ಭಾಗ 294
ಭರತೇಶ್ ಶೆಟ್ಟಿ, ಎಕ್ಕಾರ್

ಕೃಷ್ಣನ ಪ್ರಶ್ನೆಗಳಿಗೆ ಧೃತರಾಷ್ಟ್ರ ಉತ್ತರಿಸಲಿಲ್ಲ. ಕೃಷ್ಣ ಮುಂದುವರೆಸಿದ “ಮಹಾರಾಜ ಈ ಎಲ್ಲಾ ಅಪರಾಧ, ಅಪವಾದಗಳಿಗೆ ನೀನೇ ಹೊಣೆಗಾರನಾಗಿರುವೆ. ನಿನ್ನ ಪುತ್ರ ವ್ಯಾಮೋಹದ ಕಾರಣದಿಂದಲೆ ಅನರ್ಥಗಳಾಗುತ್ತಿವೆ. ಇಂದು ನೂರಾರು ಮಕ್ಕಳಿಂದ ತುಂಬಿ ತುಳುಕಾಡುತ್ತಿದೆ ಹಸ್ತಿನಾಪುರ. ಅದೇ ಮಕ್ಕಳಿಂದ ಆಪತ್ತೂ ಬಂದೊದಗಿದೆ. ಆದರೆ ಹಿರಿಯರ ಹಿಂದಿನ ಗತ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಬೇಕು. ಒಂದು ಕಾಲದಲ್ಲಿ ಉತ್ತರಾಧಿಕಾರಿ ಆಗಲು ಹಸ್ತಿನಾಪುರದಲ್ಲಿ ಒಬ್ಬ ಮಗನೂ ಇಲ್ಲದೆ ಪರಿತಪಿಸುವ ಕಾಲ ಬಂದಿತ್ತು. ಆ ಸಮಯ ಋಷಿ ನಿಯೋಗದ ಮೂಲಕ ಸಂತಾನ ಪಡೆದು ವಂಶ ಬೆಳೆದಿದೆ. ಒಂದರ್ಥದಲ್ಲಿ ವಿವೇಚಿಸಿದರೆ ಅಧರ್ಮಿಗಳಾದ ನೂರು ಮಕ್ಕಳಿಂದ ಈಗ ಒದಗಿರುವ ವಿನಾಶಕಾರಿ ವಿಪತ್ತಿಗಿಂತ, ಸಂತಾನವಿಲ್ಲದ ಪರಿತಾಪದ ಆ ಕಾಲ ಶ್ರೇಷ್ಟ ಎನಿಸದೇ? ಅದು ಹಾಗಿರಲಿ, ಇದೇ ಸಿಂಹಾಸನದಲ್ಲಿ ಸಾಧಿಸಿ ಚಕ್ರವರ್ತಿಯಾಗಿ ವಿರಾಜಮಾನನಾಗಿದ್ದ ನಿನ್ನ ಅನುಜ ಪಾಂಡು. ನಂತರದ ಬೆಳವಣಿಗೆಯಲ್ಲಿ ಶಾಪಗ್ರಸ್ಥನಾಗಿ ಪಾಂಡು ಚಕ್ರವರ್ತಿ ವನವಾಸಿಯಾಗಿ ಮರಣ ಹೊಂದಿದ, ನೀನು ರಾಜ ಪ್ರತಿನಿಧಿಯಾದೆ. ಪಾಂಡು ಚಕ್ರವರ್ತಿಯ ಮರಣಾನಂತರ ಆತನ ಮಕ್ಕಳು ಅನಾಥರಾಗದಂತೆ ಪೋಷಿಸಿ, ನಿನ್ನ ಮಕ್ಕಳ ಜೊತೆಯಲ್ಲೇ ವಿದ್ಯಾಭ್ಯಾಸ ನೀಡಿ ಬೆಳೆಸಿದವನು ನೀನು. ಚಂದ್ರವಂಶದ ಚಕ್ರವರ್ತಿಯ ಮಕ್ಕಳಾದ ಪಾಂಡವರು ಯೋಗ್ಯರೂ, ಅಧಿಕಾರದ ಹಕ್ಕು ಬಾಧ್ಯರೂ ಆಗಿದ್ದಾರೆ. ಬುದ್ದಿ ಬೆಳೆದಿರದ ಬಾಲ್ಯಾವಸ್ಥೆಯಲ್ಲಿ ನಿನ್ನ ಮಕ್ಕಳು ಪಾಂಡು ಪುತ್ರರಿಗೆ ನೀಡಿದ ತೊಂದರೆ, ಮಾಡಿದ ಅಪರಾಧಗಳನ್ನು ಮಕ್ಕಳೆಂದು ಮನ್ನಿಸೋಣ. ಆದರೆ ಬೆಳೆದ ಮೇಲೆ ಕೌರವರಿಗೂ ಸೋದರನಾದ ಭೀಮನಿಗೆ ವಿಷಪ್ರಾಶನ ಮಾಡಿಸಿದ್ದು, ವಿಷಸರ್ಪಗಳ ವಾಸ ತಾಣ ಪ್ರಮಾಣಕೋಟಿ ಸರೋವರಕ್ಕೆ ಎಸೆದದ್ದು, ವಾರಣಾವತದ ಅರಗಿನ ಅರಮನೆಯಲ್ಲಿ ಪಾಂಡವರ ಕುಟುಂಬವನ್ನು ಸಜೀವ ದಹನ ಮಾಡಲು ಪ್ರಯತ್ನಿಸಿದ್ದು ಕ್ಷಮಿಸುವಂತಹ ಅಪರಾಧಗಳಾಗಿತ್ತೆ? ಆಗಲೂ ನೀನು ಸುಮ್ಮನುಳಿದೆ. ಕಾಡಾಡಿಗಳಾಗಿ ತಿರುಗಿ, ಪಾಂಚಾಲದ ಸ್ವಯಂವರದಲ್ಲಿ ದ್ರೌಪದಿಯನ್ನು ವರಿಸಿ ಪ್ರಕಟರಾದ ಪಾಂಡವರನ್ನು ನೀವು ಕರೆಸಿಕೊಂಡವರು. ಬಳಿಕ ಪಾಂಡವರಿಗೆ ಇಂದ್ರಪ್ರಸ್ಥದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಸಿ ಕೊಟ್ಟೆ. ಅಲ್ಲಿಂದ ಸ್ವ ಸಾಮರ್ಥ್ಯದಲ್ಲಿ ಬೆಳೆದು ರಾಜಸೂಯ ಯಾಗ ಮಾಡಿ, ಉದಾರ ದಾನ ಧರ್ಮ ನೀಡಿ ಚಂದ್ರವಂಶದ ಕೀರ್ತಿ ಬೆಳಗಿದವರು ನಿನ್ನ ತಮ್ಮನ ಮಕ್ಕಳು. ಈ ಮಹತ್ಕಾರ್ಯಕ್ಕೆ ಹಸ್ತಿನಾವತಿಯಿಂದ ನೀವೇನೂ ಸಹಾಯ ಮಾಡಿಯೂ ಇಲ್ಲ, ಅವರು ಅಪೇಕ್ಷೆ ಪಟ್ಟದ್ದೂ ಇಲ್ಲ. ಅದಕ್ಕಿಂತಲೂ ನೇರವಾಗಿ ಹೇಳುವುದಾದರೆ ಪಾಂಡವರು ಸಮರ್ಥರಾಗಿ ಸಾಮರ್ಥ್ಯದಿಂದಲೆ ಸಾಧಿಸಿದರು. ಅಂತಹ ಧರ್ಮ, ಪರಾಕ್ರಮ, ಜ್ಞಾನ, ವ್ಯವಹಾರ ಚತುರರಾದ ನಿನ್ನ ತಮ್ಮನ ಮಕ್ಕಳಿಗೂ ನಿನ್ನ ಮಕ್ಕಳಿಗೂ ದಾಯಾದ್ಯ ಮತ್ಸರ ಬೆಳೆದಾಗ, ನೀನು ಸರಿಪಡಿಸಿ ಮುನ್ನಡೆಸುವ ಬದಲು ನಿನ್ನ ಮಕ್ಕಳ ಕೈಗೊಂಬೆಯಾಗಿ ಹೋದೆ. ಸುಹೃದ್ಯೂತವೆಂದು ವಿದುರನನ್ನು ಕಳುಹಿಸಿ ಪಾಂಡುಸುತರನ್ನು ನೀನೇ ಹೇಳಿ ಕಳುಹಿಸಿದಂತೆ ಸ್ನೇಹ ಸೌಹಾರ್ದ ಬೆಳೆಸಲು ದುರ್ಯೋಧನನ ಜೊತೆ ಧರ್ಮರಾಯ ಆಡಬೇಕಿತ್ತು. ಯಾಕೆಂದರೆ ಅವರಿಬ್ಬರೂ ದ್ಯೂತದಲ್ಲಿ ಪರಿಣತರಲ್ಲ, ಸೋಲು ಗೆಲುವು ಕೇವಲ ಕಾಲಕ್ಷೇಪದ ಸ್ನೇಹ ವೃದ್ಧಿಯ ಉದ್ದೇಶದಿಂದ ಆಡುವಂತಾಗಬೇಕಿತ್ತು. ನಿನ್ನ ಮಾತನ್ನು ನೀನು ಮರೆತು ಬಿಟ್ಟವನಾದೆ. ಯುಧಿಷ್ಠಿರ ದ್ಯೂತ ಪರಿಣತ ಶಕುನಿಯ ಜೊತೆ ಆಡುವಂತೆ ಆಯಿತು. ಸಮರ್ಥನೊಡನೆ ಹವ್ಯಾಸಿ ಸ್ಪರ್ಧೆಗಿಳಿದರೆ ಫಲಿತಾಂಶ ಆಡಿ ನೋಡಿ ತಿಳಿಯ ಬೇಕೆ? ಇದಕ್ಕಿಂತಲೂ ಬಹುದೊಡ್ಡ ಅಧರ್ಮ – ಅನ್ಯಾಯ ನಿನ್ನಿಂದಾಗಿದೆ. ಸ್ನೇಹ ಪೂರ್ವಕವಾಗಿ ಸಾಗಬೇಕಾಗಿದ್ದ ದ್ಯೂತ ಪಣ ಮುಖೇನ ನಡೆಯುವಂತೆ ಆದಾಗಲೂ ಒಪ್ಪಿಗೆಯಿತ್ತು ಸುಮ್ಮನುಳಿದೆ. ನಿರೀಕ್ಷೆಯಂತೆ ದ್ಯೂತದಲ್ಲಿ ಧರ್ಮಜ ತನ್ನ ವೀರಾಗ್ರಣಿ ಸಹೋದರರನ್ನೂ, ಜೊತೆಗೆ ಸಕಲೈಶ್ವರ್ಯ ಕಳಕೊಂಡು ಕೊನೆಗೆ ಸತಿ ದ್ರೌಪದಿಯನ್ನೂ ಪಣವಾಗಿಟ್ಟು ಆಡಿ ಕಳಕೊಳ್ಳುವಂತಾಯಿತು. ಆ ಸಮಯ ಪಂಚ ಪಾಂಡವರ ವಲ್ಲಭೆ ಪಾಂಚಾಲೆಯ ಸೆರಗಿಗೆ ಕೈಯಿಕ್ಕಿ ನಿನ್ನ ಮಕ್ಕಳಿಂದ ಮಾನಭಂಗದ ಪ್ರಯತ್ನವಾಯಿತು. ಅಕ್ಷಮ್ಯ ಘೋರ ಪಾತಕ ಕೃತ್ಯ – ಕ್ರೌರ್ಯದ ಪರಮಾವಧಿ ಪ್ರಕಟವಾಯಿತು. ಇದೆಲ್ಲ ನಡೆಯುತ್ತಿರುವಾಗ ನೀನು ನೋಡಲಾರೆ, ಆದರೆ ಆಕೆಯ ಆರ್ತನಾದವೂ ನಿನಗೆ ಕೇಳದೆ ಹೋಯಿತೆ? ಇಚ್ಚಾಮರಣಿ ಭೀಷ್ಮಾಚಾರ್ಯರೂ ಕಣ್ಣು ಕಿವಿ ಮುಚ್ಚಿದರು ಹೊರತು ಅನರ್ಥ ತಡೆಯಲು ಹೋಗಲಿಲ್ಲ. ಮನೆ ಮಗಳಾಗಿ ಬಂದ ಹೆಣ್ಣನ್ನು ತುಂಬಿದ ಸಭೆಯಲ್ಲಿ ಎಳೆದಾಡುವಾಗ ಹಸ್ತಿನೆಯ ಆಸ್ಥಾನದಲ್ಲಿ ನ್ಯಾಯವಿಲ್ಲದೆ ಹೋಯಿತೇ? ಲೋಕ ಕಂಡು ಕೇಳರಿಯದ ಅಧರ್ಮ ನಡೆದು ಹೋಯಿತು. ಹೇಗೊ ಆಕೆಯ ಧರ್ಮ ಬಲದಿಂದ ಅಗೋಚರವಾಗಿ ಮಾನ ರಕ್ಷಿಸಲ್ಪಟ್ಟಿತು. ಧರ್ಮಾತ್ಮರಾದ ಪಾಂಡವರ ಸತಿಯನ್ನು ದುರ್ಯೋಧನ ತೊಡೆ ತಟ್ಟಿ ಅಂತಃಪುರಕ್ಕೆ ಕರೆದ ಕ್ಷಣವೂ, ಧರ್ಮಪಾಲರೂ ಶಾಂತಸ್ವರೂಪಿಗಳೂ ಆದ ಪಾಂಡವರು ಉಗ್ರರಾಗಿ ಭಯಾನಕ ಪ್ರತಿಜ್ಞೆಗಳನ್ನು ಮಾಡುವ ಸ್ಥಿತಿ ನಿರ್ಮಾಣವೂ ಆಗಿ ಹೋಯಿತು. ಪಾಂಡವರೇನಾದರೂ ಆ ಹೊತ್ತು ಧರ್ಮ ಪಥ ತೊರೆಯುತ್ತಿದ್ದರೆ ನಿನಗಿಂದು ಕಳಂಕಪ್ರಾಯರಾದ ಈ ಮಕ್ಕಳಿರುತ್ತಿರಲ್ಲ. ಈ ವೃತ್ತಾಂತದಲ್ಲಿ ಸಂಭವಿಸಿದ ಅತಿಮಾನುಷ ರಕ್ಷಣೆ, ಘೋರ ಪ್ರತಿಜ್ಞೆಗಳನ್ನು ಕೇಳಿ ಭಯಗೊಂಡೆಯೊ, ಅಥವಾ ಯಾವ ಸದ್ಬುದ್ದಿ ನಿನ್ನ ಮನ ಆವರಿಸಿತೋ! ದ್ರೌಪದಿಯನ್ನು ಸಂತೈಸಿ, ಅವರದ್ದಾಗಿದ್ದ ದ್ಯೂತದಲ್ಲಿ ಪಣವಾಗಿರಿಸಿ ಸೋತ ಸಕಲ ಸಂಪದವನ್ನು ಹಿಂದಿರುಗಿಸಿದೆ! ಬಳಿಕ ಅವರು ನಿನಗೆ ನಮಸ್ಕರಿಸಿ ಹೊರಟು ಇಂದ್ರಪ್ರಸ್ಥದತ್ತ ಹೋಗುತ್ತಿದ್ದರು. ಅಲ್ಲಿಂದ ಮತ್ತೆ ನೀನು ಕರೆಸಿಕೊಂಡೆ. ಮರುದ್ಯೂತದ ಪ್ರಸ್ತಾಪವಿತ್ತು ಮೊದಲಿನಂತಲ್ಲ, ಸೌಹಾರ್ದಕ್ಕಾಗಿ ಎಂದು ಕರೆಸಿದೆ. ಆದರೆ ನಡೆದದ್ದು ಬೇರೆಯೇ. ಸೋತವರು ಹದಿಮೂರು ವರ್ಷ ವನವಾಸ, ಒಂದು ವರ್ಷದ ಅಜ್ಞಾತವಾಸ ಅನುಭವಿಸುವ ಪಣವನ್ನು ನಿಯಮವಾಗಿಸಿ ಆಡುವಂತಾಯಿತು. ಮತ್ತೆ ಶಕುನಿಯೆ ದುರ್ಯೋಧನನ ಪ್ರತಿನಿಧಿಯಾಗಿ ಆಡಿದುದರಿಂದ ಸೋಲು ಗೆಲುವು ಮೊದಲೆ ನಿನಗೆ ತಿಳಿದಿತ್ತಲ್ಲವೆ? ಹಾಗೆ ಸೋತು ವನವಾಸಕ್ಕೆ ಧರ್ಮಪಾಲಕರಾಗಿ ಹೊರಟ ಪಾಂಡವರಿಗೆ ನಿನ್ನ ಮಕ್ಕಳು ಆಡಬಾರದ ದುರ್ವಚನಗಳನ್ನು ಆಡಿ ನಿಂದಿಸಿದಾಗಲೂ ನಿನಗೆ ಏನೂ ಅನಿಸಲಿಲ್ಲ.! ವೃದ್ದೆ ಕುಂತಿ, ನಿನ್ನ ತಮ್ಮನ ಸತಿಯಲ್ಲವೆ? ಆಕೆ ವನವಾಸಕ್ಕೆ ಕಣ್ಣೀರಿಡುತ್ತಾ ಹೋಗುವಾಗಲೂ ನಿನ್ನ ಮನ ಕರಗಲಿಲ್ಲ. ವನವಾಸ ಅಜ್ಞಾತವಾಸ ಸಮಯದಲ್ಲೂ ನಿನ್ನ ಮಕ್ಕಳು ಸುಮ್ಮನುಳಿದರೆ? ದೂರ್ವಾಸರನ್ನು ಒಲಿಸಿ, ಕಳುಹಿಸಿ ತೊಂದರೆ ನೀಡುವ ಯೋಜನೆ ರೂಪಿಸಿದರೂ, ಪಾಂಡವರಿಗೆ ಹಿತವಾಯಿತು. ನಿನ್ನ ಮಗನ ಘೋಷಯಾತ್ರೆ ಏನಾಯಿತು ಗೊತ್ತಿದೆಯಲ್ಲವೇ? ಅಲ್ಲೂ ಪಾಂಡವರು ಗಂಧರ್ವನಿಂದ ರಕ್ಷಿಸಿ ಜೀವದಾನವಿತ್ತು ಕಳುಹಿಸಿದರು. ಜಯದ್ರಥನಿಂದಾಗಿ ಕುರುವಂಶದ ಮಾನಹರಣವೆ ಆಗಿಹೋಯಿತು. ನಂತರದ ಗೋಗ್ರಹಣದ ವಿಚಾರ ತಿಳಿದಿದೆ ತಾನೆ? ಅರ್ಜುನನೊಬ್ಬನೆ ಕುರು ಸೇನೆಯನ್ನು ಕಂಗೆಡಿಸಿ ಹಿಮ್ಮೆಟ್ಟಿಸಿದ ಮೇಲೂ ಬುದ್ದಿ ಬರಲಿಲ್ಲವೆ? ಹೀಗೆ ಒಪ್ಪಿದ ವನವಾಸ, ಅಜ್ಞಾತವಾಸಗಳನ್ನು ಸರ್ವ ಕಷ್ಟ ಅನುಭವಿಸಿ ಪೂರೈಸಿದ್ದಾರೆ ಪಾಂಡವರು. ದ್ಯೂತ ಒಪ್ಪಂದದಂತೆ ಪಾಂಡವರ ದಾಯಭಾಗ ಮರಳಿ ನೀಡಬೇಕಾದದ್ದು ಕೌರವನ ಕರ್ತವ್ಯವಾಗಿತ್ತು. ಅದನ್ನೂ ನಿರಾಕರಿಸಿ ಲೋಭ ಅಧಿಕಾರ ಮದ ಪ್ರದರ್ಶಿಸುವಾಗಲೂ ನೀನು ಸುಮ್ಮನುಳಿದಿರುವೆ. ಇಷ್ಟೆಲ್ಲಾ ಅನ್ಯಾಯಗಳನ್ನು ನಿನ್ನ ಮಕ್ಕಳು ಮಾಡಿದ ಬಳಿಕವೂ, ಧರ್ಮರಾಯ ಶಾಂತಿ ಸಂಧಾನದ ಪ್ರಯತ್ನದಲ್ಲಿ ತೊಡಗಿದ್ದಾನೆ. ಒಂದು ಸತ್ಯ ತಿಳಿದಿರಲಿ ಪಾಂಡವರಿಗೆ ಸೇನಾಬಲವಿಲ್ಲದೆ ಸಮಸ್ತ ಹಸ್ತಿನೆ ಗೆಲ್ಲಬಲ್ಲ ಸಾಮರ್ಥ್ಯವಿದೆ. ಭೀಮಾರ್ಜುನರು ಸಾಮಾನ್ಯರೆ? ಅರ್ಜುನನೊಬ್ಬನೆ ಸಂಪೂರ್ಣ ಯುದ್ದ ಗೆದ್ದುಕೊಳ್ಳಬಲ್ಲಷ್ಟು ಶಸ್ತ್ರ, ಅಸ್ತ್ರ, ಮಂತ್ರಾಸ್ತ್ರ, ದಿವ್ಯಾಯುಧಗಳನ್ನು ಸಂಪಾದಿಸಿದ್ದಾನೆ. ಇಂತಹ ಪಾಂಡವರು ಸಂಧಾನಕ್ಕೆ ಮನ ಮಾಡಿದ್ದಾರೆ ಎಂದರೆ ಭಯದಿಂದ ಖಂಡಿತ ಅಲ್ಲ. ತಮಗೆ ನಷ್ಟವಾದರೂ ಲೋಕದ ಉಳಿವಿಗಾಗಿ ಹೊಂದಿಕೊಂಡು ಬದುಕುವ ಹಾದಿಯಲ್ಲಿದ್ದಾರೆ. ಈಗಲೂ ಕಾಲ ಮಿಂಚಿ ಹೋಗಿಲ್ಲ. ಪ್ರಳಯಾಂತಕ ಯುದ್ದ ಸಂಭವಿಸದಂತೆ ತಡೆದು, ಸರ್ವನಾಶದಿಂದ ಹಸ್ತಿನೆಯನ್ನು ಸಂರಕ್ಷಿಸುವ ಜವಾಬ್ದಾರಿ ನಿನ್ನ ಕೈಯಲ್ಲಿದೆ. ವಿವೇಚಿಸಿ ಸೂಕ್ತ ನಿರ್ಧಾರ ಪ್ರಕಟಿಸಿ ಸಾಮ್ರಾಜ್ಯದ ಹಿತರಕ್ಷಕನಾಗು ಎಂದನು.
ಮುಂದುವರಿಯುವುದು…













