
ನವದೆಹಲಿ: ಬುಧವಾರ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನಿವಾಸದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
30 ರ ಹರೆಯದ ಆ ವ್ಯಕ್ತಿ ಕೆಲವು ಕಾಗದಪತ್ರಗಳೊಂದಿಗೆ ಮುಖ್ಯಮಂತ್ರಿಗಳ ಕಚೇರಿಗೆ ಬಂದಿದ್ದು ಮುಖ್ಯಮಂತ್ರಿಗಳಿಗೆ ದಾಖಲೆ ನೀಡಿದ ಬೆನ್ನಲ್ಲಿಯೇ ಅವರ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಅಧಿಕಾರಿಗಳ ಪ್ರಕಾರ, ಆರೋಪಿಯು ಮೊದಲು ದಾಖಲೆಗಳನ್ನು ರೇಖಾ ಗುಪ್ತಾ ಅವರಿಗೆ ಹಸ್ತಾಂತರ ಮಾಡಿದ್ದ. ಆಕೆಯ ಮೇಲೆ ಹಲ್ಲೆ ಮಾಡುವ ಮೊದಲು ಕಿರುಚಲು ಪ್ರಾರಂಭ ಮಾಡಿದ್ದ ಎನ್ನಲಾಗಿದೆ. ತಕ್ಷಣವೇ ಆತನನ್ನು ಹಿಡಿದು ವಶಕ್ಕೆ ಪಡೆಯಲಾಗಿದೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಮುಖ್ಯಮಂತ್ರಿಯವರ ನಿವಾಸಕ್ಕೆ ತಲುಪಿದ್ದು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಾಳಿಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಬಿಜೆಪಿ ಶಂಕಿಸಿದ್ದು ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಮುಖ್ಯಮಂತ್ರಿಯವರ ಕೆಲಸವನ್ನು ಪ್ರತಿಸ್ಪರ್ಧಿಗಳು ಸಹಿಸುವುದಿಲ್ಲ ಮತ್ತು ದಾಳಿಕೋರನ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಈ ದಾಳಿಯನ್ನು ಖಂಡಿಸಿದ್ದು, “ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲಿನ ದಾಳಿ ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವದಲ್ಲಿ, ಭಿನ್ನಾಭಿಪ್ರಾಯಗಳ ಮತ್ತು ಪ್ರತಿಭಟನೆಗೆ ಸ್ಥಳವಿದೆ, ಆದರೆ ಹಿಂಸಾಚಾರಕ್ಕೆ ಸ್ಥಳವಿಲ್ಲ. ದೆಹಲಿ ಪೊಲೀಸರು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸುತ್ತೇನೆ. ಮುಖ್ಯಮಂತ್ರಿ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಎಂದು ಆಶಿಸುತ್ತೇವೆ,” ಎಂದು ಹೇಳಿದ್ದಾರೆ.



















