
ಉಡುಪಿ: ನ.28ರಂದು ಪ್ರಧಾನಿ ನರೇಂದ್ರ ಮೋದಿಯವರು ನಗರದ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಗೀತೋತ್ಸವದ ಅಂಗವಾಗಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆ ಭದ್ರತಾ ಪರಿಶೀಲನೆಗೆ ವಿಶೇಷ ಭದ್ರತಾ ಪಡೆಯ ತಂಡವು ಇಂದು ಉಡುಪಿಗೆ ಭೇಟಿ ನೀಡಲಿದೆ.
ಎಸ್ ಪಿಜಿ ತಂಡವು ಆದಿಉಡುಪಿ ಹೆಲಿಪ್ಯಾಡ್ ನಿಂದ ಶ್ರೀಕೃಷ್ಣ ಮಠ ಪರಿಸರ, ಪಾರ್ಕಿಂಗ್ ಪ್ರದೇಶದ ಸಮೀಪದಲ್ಲಿ ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದ ಸ್ಥಳ ವೀಕ್ಷಣೆ ನಡೆಸಲಿದ್ದು ಈಗಾಗಲೇ ನಮೂದಾಗಿರುವ ಪ್ರಧಾನಿಗಳ ಕಾರ್ಯಕ್ರಮಗಳಲ್ಲಿ ಕೊಂಚ ಮಾರ್ಪಾಡು ಮಾಡುವ ಸಾಧ್ಯತೆಯೂ ಇದೆ. ಕಾರ್ಯಕ್ರಮಕ್ಕೆ ಯಾವ ರೀತಿಯ ಸ್ವಾಗತ ಹಾಗೂ ಬಳಕೆ ಮಾಡುವ ವಸ್ತುಗಳ ಕುರಿತು ಸಂಘಟಕರಿಂದ ಎಸ್ಪಿಜಿ ತಂಡವು ಮಾಹಿತಿ ಪಡೆಯಲಿದೆ.
ಈಗಾಗಲೇ ಮಠದ ಪರಿಸರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದ್ದು ಆದಿ ಉಡುಪಿಯಿಂದ ಪಾರ್ಕಿಂಗ್ ಪ್ರದೇಶದವರೆಗೆ ನಗರಸಭೆಯ ಸ್ವಚ್ಛತಾ ಯಂತ್ರದ ಮೂಲಕ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಲಾಗಿದೆ.



















