
ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರೊಂದಿಗೆ ಮಾತನಾಡಿ ಕರ್ನಾಟಕದ 108 ಆಂಬುಲೆನ್ಸ್ ಸೇವೆಯ ನಿರ್ವಹಣೆಯಲ್ಲಿ ಖಾಸಗಿ ಏಜೆನ್ಸಿಗಳ ಗೊಂದಲಗಳನ್ನು ತೊಡೆದುಹಾಕಲು ಸರ್ಕಾರ ನೇರ ನಿಯಂತ್ರಣ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಮಾಧ್ಯಮಗಳಲ್ಲಿ 108 ಆಂಬುಲೆನ್ಸ್‌ಗಳು ಕೆಟ್ಟು ನಿಂತಿವೆ ಎಂದು ತೋರಿಸುತ್ತಿರುವುದು ಸತ್ಯವಲ್ಲ. ಕೆಟ್ಟು ನಿಂತ ಗಾಡಿಗಳನ್ನು ಗುಜರಿಗೆ ಹಾಕಬೇಕಿತ್ತು. ಆದರೆ ನಮ್ಮ ಬಳಿ ಸರಿಯಾಗಿ ಕೆಲಸ ಮಾಡುತ್ತಿರುವ 700 ಆಂಬುಲೆನ್ಸ್‌ಗಳಿವೆ. ಕೇವಲ 300 ಆಂಬುಲೆನ್ಸ್‌ಗಳು ಮಾತ್ರ ಕೆಲಸ ಮಾಡುತ್ತಿವೆ ಎಂಬುದು ತಪ್ಪು ಎಂದು ಹೇಳಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಪೈಲಟ್ ಪ್ರಾಜೆಕ್ಟ್ ರೀತಿಯಲ್ಲಿ 108 ಸೇವೆಯನ್ನು ಸರ್ಕಾರದ ಕಂಟ್ರೋಲ್ ತೆಗೆದುಕೊಂಡಿದ್ದು ಸೇವೆಯನ್ನು ಉತ್ತಮಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ. ಹೊಸ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದ್ದು, ಇನ್ನೂ 200 ಆಂಬುಲೆನ್ಸ್‌ಗಳ ಖರೀದಿಗೆ ಅನುಮೋದನೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
ಖಾಸಗಿ ಏಜೆನ್ಸಿಗಳಿಗೆ ಇದು ಸ್ವಲ್ಪ ಕಷ್ಟ ಆಗಬಹುದು. ಆದ್ರೆ ಆಂಬುಲೆನ್ಸ್ ನಿಯಂತ್ರಣ ಸರ್ಕಾರ ವಶಕ್ಕೆ ಪಡೆಯಲಿದೆ. ಇನ್ನೂ ಎರಡು ತಿಂಗಳಿನಲ್ಲಿ ಒಂದು ಹಂತಕ್ಕೆ ಬರಲಿದೆ. ಏಜೆನ್ಸಿ ಗಳು ಹಣ ಉಳಿಸಲು ಕೆಲವು ಗೊಂದಲಗಳನ್ನು ಮಾಡಿಕೊಳ್ಳುತ್ತವೆ. ಇದನ್ನೆಲ್ಲಾ ಸರಿ ಮಾಡಲೆಂದೇ ಸರ್ಕಾರ ಕಂಟ್ರೋಲ್ ಗೆ ತೆಗೆದುಕೊಳ್ಳಲಿದೆ. ದೇಶದಲ್ಲೇ ಆಂಬುಲೆನ್ಸ್ ಸೇವೆಯಲ್ಲಿ ಕರ್ನಾಟಕವು ಪ್ರಥಮ ಸ್ಥಾನ ಪಡೆಯಲಿದೆ. ವ್ಯವಸ್ಥೆ ಸುಧಾರಣೆಗೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದರು.








