
ಉಡುಪಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಸಮಾಜದಲ್ಲಿ ಆತಂಕ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ ವಿಧಿಸುವ ಕುರಿತು ರಾಜ್ಯ ಸರ್ಕಾರ ಡಿಜಿಟಲ್ ನೀತಿ ರೂಪಿಸಲು ಮುಂದಾಗಿರುವ ನಿರ್ಧಾರವನ್ನು ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸ್ವಾಗತಿಸಿದ್ದಾರೆ.
ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ಬಳಕೆ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಪ್ರತಿದಿನವೂ 18 ವರ್ಷದೊಳಗಿನ ಕನಿಷ್ಠ ಇಬ್ಬರು ಮಕ್ಕಳು ಮಾನಸಿಕ ಸಮಸ್ಯೆಗಳೊಂದಿಗೆ ದಾಖಲಾಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಎಂದಿರುವ ಅವರು ಕೆಲ ಮಕ್ಕಳು ಸೋಷಿಯಲ್ ಮೀಡಿಯಾ ಮೂಲಕ ಅಪರಿಚಿತ ವ್ಯಕ್ತಿಗಳ ಸಂಪರ್ಕಕ್ಕೆ ಬಿದ್ದು ಮೋಸ ಹೋಗುತ್ತಿರುವ ಪ್ರಕರಣಗಳೂ ಕಂಡು ಬರುತ್ತಿವೆ. ಆದರೆ ಈ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಸವಾಲಿನ ವಿಷಯವಾಗಬಹುದು. ಮೊಬೈಲ್ ಫೋನ್ ಖಾಸಗಿ ಸ್ವತ್ತಾಗಿರುವುದರಿಂದ ಮಕ್ಕಳು ಅದರಲ್ಲಿ ಏನು ಬಳಸುತ್ತಿದ್ದಾರೆ ಎಂಬುದನ್ನು ಗಮನಿಸುವುದು ಸುಲಭವಲ್ಲ. ಆದ್ದರಿಂದ ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತದ ಸಹಕಾರ ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.
ಈ ನಿಯಮವನ್ನು ಕಾನೂನಿನ ರೂಪದಲ್ಲಿ ಜಾರಿಗೆ ತಂದರೆ ಮುಂದಿನ ಪೀಳಿಗೆಯ ಮೇಲೆ ಉತ್ತಮ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಿನ ಟೀನೇಜರ್‌ಗಳ ಮೇಲೆ ತಕ್ಷಣವೇ ಪರಿಣಾಮ ಬೀರುವುದು ಕಷ್ಟವಾಗಬಹುದು. ಆದರೆ 10 ರಿಂದ 12 ವರ್ಷದ ಮಕ್ಕಳನ್ನು ಈಗಿನಿಂದಲೇ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು ಎಂದು ಡಾ. ಪಿ.ವಿ. ಭಂಡಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.






