
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದು, ಆರ್ಥಿಕ ಶಿಸ್ತು ಕಾಪಾಡುತ್ತಲೇ ಜನರ ನಿರೀಕ್ಷೆಗಳನ್ನು ಪೂರೈಸುವತ್ತ ಗಮನ ಹರಿಸುವ ಸಾಧ್ಯತೆಯಿದೆ. ಗುರುವಾರ ಬೆಳಗ್ಗೆ 10.15ಕ್ಕೆ ಅವರು ರಾಜ್ಯದ ಆಯವ್ಯಯ ಮಂಡಿಸಲಿದ್ದಾರೆ.
ರಾಜಕೀಯ ಹಾಗೂ ಆರ್ಥಿಕವಾಗಿ ಮಹತ್ವ ಪಡೆದಿರುವ ಈ ಬಜೆಟ್‌ನಲ್ಲಿ ಕೇಂದ್ರದ ಆರ್ಥಿಕ ಅನ್ಯಾಯ, ಜಿಎಸ್‌ಟಿ ಪಾಲಿನ ವಿಷಯಗಳೂ ಪ್ರಸ್ತಾಪವಾಗುವ ನಿರೀಕ್ಷೆಯಿದೆ. ಸಾಲದ ಹೊರೆ ಮತ್ತು ಗ್ಯಾರಂಟಿ ಯೋಜನೆಗಳ ನಡುವೆಯೂ ಜನರಿಗೆ ಹೊಸ ಘೋಷಣೆಗಳು ದೊರೆಯುವ ಸಾಧ್ಯತೆ ಇದೆ. ‘ಇಂದಿರಾ ಆಹಾರ ಕಿಟ್’, ಗೃಹಲಕ್ಷ್ಮೀ ಫಲಾನುಭವಿಗಳಿಗೆ ನೆರವು, ಸೀರೆ ವಿತರಣೆ ಹಾಗೂ ವಸತಿ ಯೋಜನೆಗೆ ಆದ್ಯತೆ ನೀಡಬಹುದು. ಮೂಲಸೌಕರ್ಯ ಅಭಿವೃದ್ಧಿ, ಹದಗೆಟ್ಟ ರಸ್ತೆಗಳಿಗೆ ವಿಶೇಷ ಪ್ಯಾಕೇಜ್ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವ ಸಾಧ್ಯತೆ ಇದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸಹ ಹಣ ಮೀಸಲಿಡುವ ನಿರೀಕ್ಷೆಯಿದೆ.
ಈ ಬಾರಿ ಬಜೆಟ್ ಗಾತ್ರವು 4.5 ಲಕ್ಷ ಕೋಟಿ ರೂ. ಮೀರಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಸಮತೋಲನಗೊಳಿಸಲು ಪೆಟ್ರೋಲ್, ಡೀಸೆಲ್ ಸೆಸ್ ಹೆಚ್ಚಳ, ಅಬಕಾರಿ ಸುಂಕ ಹಾಗೂ ಮೋಟಾರು ವಾಹನ ತೆರಿಗೆ ಸೇರಿದಂತೆ ಕೆಲವು ತೆರಿಗೆ ಹೆಚ್ಚಳ ಸಾಧ್ಯತೆಗಳಿವೆ. ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಹೆಚ್ಚುತ್ತಿರುವ ಸಾಲದ ನಡುವೆ ಸಮತೋಲನ ಸಾಧಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಈಗಾಗಲೇ ರಾಜ್ಯದ ಒಟ್ಟು ಸಾಲ 7.5 ಲಕ್ಷ ಕೋಟಿ ರೂ. ದಾಟಿದ್ದು, ಮುಂದಿನ ವರ್ಷದಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇದಲ್ಲದೆ ಸರ್ಕಾರಿ ಆಸ್ತಿಗಳ ನಗದೀಕರಣ ಹಾಗೂ ಲೀಸ್ ಮೊತ್ತ ಪರಿಷ್ಕರಣೆ ಮೂಲಕ ಹೆಚ್ಚುವರಿ ಆದಾಯ ಸಂಗ್ರಹಿಸುವ ವಿಚಾರವೂ ಬಜೆಟ್‌ನಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ.






