
ವಾಷಿಂಗ್ಟನ್: ವೆನೆಜುವೆಲಾದಲ್ಲಿ ನಿಕೋಲಸ್ ಮಡುರೊ ಅವರ ನಾಟಕೀಯ ಬಂಧನದ ಕುರಿತು, ಗುಸ್ಟಾವೊ ಪೆಟ್ರೋ ಅವರು ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯನ್ನು ಒಂದು ದೇಶದ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಟೀಕಿಸಿದ್ದು ಇದರಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗರಂ ಆಗಿ ಅವರ ಮುಂದಿನ ಗುರಿ ಕೊಲಂಬಿಯಾ ಎಂಬ ಮುನ್ಸೂಚನೆ ಸಿಕ್ಕಿದೆ.
ಕೊಲಂಬಿಯಾದಲ್ಲಿ ನಡೆಯುತ್ತಿರುವ ಕೊಕೇನ್ ಉತ್ಪಾದನೆ ಮತ್ತು ಅಲ್ಲಿಂದ ಅಮೆರಿಕಕ್ಕೆ ಹರಿಯುತ್ತಿರುವ ಮಾದಕ ದ್ರವ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಟ್ರಂಪ್ ‘ಕೊಲಂಬಿಯಾದ ಡ್ರಗ್ ಫ್ಯಾಕ್ಟರಿಗಳಿಂದ ಅಮೆರಿಕಕ್ಕೆ ವಿಷ ಹರಿದು ಬರುತ್ತಿದೆ. ಪೆಟ್ರೋ ಅವರು ಮೊದಲು ತಮ್ಮ ದೇಶದ ಕೆಲಸ ನೋಡಿಕೊಂಡರೆ ಒಳ್ಳೆಯದು, ವೆನೆಜುವೆಲಾದಲ್ಲಿ ಏನಾಗುತ್ತಿದೆ ಎಂದು ಅವರು ಚಿಂತಿಸುವ ಅಗತ್ಯವಿಲ್ಲ’ ಎಂದು ಖಾರವಾಗಿ ಹೇಳಿದ್ದಾರೆ.



















