
ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ದೇವರಗುಡಿಹಾಳ ರಸ್ತೆಯ ವಿಶಾಲನಗರದಲ್ಲಿ ಪಶ್ಚಿಮ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 34ರಲ್ಲಿ ₹10 ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ಕಾಮಗಾರಿಗೆ ಶಂಕುಸ್ಥಾಪನೆ, ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದು ಈ ವೇಳೆ ಕೇಂದ್ರ ಸರ್ಕಾರದಿಂದ ಅನುದಾನ ತರಬೇಕೆಂದರೆ ಸುತ್ತಾಡಿ ಸುತ್ತಾಡಿ 4-5 ಜತೆ ಚಪ್ಪಲಿ ಹರಿಯುತ್ತವೆ. ಕೇಂದ್ರ ಸಚಿವರ ಮನೆಗೆ ಹೋಗಿ ಅನುದಾನ ತರುವುದು ಸುಲಭವಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಬೇರೆ ದೇಶಕ್ಕೆ ಹೋಲಿಸಿದರೆ, ಭಾರತದ ಆರ್ಥಿಕ ಪರಿಸ್ಥಿತಿ ಬಹಳಷ್ಟು ಹದಗೆಟ್ಟು ಹೋಗಿದೆ. ಇದು ಹೀಗೆಯೇ ಮುಂದುವರಿದಲ್ಲಿ, ಬರುವ ದಿನಗಳಲ್ಲಿ ದೇಶದ ಜನರು ಪ್ರಧಾನಿ ಮೋದಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಬಿಹಾರದಲ್ಲಿ ಚುನಾವಣೆ ಬಂದಿದೆ ಎಂದು ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ವಿಶೇಷ ಅನುದಾನ ನೀಡುತ್ತಿದೆ. ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ವಾರ್ಷಿಕ ಆದಾಯ ಎಷ್ಟಿದೆ ಎಂದು ಅವರು ಹೇಳಲಿ? ಎಂದು ಸವಾಲು ಹಾಕಿದರು.
ಬಿಜೆಪಿಗರು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಚರ್ಚೆ ಮಾಡಲಿ. ಜಿಎಸ್‌ಟಿ ಕಡಿತದ ಬಗ್ಗೆ ದೊಡ್ಡ ಭಾಷಣ ಮಾಡುವ ಬಿಜೆಪಿಯವರು, ಮೊದಲು ತಾವೇ ಜಿಎಸ್‌ಟಿ ಏರಿಕೆ ಮಾಡಿ, ಈಗ ಕಡಿಮೆ ಮಾಡಿದ್ದೇವೆ ಎಂದು ವಿಜಯೋತ್ಸವ ಆಚರಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಜಿಎಸ್‌ಟಿ ಕಡಿಮೆ ಮಾಡಿದ್ದಾರೆ. ದೇಶದ ಸೈನಿಕರು ಮಾಡಿದ ಶೌರ್ಯದ ಕೆಲಸವನ್ನು ಮೋದಿ ಅವರು ಆಪರೇಶನ್ ಸಿಂದೂರ ಎಂದು ಹೇಳಿ ಮತ ಕೇಳುತ್ತಿದ್ದಾರೆ ಎಂದು ಟೀಕಿಸಿದರು.



















