿದೆ. ನೀನು ಸಮ್ಮತಿ ನೀಡಿದರೆ ಕೆಲವೊಂದು ವಿಚಾರಗಳನ್ನು ನಿನ್ನಲ್ಲಿ ಚರ್ಚಿಸುವ ಮನಸ್ಸಾಗಿದೆ. ಎಲ್ಲಾ ಜೀವರುಗಳಲ್ಲಿ ಮನುಷ್ಯ ಶ್ರೇಷ್ಟನಂತೆ. ಅದರಲ್ಲೂ ಜ್ಞಾನ ಸಂಪನ್ನ, ಶ್ರೋತ್ರಿ, ವೇದ ವೇದಾಂಗ ಪಾರಂಗತನಾದ ನೀನು ಸರ್ವಶ್ರೇಷ್ಟನಾಗಿರುವೆ. ಇಷ್ಟು ಉನ್ನತವಾದ ಜನ್ಮ ಪಡೆದ ಭಾಗ್ಯಶಾಲಿ ನೀನು ಪ್ರಾಣ ತ್ಯಾಗಕ್ಕೆ ಹೊರಟಿರುವೆಯಾ? ಇನ್ನೊಮ್ಮೆ ಮನುಷ್ಯ ಜನ್ಮ ಬೇಕೆಂದರೆ ಸುಲಭವಾಗಿ ಸಿಗಬಹುದು ಎಂಬ ವಿಶ್ವಾಸ ನಿ‌ನಗಿದೆಯಾ? ಎಷ್ಟೊ ಜನ್ಮದ ಸುಕೃತ ಫಲವಾಗಿ ನಿನ್ನ ಆತ್ಮಕ್ಕೆ ಮಾನವ ಶರೀರ ಪ್ರಾಪ್ತವಾಗಿದೆ. ಅದನ್ನು ಕೈಯಾರೆ ನಾಶ ಪಡಿಸಲು ನಿರ್ಧರಿಸಿರುವೆಯಾ? ನಿನಗೆ ನಿನ್ನ ಈ ಉತ್ತಮ ಶರೀರದ ಮೇಲೆ ಗೌರವ, ಅಭಿಮಾನ ಇಲ್ಲದೆ ಹೋಯಿತೆ? ಗಟ್ಟಿ ಮುಟ್ಟಾದ ಶರೀರ, ಗೌರವಾರ್ಹವಾದ ದೇಹಕಾಂತಿ, ಸುಂದರವಾದ ರೂಪ, ಅಮೂಲ್ಯವಾದ ಜ್ಞಾನ ಇವೆಲ್ಲಾ ನಿನಗಿದೆ. ಒಮ್ಮೆ ಸರಿಯಾಗಿ ನನ್ನನ್ನು ನೋಡು, ಕೈಗಳಿದ್ದರೂ ನಿನ್ನಂತೆ ಬಳಸಲಾಗದು. ಕಾಲು ಕೈಗಳಿಗೆ ವ್ಯತ್ಯಾಸವಿಲ್ಲದ ಸ್ಥಿತಿ ನನ್ನದು. ನಿನಗೆ ಜ್ಞಾನ ಮತ್ತು ಬುದ್ದಿಯಿದೆ. ಚಳಿ, ಮಳೆ ಮತ್ತು ಬಿಸಿಲಿನಿಂದ ನಿನ್ನನ್ನು ರಕ್ಷಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬಲ್ಲೆ. ನಾನು ಬೇಟೆಯಾಡಿ ಪ್ರಾಣಿಗಳ ಹಸಿ ಮಾಂಸವನ್ನು ತಿನ್ನಬೇಕು. ಅಂದಿನ ಆಹಾರ ಅಂದೇ ಹುಡುಕಿ, ಸಾಧಿಸಿ ತಿನ್ನಬೇಕು. ನೀನೋ ಉತ್ತಮ ಆಹಾರವನ್ನು ಶೇಖರಿಸಿಡಲು ಶಕ್ತನು. ಬೇಕಾದಂತೆ ರುಚಿವತ್ತಾಗಿ ಸಿದ್ದಪಡಿಸಿ ತಿನ್ನಬಲ್ಲೆ. ವಿದ್ಯೆ ಕಲಿತು ಸುಜ್ಞಾನಿಯೂ ಆಗಿರುವೆ. ನನಗೆ ಇದೆಲ್ಲಾ ತುಂಬಾ ದೂರದ ಮಾತು. ಕನಿಷ್ಟ ಮೈ ತುರಿಸಿದರೂ ಮರವೆಲ್ಲಿ, ಬಂಡೆಯೆಲ್ಲಿ ಎಂದು ನೋಡಿ ಮೈಯುಜ್ಜಿಕೊಳ್ಳಬೇಕು. ಒಂದು ಮುಳ್ಳು ಚುಚ್ಚಿದರೆ ನೋವು ಸಹಿಸಿಕೊಂಡು, ಕೊಳೆತು ಕೀವು ತುಂಬಿ ತಾನಾಗಿ ಜಾರಿ ಹೋಗುವವರೆಗೆ ನೋವುಣ್ಣಬೇಕು. ನೀನಾದರೆ ಚುಚ್ಚಿದ ಕೂಡಲೆ ಅದನ್ನು ಹೊರತೆಗೆಯಬಲ್ಲೆ. ನಮಗೆ ತಿನ್ನುವುದೂ ಕಷ್ಟ, ಮಲಗುವುದು ಇನ್ನೂ ಅಪಾಯಕಾರಿ. ಹೆಬ್ಬಾವುಗಳು, ನಮಗಿಂತ ಬಲಿಷ್ಟ ಪ್ರಾಣಿಗಳು ಬಂದು ಕೊಂದು ನುಂಗಿ ಬಿಡುವ ಅಪಾಯವಿದೆ. ನಿನಗೆ ಬೇಕಾದ ಸುಭದ್ರ ರಕ್ಷಣಾ ವ್ಯವಸ್ಥೆಯಿದೆ. ಅತಿ ಬಲಿಷ್ಟ ಪ್ರಾಣಿಗಳು ಬಂದರೂ ಆಯುಧಧಾರಣೆ ಮಾಡಿ ಕೊಲ್ಲಬಲ್ಲೆ. ಒಮ್ಮೊಮ್ಮೆ ನನ್ನ ಈ ದುಸ್ಥಿತಿ ಕಂಡಾಗ ನನಗೆ ಈಗಲೆ ಸತ್ತು ಬಿಡೋಣ ಎಂಬ ಭಾವ ಮೂಡುತ್ತದೆ. ಏನು ಮಾಡೋಣ ಹೇಳು ನನಗೆ ಪೂರ್ವ ಜನ್ಮದ ಸ್ಮರಣೆ ಹಾಗೆ ಉಳಿದು ಬಿಟ್ಟಿದೆ. ನನ್ನ ಹಿಂದಿನ ಜನ್ಮದಲ್ಲಿ ಸುಕೃತ ಫಲದಿಂದ ನಿನ್ನಂತೆಯೆ ಮನುಷ್ಯನಾಗಿ ಜೀವಿಸಿದ್ದೆ. ಜ್ಞಾನ ವಿಶೇಷ ಬಲದಿಂದ ತರ್ಕ ಪಂಡಿತನೂ ಆಗಿದ್ದೆ. ಆದರೆ ದುರಾದೃಷ್ಟವೊ ಏನೋ ತರ್ಕ ಬುದ್ಧಿಯಿಂದ ಎಲ್ಲದಕ್ಕೂ ವಿಮರ್ಷೆ ಮಾಡುತ್ತಾ ನಾಸ್ತಿಕನಾಗಿ ಹೋದೆ. ಜನರನ್ನು ನನ್ನಂತೆಯೆ ನಾಸ್ತಿಕರಾಗಲು ಬೋಧಿಸುತ್ತಿದ್ದೆ. ವಾಚಾಳಿಯಾಗಿ ಮನಬಂದಂತೆ ಮಾತನಾಡುತ್ತಿದ್ದೆ. ಎಲ್ಲರನ್ನೂ, ಎಲ್ಲವನ್ನೂ ಸಂಶಯ ದೃಷ್ಟಿಯಿಂದ ನೋಡುತ್ತಿದ್ದೆ. ಮೂರ್ಖನಾಗಿ ನಾನೊಬ್ಬ ಸರ್ವ ವಿಚಾರ ಬಲ್ಲ ಮಹಾಜ್ಞಾನಿ ಎಂಬ ಭ್ರಮೆಗೊಳಗಾಗಿದ್ದೆ. ನನಗೆ ಪ್ರಾಪ್ತವಾಗಿದ್ದ ಶ್ರೇಷ್ಟ ಶರೀರ ಮನುಷ್ಯ ಶರೀರ ಮತ್ತು ಜ್ಞಾನ ಬಲವನ್ನು ದುರುಪಯೋಗ ಪಡಿಸುತ್ತಾ ಪಾಪಿಯಾಗಿ ಜೀವಿಸಿದೆ. ಪರಿಣಾಮ ಈ ಜನ್ಮದಲ್ಲಿ ನರಿಯಾಗಿ ಹುಟ್ಟಿದ್ದೇನೆ. ನನಗೂ ನಿನ್ನಂತೆಯೆ ಬಾಯಿಯಿದೆ ಆದರೆ ಮಾತನಾಡಲಾರೆ, ಬೇಕಾಗಿರುವುದನ್ನು ಕೇಳಿ ಪಡೆಯಲಾರೆ. ನೀನು ಸರ್ವ ವಿಧಾನದಿಂದಲೂ ಸುಖಿಯಾಗಿರುವೆ. ಅಂಗವೈಕಲ್ಯಗಳಾಗಲಿ, ರೋಗಗಳಾಗಲಿ ನಿನಗಿಲ್ಲ. ದೇವತಾನುಗ್ರಹದಿಂದ ಬುದ್ಧಿ ಮಾಂದ್ಯನಲ್ಲ. ಹೀಗಿದ್ದೂ ಪುಣ್ಯ ಫಲ ವಿಶೇಷದಿಂದ ಪ್ರಾಪ್ತವಾದ ನಿನ್ನ ಈ ಉತ್ತಮ ಶರೀರವನ್ನು ನಷ್ಟ ಗೊಳಿಸಲು ಬಯಸುತ್ತಿರುವೆಯಲ್ಲಾ? ನಿನ್ನಷ್ಟು ಮೂರ್ಖರು ಯಾರಿರಬಹುದು. ನನಗೂ ನನ್ನ ಹೀನಾಯ ಸ್ಥಿತಿಯನ್ನು ಕಂಡು ಸತ್ತು ಈ ಪರದಾಟದಿಂದ ಮುಕ್ತನಾಗೋಣ ಅನಿಸುತ್ತದೆ. ಹಾಗೆಂದು ಸಾಯುವ ಪ್ರಯತ್ನ ಮಾಡೋಣವೆ? ಅದು ಮಹಾ ಪಾತಕ. ಹಾಗೆ ಮಾಡಲು ಹೊರಟು ಇನ್ನೂ ಹೀನಾಯವಾದ ಜನ್ಮ ಪ್ರಾಪ್ತವಾದರೆ? ಈಗ ನರಿಯಾಗಿ ನಾನು ಎಲ್ಲೆಂದರಲ್ಲಿ ಮನಬಂದಂತೆ ತಿರುಗಾಡಬಲ್ಲೆ. ಹತ್ಯಾದೋಷ ನನಗೊದಗಿ ಮುಂದೆ ಹುಳವೋ, ಹಾವೋ ಆಗಿ ಹುಟ್ಟಿದರೆ ಆಗ ಇನ್ನೂ ನಿಕೃಷ್ಟ ಸ್ಥಿತಿ ನನ್ನದಾದೀತು ಎಂಬ ಭಯವಿದೆ. ಯಾಕೆಂದರೆ ನನಗೆ ಪೂರ್ವ ಸ್ಮರಣೆಯಿದೆಯೆ ಹೊರತು ಭವಿಷ್ಯದ ಜ್ಞಾನವಿಲ್ಲ. ಒಂದು ವೇಳೆ ಸ್ಪಷ್ಟವಾಗಿ ಮುಂದೆ ನನ್ನ ಗತಿಯೇನೆಂದು ತಿಳಿದಿದ್ದರೆ ಈ ಕ್ಷಣವೆ ಸಾಯಲು ಸಿದ್ಧನಿದ್ದೇನೆ. ಆದರೆ ನನ್ನ ಈ ರೀತಿಯ ಜನ್ಮದ ಪೂರ್ಣ ಕರ್ಮ ಫಲ ಅನುಭವಿಸದೆ ಸಾಯಲಾದೀತೆ? ಅನುಭವಿಸಬೇಕಲ್ಲವೆ? ಹಾಗಾಗಿ ಇನ್ನೂ ಬದುಕಿದ್ದೇನೆ. ನೀನಾದರೆ ಸುಜ್ಞಾನಿಯಾಗಿದ್ದು ಕರ್ಮ ಫಲ ಮುಕ್ತನಾಗಿ, ದೇವತಾ ಪ್ರೀತನಾಗಿ ಬದುಕಿ ಪಾಪದ ಭಾರವನ್ನು ಕರಗಿಸಬಹುದು. ಮಹಾ ಜ್ಞಾನ ಹೊಂದಿರುವ ನಿ‌ನಗೆ ಸತ್ತ ಮಗ ಮತ್ತೆ ಬದುಕಲಾರ ಎಂದು ಗೊತ್ತಿದ್ದರೂ ಅನಾವಶ್ಯಕವಾಗಿ ಸತ್ತು ಏನು ಸಾಧಿಸುವೆ? ಆಯುಷ್ಯವಿರುವಷ್ಟು ಕಾಲ ಬದುಕಿದ್ದು ತಪಸ್ಸನ್ನಾಚರಿಸಿ ಅಥವಾ ಇನ್ಯಾವುದಾದರು ಸನ್ಮಾರ್ಗದಿಂದ ಪರಮೋಚ್ಚವಾದ ದಿವ್ಯ ಜ್ಞಾನ ಪಡೆಯಬಹುದು. ನನಗೇನಾದರು ಇನ್ನೊಮ್ಮೆ ಮಾನವ ಜನ್ಮ ದೊರೆತರೆ ಸದುಪಯೋಗ ಪಡಿಸಿ ತಿಳಿಯಬೇಕಾದುದೆಲ್ಲವನ್ನೂ ತಿಳಿದು, ಪರಿತ್ಯಜಿಸಬೇಕಾದುದೆಲ್ಲವನ್ನೂ ತ್ಯಾಗ ಮಾಡಿ ಬಿಡುತ್ತೇನೆ. ಮುಕ್ತಿಗಾಗಿ ತಪಗೈದು ಸಾಧಕನಾಗುತ್ತೇನೆ.” ಎಂದಿತು.

ಋಷಿ ಕಾಶ್ಯಪನಿಗೆ ವಿಚಿತ್ರವಾಯಿತು. ಕೇವಲ ಒಂದು ಕಾಡ ನರಿ ಇಷ್ಟು ಆಳ ಜ್ಞಾನ ಹೊಂದಿರಲು ಸಾಧ್ಯವೆ? ಎಂದು ತನ್ನ ದಿವ್ಯ ದೃಷ್ಟಿಯಿಂದ ಅವಲೋಕಿಸಿದಾಗ ಅದು ನರಿಯಲ್ಲ ಬದಲಾಗಿ ದೇವರಾಜ ಇಂದ್ರನೆಂದು ತಿಳಿಯಿತು. ತನ್ನ ಮೇಲೆ ಕೃಪೆದೋರಿ ತನ್ನ ಕಣ್ತೆರೆಸಿ ದಿವ್ಯೋಪದೇಶ ನೀಡಿದ್ದಕ್ಕಾಗಿ ನಮಿಸಿ ಕೃತಜ್ಞತೆ ಸಲ್ಲಿಸಿದನು. ಮಗನ ಸಾವಿಗೆ ಕಾರಣವಾದ ವೈಶ್ಯ ಮತ್ತು ಆತನ ರಥದ ಮೇಲೆ ಕೋಪಗೊಳ್ಳದೆ ಕ್ಷಮಿಸಿದನು. ಮಗನ ಉತ್ತರಕ್ರಿಯೆ ನಡೆಸಿ ಬಳಿಕ ಪ್ರಶಾಂತ ಸ್ಥಳ ಹುಡುಕಿ ತಪೋ ನಿರತನಾದನು.

ಮಗಾ ಧರ್ಮಜಾ! ಈ ಕಥೆಯಲ್ಲಿ ಜ್ಞಾನಿಯಾಗಿದ್ದರೂ ಪ್ರಜ್ಞೆ ಮತ್ತು ವಿವೇಕಹೀನನಾಗಿ ಋಷಿ ಕಾಶ್ಯಪ ಪುತ್ರ ವ್ಯಾಮೋಹಕ್ಕೆ ಅವಲಂಬಿತನಾಗಿ ಹೋಗಿದ್ದ. ಯಾವಾಗ ಆತನಿಗೆ ಪ್ರಜ್ಞೆ ಮತ್ತು ವಿವೇಕ ಇಂದ್ರನಿಂದಾಗಿ ಪ್ರಾಪ್ತವಾಯಿತೊ ಆಗ ಆತ ಆತ್ಮೋನ್ನತಿಯ ದಾರಿಯನ್ನು ಅವಲಂಬಿಸಿ ಹೊರಟು ಹೋದನು. ಕ್ಷಣಿಕ ಸಂತೋಷ, ಮತ್ತು ತಾತ್ಕಾಲಿಕ ಸಂಬಂಧಗಳನ್ನು ಅವಲಂಬಿಸದೆ, ಸತ್ಕಾರ್ಯ, ಧರ್ಮಮಾರ್ಗ ಅವಲಂಬಿಸುವುದು ಸದ್ಗತಿಗೆ ಸೋಪಾನ. ನೀನು ರಾಜನಾಗಿರುವೆ. ರಾಜ ಧರ್ಮ ಪಾಲಿಸುತ್ತಾ, ಅಧರ್ಮ, ಅನ್ಯಾಯ, ಅಸತ್ಯ, ಅನಾಚಾರಗಳಿಗೆ ಎಡೆ ನೀಡದೆ ನಿನ್ನ ಕರ್ತವ್ಯ ಪಾಲಿಸಿದರೆ ಅದು ನಿನಗೆ ಶ್ರೇಷ್ಟ ತಪಸ್ಸಾಗುತ್ತದೆ. ಯಾರೆ ಆಗಿರಲಿ, ಜನಸಾಮಾನ್ಯರು ಆಗಿದ್ದರೂ ಧರ್ಮ ಜೀವನ ನಡೆಸಿದರೆ, ಸತ್ಕರ್ಮ ಮಾಡುತ್ತಾ ಬದುಕಿದರೆ ಅಂತಹ ಜೀವನ ಮಾರ್ಗ ಅವಲಂಭಿಸುವ ಪ್ರಜಾಜನರಿಗೂ ಶ್ರೇಯಸ್ಸಾಗುತ್ತದೆ” ಎಂದು ವಿವರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page