
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತನ್ನ ಜಾತಿ ಪಟ್ಟಿಯಲ್ಲಿ ‘ಬಿಲ್ಲವ ಕ್ರಿಶ್ಚಿಯನ್’ ಮತ್ತು ‘ಈಡಿಗ ಕ್ರಿಶ್ಚಿಯನ್’ ಎಂದು ಪ್ರಕಟಿಸಿರುವ ಕ್ರಮಸಂಖ್ಯೆ 190 ಮತ್ತು 319ರ ಬಗ್ಗೆ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹೆಸರುಗಳನ್ನು ಕೂಡಲೇ ಪಟ್ಟಿಯಿಂದ ತೆಗೆದುಹಾಕಬೇಕೆಂದು ಸಂಘವು ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘವು, ಸರ್ಕಾರಿ ಆದೇಶದ ಪ್ರಕಾರ, ಕರ್ನಾಟಕದಲ್ಲಿರುವ ಈಡಿಗ ಜನಾಂಗವು ಈಡಿಗ, ಬಿಲ್ಲವ, ಪೂಜಾರಿ ಸೇರಿದಂತೆ ಒಟ್ಟು 26 ಉಪಪಂಗಡಗಳನ್ನು ಒಳಗೊಂಡಿದೆ. ಇವೆಲ್ಲವನ್ನೂ ಪ್ರವರ್ಗ IIA ನಲ್ಲಿ ಕ್ರಮಸಂಖ್ಯೆ 4ರಲ್ಲಿ ಸೇರಿಸಲಾಗಿದೆ. ಈ ಮೂಲ ಜಾತಿಗಳ ಹೆಸರಿಗೆ ‘ಕ್ರಿಶ್ಚಿಯನ್’ ಎಂಬ ಪದ ಸೇರಿಸಿ ಪ್ರಕಟಿಸಿರುವುದು ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಸಂಘವು ಹೇಳಿದೆ.
ಆಯೋಗದ ಈ ಕ್ರಮದಿಂದ ಈಡಿಗ ಮತ್ತು ಅದರ ಎಲ್ಲಾ 25 ಉಪಪಂಗಡಗಳಾದ ಬಿಲ್ಲವ, ಪೂಜಾರಿ, ಧಿವರ, ನಾಡಾರ್, ನಾಮಧಾರಿ, ಬಂಧಾರಿ, ಬೆಲ್ಡದ್, ಹಾಲ ಕ್ಷತ್ರಿಯ, ದೇಶ ಬಂಡಾರಿ, ದೇವರ, ದೇವರ ಮಕ್ಕಳು, ಎಳವ, ಗಾಮಲ್ಲ, ಗೌಂಡ್ಲ, ಹಳೇ ಪೈಕರು, ಹಳೇ ಪೈಕ್, ಇಲ್ಲಾವನ್, ಕಲಾಲ್, ಮಲಯಾಳಿ ಬಿಲ್ಲವ, ಥೀಯಾನ್, ಇಳಿಗ, ಗುಂಡ್ಲ, ಮತ್ತು ತಿಯನ್ ಸಮುದಾಯಗಳು ತಮ್ಮ ಮೂಲ ಹೆಸರನ್ನು ಬಳಸುವುದನ್ನು ವಿರೋಧಿಸಿವೆ.
ಆದ್ದರಿಂದ, ನಾಗನಾಥ್ (ಪ್ರಧಾನ ಕಾರ್ಯದರ್ಶಿ) ಮತ್ತು ಡಾ. ಎಂ. ತಿಮ್ಮೇಗೌಡ (ಅಧ್ಯಕ್ಷರು) ಅವರ ನೇತೃತ್ವದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವು ಈ ಪಟ್ಟಿಯಿಂದ ವಿವಾದಾತ್ಮಕ ಹೆಸರುಗಳನ್ನು ತೆಗೆದುಹಾಕುವಂತೆ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗವನ್ನು ಆಗ್ರಹಿಸಿದೆ.



















