
ನಟ ಕಿಚ್ಚ ಸುದೀಪ್ ಅವರು ತಮ್ಮ ನೆಲ, ಜಲ ಹಾಗೂ ಭಾಷೆಯ ಮೇಲಿನ ಅಪಾರ ಅಭಿಮಾನಕ್ಕೆ ಮತ್ತೊಮ್ಮೆ ಸಾಕ್ಷಿ ನೀಡಿದ್ದಾರೆ. ಕನ್ನಡ ಭಾಷೆ ಹಾಗೂ ನಾಡಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅವಮಾನವಾದರೆ ಅವರು ಮೌನವಾಗಿರುವುದಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಹಿಂದೆಯೂ ಪರಭಾಷಿಗರು ಕನ್ನಡವನ್ನು ತಪ್ಪಾಗಿ ಉಚ್ಚರಿಸಿದಾಗ ತಿದ್ದಿದ್ದ ಸುದೀಪ್, ಇದೀಗ ಕನ್ನಡ ಬಾವುಟಕ್ಕೆ ಅವಮಾನ ನಡೆದಿದೆ ಎನ್ನಲಾದ ಸ್ಥಳದಲ್ಲೇ ಬಾವುಟ ಹಾರಿಸುವ ಮೂಲಕ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
ಶಬರಿಮಲೆ ಯಾತ್ರೆಗೆ ತೆರಳುವ ವೇಳೆ ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದ ಬಾವುಟ ಹೊಂದಿದ್ದ ವಾಹನಗಳನ್ನು ಅಡ್ಡಗಟ್ಟಿ, ಬಾವುಟಗಳನ್ನು ತೆಗೆಸಲಾಗಿದೆ ಎಂಬ ಘಟನೆಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದವು. ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ಅವಮಾನ ನಡೆದಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಘಟನೆ ನಡೆದ ಕೆಲವೇ ವಾರಗಳಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಪ್ರತಿಕ್ರಿಯೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಜನವರಿ 25ರಂದು ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಡೆದ ಕರ್ನಾಟಕ ಬುಲ್ಡೋಜರ್ಸ್ ಮತ್ತು ಭೋಜ್ಪುರಿ ದಬಾಂಗ್ ನಡುವಿನ ಪಂದ್ಯ ಮುಗಿದ ಬಳಿಕ, ಅವಮಾನ ನಡೆದ ಜಾಗದಲ್ಲೇ ಕನ್ನಡ ಬಾವುಟ ಹಾರಿಸಿ ಗಮನ ಸೆಳೆದಿದ್ದಾರೆ.
ಅದೇ ದಿನ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ತನ್ನ ಮೂರನೇ ಪಂದ್ಯವನ್ನೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. 20 ಓವರಿನಲ್ಲಿ 202 ರನ್ ಗಳಿಸಿದ ಬುಲ್ಡೋಜರ್ಸ್ಗೆ ಎದುರಾಳಿ ತಂಡ 184 ರನ್ಗೆ ಆಲ್ ಔಟ್ ಆಗಿದ್ದು, ಈ ಮೂಲಕ ಕರ್ನಾಟಕ ತಂಡ ಭರ್ಜರಿ ಜಯ ಸಾಧಿಸಿದೆ.



















