ಭಾಗ 359
ಭರತೇಶ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೫೯ ಮಹಾಭಾರತ
“ಮುನಿಪೋತ್ತಮರೇ, ನಿಮ್ಮ ಕೃಪೆಯಿಂದ ನನ್ನ ಮನಸ್ಸು ಸಮಾಧಾನವಾಗಿದೆ. ಕ್ಷತ್ರಿಯರು ಧರ್ಮ ಮತ್ತು ಪ್ರಜಾರಕ್ಷಣೆಗಾಗಿ ಯುದ್ಧ ಧರ್ಮವನ್ನು ಪಾಲಿಸುತ್ತಾರೆ. ಆ ದಾರಿಯಲ್ಲಿ ಕ್ರಮಿಸಿ ಗಮ್ಯವನ್ನು ಸೇರುವ ವಿಚಾರ ತಿಳಿಸಿದ್ದೀರಿ. ಇನ್ನೊಂದು ವಿಭಾಗದಲ್ಲಿ ಕ್ಷಾತ್ರ ಕುಲಜರು ಸತ್ಕರ್ಮಗಳಾದ ಯಾಗ ಯಜ್ಞಗಳನ್ನು ಮಾಡುತ್ತಾರೆ. ದಾನ, ಧರ್ಮ, ದಕ್ಷಿಣೆಗಳನ್ನು ನೀಡುತ್ತಾರೆ. ಈ ಕುರಿತಾದ ಪಥದಲ್ಲಿ ಸೇರಬಹುದಾದ ಔನ್ನತ್ಯವನ್ನು, ಮತ್ತು ದಾನದ ಫಲಾಫಲಗಳನ್ನು ತಿಳಿಯುವ ಕುತೂಹಲ ನನ್ನ ಮನದಲ್ಲಿ ಮೂಡಿದೆ. ಪರಿಹರಿಸಬಹುದೇ?” ಎಂದು ಧರ್ಮಜ ಜಿಜ್ಞಾಸೆಯ ಪ್ರಶ್ನೆ ಕೇಳಿದನು.
“ಮಹಾರಾಜ ಧರ್ಮರಾಯಾ! ನೀನು ಕೇಳ ಬಯಸುವೆಯಾದರೆ ನಿನ್ನ ಪ್ರಶ್ನೆಗೆ ನಾನು ಬಹಳಷ್ಟು ರಾಜರ (ಹದಿನಾರು) ಕಥೆಗಳನ್ನು ಪೂರಕ ನಿದರ್ಶನವಾಗಿ ಹೇಳಬಲ್ಲೆ. ಕೇಳುವಂತವನಾಗು” ಎಂದು ಆರಂಭಿಸಿದರು.
“ಹಿಂದೆ ಮಹಾರಾಜ ಶೈಬ್ಯ ಎಂಬವನಿಗೆ ಸೃಂಜಯ ಎಂಬ ಮಗನಿದ್ದನು. ಸೃಂಜಯನಿಗೆ ಮಹಾ ತಪಸ್ವಿಗಳಾದ ನಾರದ ಮತ್ತು ಪರ್ವತ ಎಂಬ ಹೆಸರಿನ ಇಬ್ಬರು ಮಹರ್ಷಿ ಮಿತ್ರರಿದ್ದರು. ಈ ಇಬ್ಬರು ಮಹಿಮಾನ್ವಿತ ಮಿತ್ರರು ಒಮ್ಮೆ ಸೃಂಜಯನನ್ನು ನೋಡಿ ಬರುವ ಅಪೇಕ್ಷೆಯಿಂದ ಆತನ ಅರಮನೆಗೆ ಬಂದರು. ಅಲ್ಲಿ ಯಥೋಚಿತ ಆದರದ ಸತ್ಕಾರದಿಂದ ಸಂತೃಪ್ತರಾದರು. ಇದರಿಂದ ಪ್ರೀತರಾಗಿ ಕೆಲದಿನ ಸೃಂಜಯನ ಜೊತೆ ಅರಮನೆಯಲ್ಲಿ ಇದ್ದು ಸದ್ಬೋಧನೆ ಮಾಡುತ್ತಾ ಸತ್ಕಾರ ಸ್ವೀಕರಿಸುವ ಮನ ಮಾಡಿದರು. ಹೀಗಿರಲು ಒಂದು ದಿನ ಸೃಂಜಯ ಮಹರ್ಷಿ ಮಿತ್ರರ ಜೊತೆಗಿದ್ದ ಸಮಯ ಓರ್ವ ಅಪ್ರತಿಮ ಕನ್ಯಾವಸ್ಥೆಯಲ್ಲಿದ್ದ ಸ್ತ್ರೀ ಅಲ್ಲಿಗೆ ಬಂದು ಸೃಂಜಯನಿಗೆ ನಮಿಸಿದಳು. ಅವಳನ್ನು ಕಂಡು ಮಹರ್ಷಿ ಪರ್ವತ ಸೃಂಜಯನಲ್ಲಿ ಕೇಳಿದ “ಈ ಅದ್ವಿತೀಯ ಚೆಲುವಿನ ಗಣಿ ಯಾರು? ಸೂರ್ಯನ ಪ್ರಭಾವತಿಯೋ, ಚಂದ್ರಪ್ರಭೆಯೋ, ಅಲ್ಲ ಅಗ್ನಿಯ ಜ್ವಾಲೆಯೋ? ಅವರ್ಯಾರು ಅಲ್ಲದಿದ್ದರೆ ಶ್ರೀ, ಹ್ರೀ, ಕೀರ್ತಿ, ಧೃತಿ, ಪುಷ್ಟಿ, ಸಿದ್ಧಿ ಮುಂತಾದ ವಿಶೇಷ ಚೆಲುವಿನ ದಿವ್ಯ ಸೌಂದರ್ಯವತಿಯರಲ್ಲಿ ಒಬ್ಬಳೋ?” ಎಂದು ಪ್ರಶ್ನಿಸಿದರು. ಆಗ ಸೃಂಜಯ “ಈಕೆ ನನ್ನ ಮಗಳು, ಉತ್ತಮವಾದ ನಿಮ್ಮೀರ್ವರ ಸತ್ಕಾರದ ಕಾರ್ಯದಲ್ಲಿ ನನಗೆ ಸಹಕಾರಿಯಾಗಿದ್ದವಳು. ನಾನು ಪ್ರಸನ್ನನಾಗಿರುವ ಸಮಯಕ್ಕಾಗಿ ಕಾದು ಈಗ ನನ್ನಿಂದ ಆಕೆಗೆ ಬೇಕಾದ ಶ್ರೇಷ್ಟವಾದ ವರ ಬೇಡುವುದಕ್ಕಾಗಿ ಬಂದಿದ್ದಾಳೆ” ಎಂದನು. ಈ ಮಾತು ಕೇಳಿದಾಕ್ಷಣ ಋಷಿ ನಾರದ “ಮಹಾರಾಜ ಸೃಂಜಯಾ, ನಿನ್ನ ಮಗಳಿಗೆ ವರ ನಾನಾಗ ಬಯಸಿರುವೆ. ನನಗೆ ಧರ್ಮಪತ್ನಿಯಾಗಿ ಕನ್ಯಾದಾನ ಮಾಡಿ ಕೊಡುವೆಯಾ?” ಎಂದು ನೇರವಾಗಿ ತನ್ನ ಮನದಾಸೆ ಕೇಳಿ ಬಿಟ್ಟನು. ತಕ್ಷಣ ಸೃಂಜಯ ಓರ್ವ ಮಹಾದಾನಿಯಲ್ಲವೇ? ” “ಹಾಗೆಯೇ ಆಗಲಿ, ಧಾರೆಯೆರೆದು ಕೊಡುವೆನು” ಎಂದು ಹೇಳಿಬಿಟ್ಟನು. ತನ್ನ ಮಿತ್ರ ಋಷಿ ನಾರದನ ಈ ಬೇಡಿಕೆ ಹಾಗೂ ರಾಜ ಸೃಂಜಯನ ಸಮ್ಮತಿಯ ಮಾತು ಕೇಳಿ ಪರ್ವತನಿಗೆ ಸಿಟ್ಟು ಬಂದಿತು. “ಈಕೆಯನ್ನು ನೋಡಿದಾಕ್ಷಣ ನನ್ನ ಹೃದಯಭಾವದ ಜೊತೆ ನಾನು ಆಕೆಯನ್ನು ವರಿಸಿಯಾಗಿತ್ತು. ಓರ್ವ ವರಿಸಿರುವ ಕನ್ಯೆಯನ್ನು ನೀನು ವಿವಾಹವಾಗಲು ಬಯಸಿರುವುದು ಶ್ರೇಯಸ್ಕರವಲ್ಲ. ಹಾಗಾಗಿ ನೀನು ಕಾಲಾಂತರದಲ್ಲಿ ಸ್ವರ್ಗವನ್ನೇರಲಾರೆ” ಎಂದು ಶಾಪ ವಾಕ್ಯ ನುಡಿದನು.
ಕೇಳಿದ ಋಷಿ ನಾರದ “ಹೇ ಪರ್ವತಾ! ನೀನು ಏಕಮುಖವಾಗಿ, ನಿನ್ನಷ್ಟಕ್ಕೇ ನಿರ್ಧರಿಸಿರುವುದು ತಪ್ಪು. ಅಪ್ರಕಟಿತವಾದ ನಿನ್ನ ಆಸೆ ಅನ್ಯರಿಗೆ ತಿಳಿಸಲಿಲ್ಲ. ನಾನು ಹಾಗೆ ಮಾಡದೆ ಅಧಿಕಾರವುಳ್ಳವನ ಅನುಮತಿ ಕೇಳಿ, ಒಪ್ಪಿಗೆ ಪಡೆದು ವರಿಸಲು ಮುಂದಾಗಿರುವುದು. ನಿನ್ನ ಶಾಪ ವಾಕ್ಯವು ದುಡುಕಿನಿಂದ ಕೂಡಿದೆ. ನಾನೀಗ ಕೇಳಿರುವುದು ಮಾತ್ರ. ಇನ್ನು ಪರಸ್ಪರ ಮಾತು, ಬುದ್ಧಿಪೂರ್ವಕ ಒಪ್ಪಿಗೆ, ವಾಗ್ದಾನದ ಬಳಿಕ ನಿಶ್ಚಯವಾಗಿ ವರಿಸಲಿರುವೆ. ಹೆಣ್ಣಿನ ಮತ್ತು ಆಕೆಯ ತಂದೆ ತಾಯಿಯ ಮನಸ್ಸಿನ ಇಚ್ಚೆ ಕೇಳದೆ ವರಿಸುವ ಇರಾದೆ ನನಗಿಲ್ಲ. ಹೀಗೆ ವಿಧಿ ಮೀರದೆ ವಿವಾಹಕ್ಕೆ ತೊಡಗಲಿದ್ದ ನನಗೆ ಶಾಪವಿತ್ತ ನೀನು ಸುಖವಾಗಿರಲಾಗದು. ನಿನಗೆ ಪ್ರತಿಶಾಪ ನೀಡುತ್ತಿದ್ದೇನೆ ಕೇಳು. ನಾನು ಸ್ವರ್ಗವೇರುವವರೆಗೆ ನಿನಗೂ ಸ್ವರ್ಗವೇರಲಾಗದೆ ಹೋಗಲಿ” ಎಂದು ಶಪಿಸಿದನು.
ವ್ಯಾಸರು ಕಥೆ ಹೇಳುತ್ತಾ, “ಧರ್ಮರಾಯ! ಋಷಿಗಳಾಗಿ ಜ್ಞಾನ ಸಂಪನ್ನರಾದವರು ಈಗ ಶಾಪ ಪ್ರತಿಶಾಪಗಳಿಂದ ಬಂಧಿಗಳಾಗಿ ಹೋದರು. ನಂತರವೂ ಅಲ್ಲಿಯೆ ಉಳಿದು ರಾಜಾಶ್ರಯದಲ್ಲಿ ಸತ್ಕಾರ ಸ್ವೀಕರಿಸುತ್ತಾ ದಿನಗಳೆಯುತ್ತಿದ್ದರು. ಮಹಾರಾಜ ಸೃಂಜಯ ಮಾತ್ರ ಇವರ ಸೇವೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಾ ಸುಜ್ಞಾನ, ಅನುಗ್ರಹ ಪಡೆಯುತ್ತಲೆ ಇದ್ದನು. ಋಷಿಗಳಿಗೂ ತೃಪ್ತಿ ನಾವು ಪಡೆದ ಸೇವೆಗೆ ಪ್ರತಿಯಾಗಿ ಸದ್ಬೋದನೆ, ಕೃಪಾಕಟಾಕ್ಷದ ದಾನವೀಯುತ್ತಿದ್ದೇವೆ ಎಂದು. ವ್ಯವಹಾರದಂತೆ ಇವರ ಸೇವೆ, ಸತ್ಕಾರ್ಯ, ದಾನಗಳು ಪರಸ್ಪರ ವಿನಿಮಯವಾಗುತ್ತಿದ್ದವು ಎನ್ನಬಹುದು. ಹೀಗಿರಲು ಒಂದು ದಿನ ರಾಜಾ ಸೃಂಜಯ ಋಷಿಗಳ ಬಳಿ ಬಂದು ಪುತ್ರ ಸಂತಾನವಿಲ್ಲದ ನನಗೆ ಓರ್ವ ಪುತ್ರನನ್ನು ಪಡೆಯುವ ಆಸೆಯಿದೆ” ಎಂದು ತನ್ನ ಕೋರಿಕೆಯನ್ನು ನಿವೇದಿಸಿಕೊಂಡನು. ಇದಾಗಿ ಕೆಲದಿನಗಳಾದಾಗ ಇಬ್ಬರು ತೇಜಸ್ವಿಗಳು ಋಷಿ ನಾರದರ ಬಳಿ ಬಂದು ” ರಾಜನ ಆಸೆಯಂತೆ ಓರ್ವ ಪುತ್ರನನ್ನು ಅನುಗ್ರಹಿಸಿ” ಎಂದು ಸಲಹೆ ನೀಡಿ ಹೋದರು. ಅಂತೆಯೆ ಋಷಿ ನಾರದರು ರಾಜ ಸೃಂಜಯನನ್ನು ಕರೆದು “ಮಹಾರಾಜಾ! ನೀನು ನಮ್ಮ ಸೇವೆಯಲ್ಲಿ ನಿರತರಾಗಿರುವೆ. ಸಂತುಷ್ಟನಾಗಿ ನಿನಗೆ ನಿನ್ನಾಸೆಯಂತೆ ಓರ್ವ ಪುತ್ರ ಸಂತಾನವನ್ನು ಅನುಗ್ರಹಿಸಲು ಮನ ಮಾಡಿದ್ದೇನೆ. ಹೇಳು ನಿನಗೆಂತಹ ಮಗ ಬೇಕು?” ಎಂದು ವರ ನೀಡಲು ಮುಂದಾದರು.
ಸೃಂಜಯ ಬಹಳ ಸಂತೋಷದಿಂದ ತನ್ನಾಸೆ ವಿವರಿಸಿ ಹೇಳಿ ಕೇಳತೊಡಗಿದ “ಋಷಿವರ್ಯರೆ, ನನ್ನ ಮಗ ಸಕಲ ಸದ್ಗುಣ ಸಂಪನ್ನನಾಗಿ, ಯಶೋವಂತನಾಗಿ, ಕೀರ್ತಿವಂತನಾಗಿ, ತೇಜಸ್ವಿಯಾಗಿರಬೇಕು. ಬೆಳೆದು ಯುವಕನಾದಾಗ ಶತ್ರು ನಾಶಕನಾಗಿ, ಮಹಾ ಸಾಮರ್ಥ್ಯವುಳ್ಳ ಮಗನಾಗಬೇಕು. ಮಾತ್ರವಲ್ಲ ನನ್ನ ಮಗನಲ್ಲಿ ವಿಶೇಷ ಗುಣಗಳಿರಬೇಕು ನನ್ನ ಮಗನ ಮಲ, ಮೂತ್ರ, ಕಫ, ಬೆವರು ಹೀಗೆ ಏನೆಲ್ಲ ಶಾರೀರಿಕ ವಿಸರ್ಜನೆಗಳಿವೆಯೊ ಅವೆಲ್ಲಾ ಸುವರ್ಣಮಯವಾಗಿರಬೇಕು” ಎಂದು ಬೇಡಿದನು.
ಋಷಿ ನಾರದರು “ತಥಾಸ್ತು” ಎಂದು ಅನುಗ್ರಹಿಸಿದರು. ಸೃಂಜಯನಿಗೆ ಕೆಲಕಾಲ ಕಳೆದು ಪುತ್ರ ಜನನವಾಯಿತು. ವರಬಲದಂತೆ ಆತನ ಶರೀರದಿಂದ ವಿಸರ್ಜಿಸಲ್ಪಡುವ ಎಲ್ಲವೂ ಸುವರ್ಣಮಯವಾಗಿದ್ದು ರಾಜನು ಸಮೃದ್ಧನಾದನು. ಮಗು ಬಾಲಕನಾಗಿರುವಾಗಲೆ ದೊರೆತ ಬಂಗಾರದಿಂದ ಅಗರ್ಭ ಶ್ರೀಮಂತ ರಾಜ್ಯ ಸೃಂಜಯನದ್ದಾಯಿತು. ಕೋಟೆ, ಅರಮನೆ ಎಲ್ಲವೂ ಸುವರ್ಣಮಯವಾಯಿತು. ಸಾಕಷ್ಟು ಯಾಗ ಯಜ್ಞ ದಾನಧರ್ಮಗಳನ್ನು ಮಾಡಿ ಅನಾಯಾಸವಾಗಿ ದೊರೆಯುತ್ತಿದ್ದ ಚಿನ್ನವನ್ನು ದಾನವಾಗಿ ನೀಡತೊಡಗಿದನು.
ಹೀಗಿರಲು ಈ ವಿಚಾರ ದರೋಡೆಕೋರರಿಗೂ ತಲುಪಿತು. ಇಷ್ಟೆಲ್ಲಾ ಸಂಪತ್ತು ಬಾಲಕ ರಾಜಕುಮಾರನ ಶರೀರದಿಂದ ರಾಜ ಸೃಂಜಯನಿಗೆ ಪ್ರಾಪ್ತವಾಗುತ್ತಿದೆ ಎಂಬ ಸತ್ಯವೂ ತಿಳಿಯಿತು. ಅವರು ಸೂಕ್ತ ಯೋಜನೆ ರೂಪಿಸಿ ರಾಜಾಂಗಣದಲ್ಲಿ ಆಡುತ್ತಿದ್ದ ಮಗುವನ್ನು ಯೋಜನೆಯಂತೆ ಅಪಹರಿಸಿ ಹೊತ್ತೊಯ್ದರು. ಗೊಂಡಾರಣ್ಯ ಸೇರಿದ ಅವರಿಗೆ ಮಗುವಿನಿಂದ ಚಿನ್ನ ಹೇಗೆ ಸಿಗುತ್ತದೆ ಎಂಬ ಸತ್ಯ ತಿಳಿದಿರದ ಕಾರಣ ಮಗುವಿನ ಶರೀರಾದ್ಯಂತ ಹುಡುಕಿ ಸಿಗದಿದ್ದಾಗ ಕೊಂದು ಸಿಗಿದು ಹುಡುಕುವ ನಿರ್ಧಾರ ಮಾಡಿದರು. ಕೊನೆಗೆ ತುಂಡು ತುಂಡುಗಳಾಗಿ ಕತ್ತರಿಸಿದರೂ ಸಿಗದೆ ಇದ್ದಾಗ ಹತಾಶೆಯಾಯಿತು. ಕೋಪ ಬಂದು ಅನಾವಶ್ಯಕವಾಗಿ ಇಷ್ಟು ಮುದ್ದಾದ ಮಗುವನ್ನು ಕೊಲೆ ಮಾಡುವಂತಾಯಿತು ಎಂದು ಪರಸ್ಪರ ಒಬ್ಬೊರಿಗೊಬ್ಬರು ಆರೋಪಿಸುತ್ತಾ ಹೊಡೆದಾಡಿಕೊಂಡು ಹೀನಾಯವಾಗಿ ಅವರೂ ಸತ್ತರು.
ಇತ್ತ ರಾಜ ಎಲ್ಲೆಡೆ ಹುಡುಕಿ, ಕೊನೆಗೆ ಮಗ ಸತ್ತು ದರೋಡೆಕೋರರೂ ಸತ್ತ ವಿಚಾರ ತಿಳಿದಾಗ ಋಷಿಗಳ ಬಳಿ ಬಂದು “ಮಹಾತ್ಮರೆ ನಿಮ್ಮ ವರ ಬಲದಿಂದ ಹುಟ್ಟಿದ ಮಗು ಹೀಗೇಕಾಯಿತು? ಎಂದು ಪುತ್ರ ವಿಯೋಗದಿಂದ ಪ್ರಲಾಪಿಸಿದನು. ಆಗ ಮಹರ್ಷಿಗಳು “‘ನೋಡು ಸೃಂಜಯಾ! ನೀನು ನಮ್ಮ ಜೊತೆಗಿದ್ದು ಇಷ್ಟು ಸುಜ್ಞಾನ ಪಡೆದರೂ ನಿನ್ನ ಲೋಭ ಮರೆಯಾಗಲಿಲ್ಲ. ಅತಿ ಲೋಭದ ಸ್ವಾರ್ಥವನ್ನು ಬೇಡಿಕೆಯಾಗಿಸಿ ವರ ಪಡೆದೆ. ಅಂತಹ ದುರುದ್ದೇಶದಿಂದ ಕೂಡಿದ ನಿನ್ನ ಬಯಕೆ ಈಡೇರದೆ ಅರ್ಧದಲ್ಲಿ ನಷ್ಟವಾಯಿತು.” ಎಂದರು.
“ಧರ್ಮರಾಯಾ! ಈ ಕಥೆಯಲ್ಲಿ ಒಂದು ಸಾರಾಂಶವಿದೆ. ಆ ಈರ್ವರು ಋಷಿಗಳಿಗೆ ರಾಜ ಬಹಳಷ್ಟು ಸತ್ಕಾರ ಮಾಡಿದ್ದಾನೆ. ದಾನ ಧರ್ಮವನ್ನೂ ಮಾಡಿರುವನು. ಆದರೆ ಅದ್ಯಾವುದೂ ಉಚಿತ ಮಾರ್ಗದಲ್ಲಿ ಇರಲಿಲ್ಲ. ಆರಂಭದಲ್ಲಿ ಮಿತ್ರರ ಸತ್ಕಾರಕ್ಕಾಗಿ ಇದ್ದು ನಂತರ ಲೋಭದ ಈಡೇರಿಕೆಯ ವ್ಯವಹಾರವಾಗಿ ಬದಲಾಯಿತು. ಈ ರೀತಿ ಪ್ರತಿಲಾಭದ ಉದ್ದೇಶದಿಂದ ದೇವರ ಪೂಜೆಯಾಗಲಿ, ದಾನವಾಗಲಿ, ಧರ್ಮವನ್ನಾಗಲಿ ಆಚರಿಸಿದರೆ ಅದರ ಫಲವೂ ಕ್ಷಣಿಕವಾಗಿಯೇ ಇರುತ್ತದೆ. ಪೂರ್ಣಫಲವನ್ನು ನೀಡಲಾರದು ಎಂಬ ಸೂಕ್ಷ್ಮವನ್ನು ಅರಿತುಕೊಳ್ಳಬೇಕು” ಎಂದು ವೇದವ್ಯಾಸರು ವಿವರಿಸಿದರು.
ಹೀಗೆ ಸೃಂಜಯ ಪುತ್ರ ವಿಯೋಗದಿಂದ ಅಳುತ್ತಿದ್ದಾಗ, ಸಂತೈಸಲು ಋಷಿಗಳಾದ ನಾರದರು ಮಹಾ ಮಹಿಮನಾದ ರಾಜ ಅವೀಕ್ಷಿತನ ಮಗ ಮರುತ್ತನ ಕಥೆ ಹೇಳತೊಡಗಿದರು….
ಮುಂದುವರಿಯುವುದು…



















