ಭಾಗ 444
ಭರತೇಶ ಶೆಟ್ಟಿ , ಎಕ್ಕಾರ್

ಸಂಚಿಕೆ ೪೪೪ ಮಹಾಭಾರತ
ಕೃಷ್ಣನತ್ತ ತಿರುಗಿ ಬಲರಾಮ ನೋಡಿದರೆ, ಆತ ಅಣ್ಣ ತೀರ್ಥಾಟನೆಗೈದು ಬಳಲಿ ಬಂದಿರುವನೆಂದು ಉಪಚರಿಸಲು ಸಿದ್ಧನಾಗಿ ದ್ರೌಪದಿಯ ಐವರು ಪುತ್ರರು, ಸಾತ್ಯಕಿ ಮತ್ತು ಪಾಂಡವರ ಸಮೇತ ನಿಂತಿದ್ದಾನೆ. ಸಹೋದರ ಪ್ರೇಮವನ್ನು ಅರ್ಚಿಸಿ ಅರ್ಪಿಸಲು ಸನ್ನದ್ಧನಾಗಿದ್ದಾನೆ. ಅತ್ತ ತಿರುಗಿ ನೋಡಿದರೆ ಭೀಮ ದುರ್ಯೋಧನರು ಗದಾಯುದ್ದಕ್ಕೆ ಸನ್ನಾಹಗೈಯುತ್ತಾ ಕ್ಷಣಗಣನೆ ನಿರತರಾಗಿದ್ದಾರೆ. ಹೀಗಿರಲು ಮುಗುಳ್ನಗುತ್ತಾ ಕೃಷ್ಣ “ಅಣ್ಣಾ, ತೀರ್ಥ ಯಾತ್ರೆ ಹೇಗಾಯಿತು? ಅವಸರದ ಆಗಮನವಾದರೂ ನಿನ್ನ ದರ್ಶನದಿಂದ ನಮಗೆ ಸಂತೋಷವಾಗಿದೆ. ಸಂಕ್ಷಿಪ್ತವಾಗಿ ಯಾತ್ರೆಯ ವಿಚಾರ ತಿಳಿಸಬಹುದೆ? ಎತ್ತ ಹೋದಿರಿ? ಸಂದರ್ಶಿಸಿದ ಪ್ರಮುಖ ಕ್ಷೇತ್ರಗಳಾವುದು? ತಿಳಿಸಬಹುದೆ? ನನಗೆ ಆ ಬಗ್ಗೆ ಕುತೂಹಲ ಮನ ಮಾಡಿದೆ” ಎಂದನು.
ಬಲರಾಮನು ಸೋದರ ಕೃಷ್ಣನ ಆಸೆಯನ್ನು ತಣಿಸಲು ಹೇಳಲಾರಂಭಿಸಿದನು. “ಕೃಷ್ಣಾ! ಕೌರವ ನಿನ್ನ ಬಳಿ ಹಾಗು ನನ್ನಲ್ಲಿಗೆ ಬಂದು ಸಹಾಯ ಕೇಳಿದ್ದ. ನೀನು ಪಾಂಡವರ ಪಕ್ಷದ ಪಾಲಾದೆ. ನಿನ್ನ ಹಾಗು ನನ್ನ ಸಂಬಂಧ ಅಭೇದ್ಯವಾದುದು. ಮಾತ್ರವಲ್ಲ ಕುಟುಂಬ ಕಲಹದ ಈ ಯುದ್ದದಲ್ಲಿ ಪಾಂಡವರು ಕೌರವರು ಇತ್ತಂಡಗಳೂ ನನಗೆ ಪ್ರಿಯಜನರು ಆಗಿರುವ ಕಾರಣವನ್ನು ಮನಗಂಡು ವೈರಾಗ್ಯ ಮೂಡಿ ತೀರ್ಥಯಾತ್ರೆಗೆ ಹೊರಟು ಹೋಗಿದ್ದೆ. ಸಕಲ ವ್ಯವಸ್ಥೆಗಳೊಂದಿಗೆ ಹಿತೈಷಿಗಳ ಬಳಗ ಸಹಿತವಾಗಿ ತಿರುಗಾಡುತ್ತಾ ಬಹಳಷ್ಟು ಕ್ಷೇತ್ರ ಸಂದರ್ಶನ ಮಾಡುತ್ತಾ ಪ್ರಭಾಸ ಕ್ಷೇತ್ರಕ್ಕೆ ಹೋಗಿದ್ದೆನು. ಪ್ರಭಾಸ ಮಹಿಮಾನ್ವಿತ ತೀರ್ಥಕ್ಷೇತ್ರ. ಚಂದ್ರನ ಶಾಪ ವಿಮೋಚನೆಯಾದ ಕ್ಷೇತ್ರವದು. ಅಲ್ಲಿಂದ ತಿರುಗಿ ನಾನು ಇಲ್ಲಿಗೆ ಬಂದಿದ್ದೇನೆ.”
“ಅಣ್ಣಾ! ಪ್ರಭಾಸ ತೀರ್ಥ ಕ್ಷೇತ್ರದ ಮಹಿಮೆಯ ಕಥೆ ಚಂದ್ರನ ಶಾಪ ವೃತ್ತಾಂತ ಮತ್ತು ವಿಮೋಚನೆಯಾದ ಬಗೆ ವಿವರಿಸಬಹುದೆ?” ಎಂದು ಕೃಷ್ಣ ಕೇಳಿದನು.
“ಅದೊಂದು ಬಹಳ ವಿಸ್ತಾರವಾದ ವೃತ್ತಾಂತ. ದಕ್ಷ ಪ್ರಜಾಪತಿಗೆ ಇಪ್ಪತ್ತೇಳು ಮಂದಿ ಹೆಣ್ಣು ಮಕ್ಕಳು. ಪ್ರಾಯ ಪ್ರಬುದ್ಧರಾದ ಕಾಲ ತನ್ನ ಎಲ್ಲ ಮಕ್ಕಳನ್ನು ಚಂದ್ರನಿಗೆ ವಿವಾಹ ಮಾಡಿ ಕೊಟ್ಟನು. ಈ ವಿವಾಹವಾದ ಬಳಿಕ ಚಂದ್ರನಿಗೆ ದಕ್ಷನ ಇಪ್ಪತ್ತೇಳು ಪುತ್ರಿಯರು ಅಂದರೆ ಅವನ ಪತ್ನಿಯರಾದ ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿಯಾದಿಯರಲ್ಲಿ ರೋಹಿಣಿ ಬಹುಪ್ರೀತಳಾಗಿದ್ದಳು. ಸದಾ ಆಕೆಯ ಜೊತೆಯಲ್ಲಿ ಇರತೊಡಗಿದ್ದನು. ಈ ಕಾರಣದಿಂದ ವಿರಹ ಬಾಧೆಗೊಳಗಾದ ಉಳಿದ ಇಪ್ಪಾತ್ತರು ಮಕ್ಕಳು ದಕ್ಷನಿಗೆ ಚಂದ್ರನಿಂದಾಗುತ್ತಿರುವ ತಾರತಮ್ಯದ ಬಗ್ಗೆ ದೂರನ್ನಿತ್ತರು.
ದಕ್ಷ ಈ ಕುರಿತಾಗಿ ಚಂದ್ರನನ್ನು ಕರೆದು ಸಮಾನ ಭಾವದಿಂದ ನನ್ನ ಮಕ್ಕಳು, ನಿನ್ನ ಪತ್ನಿಯರನ್ನು ಪಾಲಿಸಬೇಕೆಂದು ಆದೇಶಿಸಿದನು. ಮಾತ್ರವಲ್ಲ ತಪ್ಪಿದರೆ ನಿನಗೆ ತೊಂದರೆಯಾದೀತು ಎಂದು ನಿಷ್ಠುರವಾಗಿ ಎಚ್ಚರಿಸಿದನು.
ಹೀಗಾದರೂ ಚಂದ್ರ ಮಾವನ ಮಾತನ್ನು ಅನಾದರಿಸಿ ಮೊದಲಿನಂತೆ ರೋಹಿಣಿಯ ಜೊತೆಯಲ್ಲಿ ಅನುರಕ್ತನಾಗಿರುತ್ತಿದ್ದನು. ಇದರಿಂದ ಕ್ರೋಧವಶನಾದ ದಕ್ಷ ಪ್ರಜಾಪತಿ ತನ್ನ ಅಳಿಯನಾದ ಶಶಲಕ್ಷಣ ಶಶಾಂಕ (ಚಂದ್ರ) ರಾಜಯಕ್ಷ್ಮರೋಗ (ಕ್ಷಯ) ಗ್ರಸ್ತನಾಗಲಿ ಎಂದು ಶಪಿಸಿ ಬಿಟ್ಟನು.
ದಕ್ಷನ ಶಾಪದಂತೆ ಓಶಧೀಶ ಚಂದ್ರ ಕ್ಷಯರೋಗ ಪೀಡಿತನಾಗಿ ದಿನದಿಂದ ದಿನಕ್ಕೆ ಕ್ಷಯಿಸತೊಡಗಿದನು. ಪರಿಹಾರವಾಗಿ ನಾನಾವಿಧದ ಯಾಗ ಯಜ್ಞಗಳನ್ನು ಮಾಡಿಸಿದರೂ ರೋಗಮುಕ್ತನಾಗಲಿಲ್ಲ. ಔಷಧಿಗಳ ರಾಜನೀಗ ರೋಗಿಯಾದ ಪರಿಣಾಮ ಔಷಧಿಲತೆಗಳೂ ಸೊರಗತೊಡಗಿದವು. ಅವುಗಳ ಔಷಧೀಯ ಗುಣ ಕ್ಷಯಿಸಿ, ರುಚಿ, ಸಾರ, ರಸ ಮತ್ತು ಶಕ್ತಿಗಳೂ ಕ್ಷೀಣಿಸತೊಡಗಿದವು. ನಿಶಾಕರನು ಕರಗುತ್ತಿರುವ ಕಾರಣ ಸಸ್ಯ, ತರುಲತೆ ಬಳ್ಳಿಗಳೂ ಕ್ಷಯಿಸಿದವು. ನೇರ ಪರಿಣಾಮವಾಗಿ ಪ್ರಾಣಿಪಕ್ಷಿಗಳಿಗೂ ರೋಗ ಬಂದು ಆಹಾರವಿಲ್ಲದೆ ನಾಶ ಹೊಂದಲಾರಂಭಿಸಿದವು.
ಯಾಕೆ ಹೀಗಾಗುತ್ತಿದೆ ಎಂದು ದೇವಾನು ದೇವತೆಗಳು ವ್ಯಥೆಗೊಳಗಾದರು. ಕಾರಣ ಹುಡುಕಿದಾಗ ಚಂದ್ರನ ಕಳಾಹೀನತೆಯಿಂದಾಗಿ ಈ ವ್ಯತಿರಿಕ್ತ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ತಿಳಿದುಕೊಂಡರು. ಹಾಗಿದ್ದರೆ ಪರಿಹಾರ ಮಾರ್ಗ ಏನು? ಮತ್ತೆ ಯಥಾಸ್ಥಿತಿಗೆ ಮರಳುವ ಬಗೆ ಹೇಗೆ ಎಂದು ತರ್ಕಿಸತೊಡಗಿದರು.
ಮುಂದುವರಿಯುವುದು…






















































