ಭಾಗ – 459
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೫೯ ಮಹಾಭಾರತ


ಅತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರನ ಎದೆ ಬಡಿತ ಸಾವಿರ ಕುದುರೆಗಳು ರಭಸದಿಂದ ಓಡುವಾಗ ಕೇಳಿಸುವ ಗೊರಸಿನ ಸಪ್ಪಳದಂತೆ ಬಡಿದಾಡುತ್ತಿದೆ. ತನ್ನ ಉಳಿದ ಒಬ್ಬನೇ ಒಬ್ಬ ಮಗನೂ ಅಳಿದರೆ ಹೇಗೆ ಸಹಿಸಿಕೊಳ್ಳಲಿ ಎಂದು ಸಂಜಯನಲ್ಲಿ ಬೊಬ್ಬಿರಿದು ಅಳತೊಡಗಿದ್ದಾನೆ.
ಸಂಜಯನು “ಮಹಾರಾಜಾ! ಈಗ ಈ ರೀತಿ ರೋದಿಸುವುದರಿಂದ ಫಲವೇನು? ಆದಿಯಲ್ಲಿ ಸಮರ ಆರಂಭಕ್ಕೆ ಮೊದಲು ಪಾಂಡವರು ಪರಿ ಪರಿಯಾಗಿ ಸಂಧಿಗಾಗಿ ಯತ್ನ ಮಾಡಿದಾಗ ಅದು ಅವರ ದೌರ್ಬಲ್ಯ ಎಂದು ತಿಳಿದುಕೊಂಡು ಎಡವಿದ್ದೇ ಈ ಪರಿಣಾಮಕ್ಕೆ ನಾಂದಿಯಾಯಿತು. ಕನಿಷ್ಟ ಐದು ಗ್ರಾಮಗಳಾದರು ಸಾಕು ಎಂಬಷ್ಟು ಬಗ್ಗಿದರೂ ಒಂದಿಂಚು ಭೂಭಾಗವನ್ನೂ ನೀಡಲಾರೆ ಎಂದು ಹಠ ಹಿಡಿಯದಿರುತ್ತಿದ್ದರೆ ಸರ್ವನಾಶ ಆಗುವುದನ್ನು ತಪ್ಪಿಸಬಹುದಿತ್ತು. ಈಗ ಈ ರೀತಿ ಅತ್ತರೆ ಏನು ಪ್ರಯೋಜನ? ಕನಿಷ್ಟ ನೀನಾದರೂ ಬದುಕು, ಮುದಿ ಪ್ರಾಯದ ಹೆತ್ತವರ ಪಾಲಿಗೆ ಆಸರೆಯಾಗು ಎಂಬಂತೆ ಯದುಶ್ರೇಷ್ಠ ಬಲರಾಮ ಸೂಚಿಸಿ, ಸಂಧಿಯನ್ನು ನಾನು ಮಾಡಿಸುವೆ ಎಂದಾಗಲೂ ನಿನ್ನ ಮಗ ಒಪ್ಪುತ್ತಿಲ್ಲ. ಯಾರ ತಪ್ಪಿಗಾಗಿ ನೀನೀಗ ಮರುಗುತ್ತಿರುವೆ? ಪಾಂಡವರಿಗೆ ಮಾಡಿದ ಅನ್ಯಾಯಗಳನ್ನು ಭೀಮ ಪುನರುಚ್ಚರಿಸಿದರೂ ನಿನ್ನ ಮಗ ದುರ್ಯೋಧನನಿಗೆ ಪಾಪ ಪ್ರಜ್ಞೆ ಕಾಡುತ್ತಿಲ್ಲ. ಸಾಯುವುದಕ್ಕಾಗಿ ಪಣ ತೊಟ್ಟವನಂತೆ ವರ್ತಿಸುತ್ತಿದ್ದಾನೆ. ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗ ಬೇಕಲ್ಲವೇ? ನಿರೀಕ್ಷಿತ ಅಶುಭ ಸುದ್ಧಿಯನ್ನು ಕೇಳಲು ಕ್ಷಣಗಣನೆಯನ್ನಷ್ಟೆ ಮಾಡಬೇಕು ಹೊರತು ಅನ್ಯ ಯಾವ ವಾರ್ತೆಯೂ ಬಾರದು” ಎಂದು ಹೇಳಿದನು. ಧೃತರಾಷ್ಟ್ರನಿಗೆ ಯಾರನ್ನು ದೂಷಿಸುವುದಕ್ಕೂ ಅವಕಾಶವಿಲ್ಲದೆ ಮೌನಕ್ಕೆ ಶರಣಾಗ ಬೇಕಾಯಿತು.
ಇತ್ತ ದ್ವೈಪಾಯಣ ಸರೋವರದ ತೀರದಲ್ಲಿ ಗದಾಯುದ್ದದ ಕಿಡಿ ಹತ್ತಿಕೊಂಡಿದೆ. ಭೀಮನ ಘಾತವನ್ನು ಪ್ರತಿಬಂಧಿಸಿ ದುರ್ಯೋಧನನ ಪ್ರತಿ ಘಾತ, ಆತನ ಎಸುಗೆ ತಡೆದು ಭೀಮನ ಹೊಡೆತ. ಬಲವಂತ ಭೀಮನ ಗದಾಘಾತಗಳಿಂದ ಕೌರವನನ್ನು ಕಾಯಲು ಭಗವಂತನೂ ಬರಲಾರನು!
ಇಬ್ಬರೂ ಕುಶಲಿಗರು – ಗದಾಯುದ್ಧ ಪ್ರವೀಣರು. ಪೆಟ್ಟು ಪೆಟ್ಟಿಗೂ ಮೈಯಲುಗಿ, ಕಾಲು ಜಾರಿಸಿ ಮಂಡಿಯೂರಿ ಕುಳಿತು, ಎದೆ ಹಿಮ್ಮುಖವಾಗಿ ಬಾಗಿಸಿ ತಪ್ಪಿಸಿಕೊಳ್ಳುತ್ತಾ, ಸಾವರಿಸಿ ಎದ್ದು ಪ್ರತಿ ಹೋರಾಟ ನಿರತರಾಗಿದ್ದಾರೆ. ಘೋರ ಕಾಂತಾರದಲ್ಲಿ ಸೊಕ್ಕಿದ ಮದಗಜಗಳು ಕಾದಾಡುವಂತೆ ಇವರೀರ್ವರೂ ಹೋರಾಟ ನಿರತರಾಗಿದ್ದಾರೆ. ನೋಡುಗರು ಮೂಕವಿಸ್ಮಿತರಾಗಿ ಸ್ಥಂಭೀಭೂತರಾಗಿದ್ದಾರೆ.
ದುರ್ಯೋಧನ ಮತ್ತು ಭೀಮ ಯಾವ ಮಟ್ಟದ ಉತ್ಕೃಷ್ಟ ಹೋರಾಟ ಮಾಡುತ್ತಿದ್ದಾರೆ ಎಂದರೆ, ಗದಾಯುದ್ಧದ ವೈವಿಧ್ಯ ವರಸೆಗಳು, ನಾನಾ ವಿಧದ ಮಂಡಲಗಳು, ಯಮಕಗಳು, ಚಿತ್ರ ವಿಚಿತ್ರ ಏರು ಮಂದಗತಿ ಮಿಳಿತ ಹೊಡೆದಾಟ ಸಾಗುತ್ತಿದೆ. ಮಧ್ಯೆ ಮಧ್ಯೆ ಬಾಹುಬಲದ ಜೊತೆ ಬುದ್ಧಿಶಕ್ತಿಯೂ ವಿನಿಯೋಗವಾಗುತ್ತಾ ಎದುರಾಳಿಯ ಮತಿಭ್ರಮಣೆಗೊಳಿಸಿ ಕಣ್ತಪ್ಪಿಸಿ ಬೀಳುವ ಬಲಯುತ ಪೆಟ್ಟುಗಳು – ಹೀಗೆ ಒಬ್ಬರನ್ನು ಇನ್ನೊಬ್ಬರು ಮೀರಿಸುತ್ತಾ ಯುದ್ಧ ಪ್ರಾವಿಣ್ಯತೆ ಮೆರೆಯುತ್ತಿದ್ದಾರೆ.
ಬಲರಾಮ ಶಿಷ್ಯರ ಸಮರ ಸಮರಸ – ಸಮಬಲದಿಂದ ಕೌತುಕಪ್ರದವಾಗಿ ಸಾಗುತ್ತಿರಬೇಕಾದರೆ, ದುರ್ಯೋಧನ ತನ್ನ ಚಮತ್ಕಾರದ ವರಸೆಯಿಂದ ಭೀಮನಿಗೆ ಅರಿವಾಗದಂತೆ ಅವನ ನೆತ್ತಿಯ ಮೇಲೆ ಪ್ರಹರಿಸಿಬಿಟ್ಟನು. ಅನಿರೀಕ್ಷಿತವಾಗಿ ನಿಯಮ ಮೀರಿ ಬಿದ್ದ ಹೊಡೆತಕ್ಕೆ ಭೀಮ ತತ್ತರಿಸಿ ಹೋದನು. ತಲೆಯೊಡೆದು ರಕ್ತ ಚಿಮ್ಮಿತು, ಸ್ನಾನಗ್ರಹದಲ್ಲಿ ತಲೆಗೆ ಸುರಿದ ಜಲದಂತೆ ರುಧಿರ ಮುಖ ಮೂತಿಗಳನ್ನು ದಾಟಿ ಮೈಮೇಲೆಲ್ಲಾ ಹರಿಯುತ್ತಾ ಪಾದದವರೆಗೂ ಜಳ ಜಳನೆ ಹರಿದು ಇಳಿಯತೊಡಗಿತು. ಮೂರ್ಛೆ ಬಂದಂತಾದ ಭೀಮ ಓಲಾಡತೊಡಗಿದಾಗ ಕೌರವನ ಗದೆ ಬೀಸಿ ಭೀಮನ ಬೆನ್ನಿಗಪ್ಪಳಿಸಿತು. ಬುಡ ಕಡಿದ ಹೆಮ್ಮರ ಧರೆಗುರುಳಿದಂತೆ ಭೀಮ ದೊಪ್ಪನೆ ಬಿದ್ದು ಬಿಟ್ಟನು. ಈ ತನಕ ಸಂಯಮದಿಂದ ನೋಡುತ್ತಿದ್ದ ಯಮಪುತ್ರ ಧರ್ಮಜನೂ ಹೋ ಎಂದು ಉಸುರುತ್ತಾ ಹೌಹಾರಿ ಎದ್ದನು. ಭೀಮನ ಮುಖ ಮರಳು ಮಣ್ಣಲ್ಲಿ ಹುದುಗಿ ಹೋಗಿದೆ. ಸೆಳೆದು ಬಿಡುತ್ತಿರುವ ಉಸಿರಿನೊಂದಿಗೆ ಮಣ್ಣೂ ಒಳ ಹೊರಗೆ ಸಂಚರಿಸಿ ಹಾರುತ್ತಿದೆ. ಕೌರವ ಮಹದಾನಂದದಿಂದ ಸಂಭ್ರಮಿಸುತ್ತಿದ್ದಾನೆ. ಆಕಾಶ ನೋಡಿ ತನ್ನ ತಮ್ಮ ದುಶ್ಯಾಸನನ ಹೆಸರೆತ್ತಿ ಕೂಗಿ ಕರೆದು “ಹೇ ಸೋದರಾ! ನಿನ್ನ ಉದರ ಬಗೆದ ಭೀಮನ ಸ್ಥಿತಿ ನೋಡು. ನಿನ್ನಣ್ಣ ಇನ್ನೂ ಬದುಕಿದ್ದಾನೆ. ನೀವೆಲ್ಲರಿಗೂ ಆತ ನೀಡಿದ ಹಿಂಸೆಗೆ ಪ್ರತಿಯಾಗಿ ಅದಕ್ಕೂ ಅಧಿಕ ಪೀಡನೆ ನಾನು ನೀಡದೆ ಬಿಡಲಾರೆ.” ಎಂದು ಅಬ್ಬರಿಸುತ್ತಾ ಕುಣಿಯುವಂತೆ ನಡೆದಾಡುತ್ತಾ ಹಂಗಿಸತೊಡಗಿದ್ದಾನೆ.
ಮುಂದುವರಿಯುವುದು…







