ಭಾಗ – 333
ಭರತೇಶ ಶೆಟ್ಟಿ, ಎಕ್ಕಾರ್

ಶ್ರೀ ಕೃಷ್ಣ ಅರ್ಜುನನ ಮುಗ್ದತೆಗೆ ಮುಗುಳ್ನಕ್ಕನು. “ಹೇ ಪಾರ್ಥಾ! ನೀನು ಸನ್ಯಾಸ ಸ್ವೀಕರಿಸುವ ಬಗ್ಗೆ ಮಾತನಾಡುತ್ತಿರುವೆ. ಸನ್ಯಾಸ ಅತ್ಯಂತ ಉತ್ಕೃಷ್ಟವಾದುದೂ, ಪವಿತ್ರವಾದುದೂ ಹೌದು. ಆದರೆ ಅದು ಕೇವಲ ಆ ರೀತಿಯ ಉಡುಪು ಮತ್ತು ವೇಷದ ಧಾರಣೆ ಮಾತ್ರದಿಂದ ಆಗುವಂತಹುದಲ್ಲ. ಮಾವಿನ ಸಸಿಯೊಂದು ಭೂಮಿಯ ಮಣ್ಣು, ಸತ್ವ, ನೀರನ್ನು ಹೀರುತ್ತಾ ಗಿಡವಾಗಿ, ನಂತರ ಮರವಾಗಿ ಬೆಳೆಯುತ್ತದೆ. ತನ್ನ ಗೆಲ್ಲು ಕೊಂಬೆಗಳಲ್ಲಿರುವ ಎಲ್ಲಾ ಎಲೆಗಳನ್ನು ಉದುರಿಸಿ, ಹೊಸತಾದ ಚಿಗುರುಗಳಿಂದ ಮತ್ತೆ ತುಂಬಿ ನಳನಳಿಸುತ್ತದೆ. ಆ ಬಳಿಕ ಹೂ ಬಿಟ್ಟು ಕಾಯಿ, ಬೆಳೆಸುತ್ತಾ ಮಾಗಿದ ಬಳಿಕ ಹಣ್ಣಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಏನನ್ನು ಗಮನಿಸಿದೆ? ಹಂತ ಹಂತವಾಗಿ ಬೆಳೆಯುವಲ್ಲಿ ಪ್ರಾಕೃತಿಕವಾಗಿ ಅದರ ಕರ್ತವ್ಯಗಳನ್ನು ಪೂರೈಸುತ್ತಾ ಅದರ ಬೆಳವಣಿಗೆಯಾಗುತ್ತದೆ. ನಂತರವಲ್ಲವೆ ಕಾಯಿ ಹಣ್ಣು ನೀಡಲು ಸಾಧ್ಯವಾಗುವುದು? ಹಾಗೆಂದು ಬೆಳೆದು ಮಾಗದ ಕಾಯಿಯನ್ನು ಬಲವಂತದಿಂದ ಕೊಯ್ದು ಇಟ್ಟರೆ ಬಾಡುತ್ತದೆಯೆ ಹೊರತು ಸವಿಯಾದ ಸಿಹಿ ತುಂಬಲಾರದು. ಸಿಹಿಯಾಗಬೇಕಾದರೂ ಅದು ಬೆಳೆದು ಮಾಗಬೇಕು. ಹಾಗೆಯೆ ಕ್ಷತ್ರಿಯನಾಗಿ ಜನಿಸಿರುವ ನಿನಗೆ ನಿನ್ನದ್ದಾದ ಕರ್ಮಗಳಿವೆ. ಆ ಕರ್ಮಗಳನ್ನು ಮಾಡುತ್ತಾ ಬೆಳೆಯಬೇಕು. ನೀನು ಮಾಡಬೇಕಾದುದನ್ನು ಮಾಡಬೇಕು. ಹೀಗೆ ನಿನ್ನ ಕರ್ಮಗಳನ್ನು ಮಾಡುತ್ತಾ ಸಾಗುವಾಗ ಮಾಡಬೇಕಾದದ್ದು ಯಾವುದು? ಮಾಡಬಾರದ್ದು ಯಾವುದು ಎಂಬ ಅರಿವಾಗುತ್ತದೆ. ಮಾಡಬಾರದ್ದನ್ನು ಮಾತ್ರ ಹಣ್ಣಾದ ಎಲೆಗಳನ್ನು ಉದುರಿಸಿದಂತೆ ತ್ಯಜಿಸಬೇಕು. ಮಾಡಬೇಕಾದುದನ್ನು ಚಿಗುರಿಸುತ್ತಾ ಇದ್ದು ಬೆಳೆಯಬೇಕು. ಹಾಗೆ ಮಾಡದೆ, ಆತುರದಿಂದ ಮಧ್ಯ ಪಥದಲ್ಲಿ ಮಾಡಬೇಕಾದ ಕರ್ಮವನ್ನು ತ್ಯಜಿಸಿ ಮುಂದಿನದುದಕ್ಕೆ ಹಾರಿದರೆ ಬಲಿತು ಮಾಗದ ಕಾಯಿಯನ್ನು ಕೊಯ್ದು ಹಣ್ಣಾಗಿಸುವ ಪ್ರಯತ್ನದಂತಾಗುತ್ತದೆ. ಅದಕ್ಕಿಂತಲೂ ಮೊದಲು ಸನ್ಯಾಸ ಎಂದರೇನು? ಸನ್ಯಾಸಿಯ ಕ್ರಮ ಮತ್ತು ಕರ್ಮ ಏನು ಎಂದು ಬಲ್ಲೆಯಾ? ತನ್ನ ಕರ್ಮಗಳನ್ನೆಲ್ಲ ನ್ಯಾಸವಾಗಿ ಇಡುವುದೇ ಸನ್ಯಾಸ. ಒಬ್ಬಾತ ತನ್ನದ್ದಾದ ಕರ್ಮಗಳನ್ನು ಇನ್ನೊಬ್ಬರ ಪ್ರಯೋಜನಾರ್ಥವಾಗಿ ನಿರ್ವಹಿಸುವ, ವಿಶ್ವಾಸಾವಲಂಬಿ ಕರ್ತವ್ಯಕ್ಕೆ ಒಳಪಟ್ಟು, ಅಂತಹ ಕರ್ಮಗಳ ಮೂಲಕ ಸಾಧಿಸಿ ಪಡೆಯುವ ಪರಿಣಾಮದ ಸಂಬಂಧವೇ ಸನ್ಯಾಸ. ಇಲ್ಲೂ ಕರ್ಮ ಬೆಂಬಿಡದೆ ಜೊತೆಗಿರುತ್ತದೆ. ಆದರೆ ಲೋಕ ಚಿಂತಕನಾಗಿ, ಲೋಕಕ್ಕೆ ಏನು ಬೇಕು ಎಂಬುವುದನ್ನು ಮೊದಲು ತಾನು ತಿಳಿದು, ಅದನ್ನು ಈ ಜಗತ್ತಿಗೆ ತಂದೊಪ್ಪಿಸುವ ನಿಸ್ವಾರ್ಥ ಪ್ರಯತ್ನಕ್ಕೆ ಮುಂದಾಗುವುದೇ ಸನ್ಯಾಸ. ಈ ಪ್ರಕ್ರಿಯೆಯಲ್ಲಿ ಮನಸ್ಸು ಯಾವುದೇ ವಿಕಾರತೆಗೆ ಒಳಗಾಗಕೂಡದು. ಸನ್ಯಾಸಕ್ಕೂ ಮೊದಲು ಜಗದ ಅಗತ್ಯವೇನು? ತಾನು ಸಾಧಿಸಬೇಕಾದದ್ದು ಏನು ಎಂಬ ಅರಿವು ಮೂಡಬೇಕು. ಆ ಸುಜ್ಞಾನ ಮೂಡಬೇಕಾದರೆ ಅಕರ್ಮಗಳನ್ನು ತೊರೆದು, ಶಾಸ್ತ್ರಾಧ್ಯಯನ, ಗುರೂಪದೇಶ, ಸ್ವಾನುಭವ, ಮಹಾಪುರುಷ- ಸಾಧಕರ ಜೀವನ ನಡವಳಿ ಮುಂತಾದವುಗಳಿಂದ ಜ್ಞಾನವನ್ನು ತನ್ನದಾಗಿಸಬೇಕು. ಆ ಮುಖೇನ ತನ್ನದಾಗಿರುವ ಬುದ್ದಿಯನ್ನು ಪರಿಷ್ಕರಿಸಿ ಸಂಸ್ಕರಿಸಿಕೊಳ್ಳಬೇಕು. ಮನಸ್ಸಿನಲ್ಲಿ ಮೂಡುವ ಅನುರಾಗ, ರಾಗದ್ವೇಷ, ಇನ್ನಿತರ ಚಂಚಲತೆಗಳಿಂದ ಮುಕ್ತನಾಗಿ ಪರಿಶುದ್ದವಾದ ಮನಸ್ಸಿನಿಂದ ಆಶಯವನ್ನು ಬೆಳಗಿಸಬೇಕು. ಈ ಎಲ್ಲಾ ನ್ಯಾಸ ಪ್ರಕ್ರಿಯೆ ಪೂರೈಸಿ ಸನ್ಯಾಸಿಯಾಗುವಲ್ಲಿ ಮೊದಲು ಧರ್ಮ ಏನೆಂದು ತಿಳಿದಿರಬೇಕು. ಈಗ ಧರ್ಮ ಏನೆಂದು ತಿಳಿಯುವ ಪ್ರಯತ್ನ ನೀನು ಮಾಡಿದರೆ, ಕ್ಷತ್ರಿಯನಾಗಿ ಸಂರಕ್ಷಣೆ ಮತ್ತು ಪರಿಪಾಲನೆ ನೀನು ಮಾಡಬೇಕಾದ ಕರ್ಮ ಮತ್ತು ನಿನಗದು ಧರ್ಮವೂ ಆಗಿದೆ. ನಿನ್ನ ಆದ್ಯ ಕರ್ತವ್ಯದಿಂದ ವಿಮುಖನಾದೆ ಎಂದಾದರೆ ಅಧಃಪತನಕ್ಕೆ ಹೇತುವಾಗುತ್ತದೆ. ನಿನ್ನದ್ದು ಆಗಿರುವ ಕರ್ಮ ಪಾಲನೆ ಮಾಡುತ್ತಾ ನಿನಗೆ ಮರಣ ಬಂದರೂ ಶ್ರೇಯಸ್ಸಿದೆ. ಆದರೆ ತನ್ನದಾದುದನ್ನು ಅರ್ಧದಲ್ಲಿ ಬಿಟ್ಟು, ಕರ್ತವ್ಯ ಪೂರೈಸದೆ ಪರಧರ್ಮಕ್ಕೆ ಮನಮಾಡಿದರೆ ಅಶ್ರೇಯಸ್ಸೂ, ಅಪಯಶಸ್ಸೂ ಪ್ರಾಪ್ತವಾಗುತ್ತದೆ. ಆದುದರಿಂದ ಮನುಷ್ಯನಾಗಿ ಹುಟ್ಟಿದವರು ಸ್ವಧರ್ಮ ನಿರತರಾಗಿ ಉಚಿತ ಕರ್ಮಗಳನ್ನು ಮಾಡುತ್ತಾ ವಿಶೇಷವಾದ ಯೋಗಸಾಧನೆ ಯಿಂದ ಮುಕ್ತಿಯನ್ನು ಹೊಂದಬೇಕು”.
“ವಾಸುದೇವಾ! ನನ್ನ ಮನಸ್ಸು ಇನ್ನಷ್ಟು ಗೊಂದಲಕ್ಕೊಳಗಾಗಿದೆ. ನಾನು ಸರ್ವ ತ್ಯಾಗ ಮಾಡಿ ಸನ್ಯಾಸಿಯಾಗಲಾರದು, ಅದು ಅಧಃಪತನಕ್ಕೆ ದಾರಿ ಎಂದಿರುವೆ. ನನ್ನ ಕರ್ಮವನ್ನು ಮುಂದುವರಿಸಲು ಉಪದೇಶಿಸಿರುವೆ. ಹಾಗೆ ಮಾಡುವಲ್ಲಿ ಯೋಗಸಾಧನೆಯಿಂದ ಮುಕ್ತನಾಗಬಹುದು ಎನ್ನುತ್ತಿರುವೆ. ನೀನು ಹೇಳುತ್ತಿರುವ ಯೋಗ ಎಂದರೇನು? ಮತ್ತು ಅದನ್ನು ಸಾಧಿಸುವುದಾದರೂ ಹೇಗೆ?
ಮುಂದುವರಿಯುವುದು…








