ಭಾಗ 320
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೨೦ ಮಹಾಭಾರತ
ಕೃಷ್ಣನು ಉತ್ತರ ನೀಡುತ್ತಾ “ಉಲೂಕ ನೀನು ಇಲ್ಲಿಗೆ ಬಂದು, ಅದೂ ಈ ಸಂದರ್ಭದಲ್ಲಿ ಕಥೆ ಹೇಳಿರುವೆ, ಅದೂ ದುರ್ಯೋಧನನ ಮುಖವಾಣಿಯಾಗಿ – ಆಕ್ಷೇಪವಿಲ್ಲ. ಆದರೆ ಒಂದು ವಿಚಾರವನ್ನು ತಿಳಿಸಬೇಕಾದ ಅನಿವಾರ್ಯತೆ ಇದೆ. ನೀನು ಹೇಳಿರುವ ಈ ಕಥೆಯನ್ನು ನಾರದ ಮಹರ್ಷಿಗಳು ಧೃತರಾಷ್ಟ್ರನಿಗೆ ಹೇಳಿರುವರೆಂದು ತಿಳಿಸಿರುವೆ. ತ್ರಿಕಾಲ ಜ್ಞಾನಿಗಳಾದ ನಾರದರು ಯಾರು ಏನನ್ನು ಅರ್ಥೈಸಿ ಕೊಳ್ಳಬೇಕಾದ ಅಗತ್ಯವಿತ್ತೋ ಅವರಿಗೆ ಹೇಳಿದ್ದಾರೆ. ಅನರ್ಥ ಕಾರ್ಯವನ್ನು ಮಾಡಬಾರದು, ಕಪಟ ದೀರ್ಘ ಕಾಲ ಸಾಗದು – ಒಂದಲ್ಲ ಒಂದು ದಿನ ತಿಳಿದೇ ತಿಳಿಯುತ್ತದೆ. ಆದುದರಿಂದ ಅಹಿತವಾದ ಆ ದಾರಿಯನ್ನು ತ್ಯಜಿಸಿ ವಿಹಿತವಾದ ಸನ್ಮಾರ್ಗದಲ್ಲಿ ಕ್ರಮಿಸಬೇಕೆಂಬ ಉದ್ದೇಶದಿಂದ ಧೃತರಾಷ್ಟ್ರನನ್ನು ಉದ್ದೇಶಿಸಿ ಹೇಳಿರುವ ಕಥೆಯನ್ನು ತದ್ವಿರುದ್ದವಾಗಿ ಇಲ್ಲಿ ಹೇಳಿದುದರ ಉದ್ದೇಶವೇನು? ಈ ತನಕ ಅಧರ್ಮದ ಹಾದಿಯನ್ನು ಯಾವ ಕಾರಣಕ್ಕೂ ಅನುಸರಿಸದ ಧರ್ಮರಾಯನಲ್ಲಿ ಯಾವುದು ನಿನ್ನ ದುರ್ಯೋಧನನಿಗೆ ಕಪಟದ ಮುಖವಾಡದೊಳಗಿನ ಧರ್ಮ ಎಂದು ಕಂಡಿತೋ ನಾನರಿಯೆ. ಆತನಿಗೆ ಹೇಳು ಈ ಕಥೆ ನಿನಗಾಗಿ ಮತ್ತು ನಿನ್ನ ಬುದ್ದಿಗಾಗಿ ನಾರದರಿಂದ ಪ್ರಣೀತವಾಗಿ ನಿರೂಪಿಸಲ್ಪಟ್ಟಿರುವುದು. ಸ್ವಾರ್ಥ ಮತ್ತು ಕಪಟದ ಹಾದಿ ತೊರೆದು ಧರ್ಮ ಪಥ ಅನುಸರಿಸುವುದಾದರೆ ಈಗಲೂ ಅವಕಾಶವಿದೆ. ಇಲ್ಲವೆಂದಾರೆ ಸಾಗಲಿರುವ ಯುದ್ದದ ಪರಿಣಾಮ ಉತ್ತರವಾಗಿ ಸಾಕ್ಷಿಯಾಗಲಿದೆ.” ಎಂದನು.
ಕೃಷ್ಣನ ಮಾತು ಕೇಳಿ ಅರ್ಜುನನೂ ಅಭಿಪ್ರಾಯ ತಿಳಿಸಲು ಮುಂದಾದನು. “ಎಲೈ ಉಲೂಕನೇ! ಬೆಕ್ಕು ಸನ್ಯಾಸಿಯಾದ ಕಥೆಯನ್ನಷ್ಟೇ ಅಲ್ಲ, ಇನ್ನೆಷ್ಟೋ ಕಥೆಗಳನ್ನು ನಾವು ಈಗಾಗಲೇ ತಿಳಿದಿದ್ದೇವೆ. ಅಷ್ಟು ಮಾತ್ರವಲ್ಲ ತದ್ವಿರುದ್ದವಾಗಿ ಸನ್ಯಾಸಿಯೇ ಬೆಕ್ಕಾಗಿ ಹೋಗಿರುವುದನ್ನೂ ನೋಡುತ್ತಿದ್ದೇವೆ. ನಿನ್ನನ್ನು ದೂತನಾಗಿ ಕಳುಹಿಸಿರುವ ದುರ್ಯೋಧನನ ಪಿತ ಮಹಾರಾಜ ಧೃತರಾಷ್ಟನು ‘ನನ್ನ ಮಗ ಮಾತು ಕೇಳುತ್ತಿಲ್ಲ. ಹೇಗಾದರು ಮಾಡಿ ಆತನನ್ನು ಸಂಧಾನಕ್ಕೆ ಒಪ್ಪಿಸಿ ಉಳಿಸಿಕೊಡಿ’ ಎಂದು ಬೇಡುತ್ತಿರುವ ಸಂಗತಿ ನಿನಗೂ ತಿಳಿದಿದೆಯಲ್ಲಾ? ಅಷ್ಟು ತಿಳಿದಿದ್ದರೆ ಬೆಕ್ಕು ಯಾರು ಸನ್ಯಾಸಿ ಯಾರು ಎಂದು ನೀನು ತೀರ್ಮಾನಿಸಿಕೊಂಡು ಹೋಗಿ ನಿನ್ನ ದುರ್ಯೋಧನನಿಗೆ ತಿಳಿಸು” ಎಂದು ತೀಕ್ಷ್ಣವಾಗಿ ಹೇಳಿದನು.
ಭೀಮಸೇನ ಮೊದಲೆ ಉಗ್ರ ಸ್ವಭಾವದವನು. ತಾಳ್ಮೆ ಕಡಿಮೆಯಿದ್ದರೂ ಸೈರಿಸಿಕೊಂಡು “ಹೇ ಉಲೂಕಾ! ನೀನು ದೂತನಾಗಿ ಬಂದಿದ್ದೇನೆ ಎಂದು ಹೇಳಿ ಬದುಕಿಕೊಂಡಿರುವೆ. ಇಲ್ಲವೆಂದಾದರೆ ನಿನ್ನ ಸ್ಥಿತಿ ಭಿನ್ನವಾಗಿರುತ್ತಿತ್ತು. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದು ತನಗ್ಯಾರು ಕಾಣಿಸುತ್ತಿಲ್ಲ ಅಂದುಕೊಂಡಿರಬಹುದು. ಆದರೆ ಹಾಲು ಕುಡಿಯುತ್ತಿರುವುದು ಕಣ್ತೆರೆದಿರುವ ಉಳಿದವರಿಗೆ ಕಾಣಿಸುತ್ತದೆ ಎಂದು ನಿನ್ನ ದುರ್ಯೋಧನನಿಗೆ ಹೋಗಿ ಹೇಳು” ಎಂದು ಅಬ್ಬರಿಸಿದನು.
ನಕುಲನೂ ರೋಷಭರಿತನಾಗಿ “ಉಲೂಕಾ! ದ್ಯೂತವಾಡಿ ಮೋಸದ ತಂತ್ರ ಬಳಸಿ ಸರ್ವ ಸಂಪದ, ಸಾಮ್ರಾಜ್ಯ ಪಡಕೊಂಡವರು ಯಾರು? ಸಾಮರ್ಥ್ಯವಿದ್ದರೆ ಸಾಧಿಸಿ ಪಡಕೊಳ್ಳಬೇಕಿತ್ತಲ್ಲವೆ? ಜೂದಾಳಿಯಾಗಿ ಸನ್ಯಾಸಿ ಬೆಕ್ಕಿನ ಹಾದಿಯಲ್ಲಿ ಬದುಕಿದವರು ಯಾರು ಎಂದು ಹೋಗಿ ನಿನ್ನನ್ನು ಕಳುಹಿಸಿದ ಆ ಸನ್ಯಾಸಿ ಬೆಕ್ಕಿನಲ್ಲಿ ಕೇಳು” ಎಂದನು.
ಸಹದೇವನು ವ್ಯಂಗ್ಯದ ನುಡಿಯಲ್ಲಿ “ಹೇ ದೂತ ಮಹಾಶಯಾ! ಆ ಕಳ್ಳ ಸನ್ಯಾಸಿ ಬೆಕ್ಕಿನ ಅಪ್ಪ ಬೆಕ್ಕಿಗೆ ಕಣ್ಣು ಕಾಣಿಸುತ್ತಿರಲಿಲ್ಲವಂತೆ.. ಹೌದೇ? ಎಂದು ಕೇಳಿ ನೋಡು” ಎಂದನು.
ಕೆರಳಿದ ದೃಷ್ಟದ್ಯುಮ್ನ “ಇವನಲ್ಲೇನು ಜಿಜ್ಞಾಸೆ. ಹೇ ದೂತಾ! ನೀನು ಬಂದ ಕಾರ್ಯ ಮಾಡಿ ಆಯಿತಲ್ಲ? ಇನ್ನೇನಾದರು ಇದ್ದರೆ ಹೇಳು. ಇಲ್ಲವೆಂದಾದರೆ ಅಗೋ ಅದು ಹೊರ ಹೋಗುವ ದಾರಿ. ಇಲ್ಲಿಂದ ಹೊರಟು ಹೋಗಿ ನಿನ್ನ ಪ್ರಾಣ ಉಳಿಸಿಕೋ. ನಿನ್ನ ದೊರೆಗೆ ಇನ್ನೇನು ಮಾಡಲಿದೆಯೊ ಅದಕ್ಕೆ ಸಿದ್ಧನಾಗಲು ಹೇಳು” ಎಂದು ಎಚ್ಚರಿಸಿದನು.
ಉಲೂಕ ಕ್ಷಣಕಾಲವೂ ಅಲ್ಲಿ ನಿಲ್ಲದೆ ಕೌರವ ಬಿಡಾರದತ್ತ ಧಾವಿಸಿದನು. ಬಂದು ದುರ್ಯೋಧನನಲ್ಲಿ ಪ್ರತಿ ವಿಚಾರವನ್ನೂ ಬಿಡಿಸಿ ವಿವರಿಸಿ ಹೇಳಿಕೊಂಡನು. ಆಗ ದುರ್ಯೋಧನ ಕರ್ಕಶವಾದ ಅಟ್ಟಹಾಸಗೈದು, “ಆಗಲಿ… ಆಗಲಿ. ಆ ಪಾಂಡವರಿಗೆ ಏನಾಗಬೇಕೋ ಅದೇ ಆಗಲಿದೆ” ಎಂದು ಆರ್ಭಟಿಸಿದನು. ಉಲೂಕನಿಗೆ ಹೊರ ಹೋಗಲು ಅನುಮತಿಯಿತ್ತು. ಕೆಲಹೊತ್ತು ಯೋಚಿಸಿ, ಭೀಷ್ಮಾಚಾರ್ಯರ ಬಳಿ ನಡೆದನು.
ಪಿತಾಮಹರ ಬಳಿ ಬಂದು “ಅಜ್ಜಾ! ನೀವು ಸೇನಾಪತಿಯಾಗಿರುವ ಕಾಲದಲ್ಲಿ ನಮಗೆ ಯಾವ ಭಯವೂ ಇಲ್ಲ. ಆದರೂ ಯುದ್ದವೆಂದ ಮೇಲೆ ರಣತಂತ್ರ ಬೇಕಲ್ಲವೇ? ನಮ್ಮ ಹಾಗೂ ಪಾಂಡವರ ಎರಡೂ ಪಕ್ಷಗಳೂ ಅತಿ ಪ್ರಬಲವಾಗಿವೆ. ಎರಡೂ ಪಕ್ಷದಲ್ಲಿ ಅಮಿತ ಸೈನ್ಯಬಲವಿದೆ. ಹಾಗಾಗಿ ನನಗೆ ಇಲ್ಲಿ ಸೇರಿರುವ ಇತ್ತಂಡಗಳ ವೀರರಲ್ಲಿ ಮಹಾವೀರ ಪುರುಷರು, ರಥರು ಅತಿರಥರು ಮುಂತಾದ ವರ್ಗಗಳು ಹೇಗೆ – ಹೇಗೆ ಇವೆ? ವಿಶೇಷವಾದ ಶಸ್ತ್ರಾಸ್ತ್ರಗಳು ಯಾವುವು? ಮುಂತಾದ ವಿಚಾರಗಳನ್ನು ತಿಳಿದುಕೊಳ್ಳಬೇಕೆಂಬ ಮನಸ್ಸಾಗಿದೆ. ದಯವಿಟ್ಟು ನೀವು ನಮ್ಮ ಹಾಗು ಎದುರಾಳಿಗಳ ಬಲಾಬಲದ ವಿಚಾರ ತಿಳಿಸುವ ಕೃಪೆ ತೋರಬೇಕು ಎಂದು ಕೇಳಿಕೊಂಡನು.
ಮುಂದುವರಿಯುವುದು…






























































































































