27.7 C
Udupi
Sunday, April 26, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 244

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೪೫ ಮಹಾಭಾರತ

ಮಹಾಭಾರತ ಮಹಾಕಾವ್ಯ – ಶೃದ್ಧೆಯಿಂದ ಅಧ್ಯಯನ ಮನನ ಶ್ರವಣದಿಂದ ಮಹಾಪಾತಕಗಳಿಂದ ಕೃತ ದೋಷಗಳಿದ್ದರೂ ಪರಿಹೃತವಾಗುವುದು ಎಂದು ವೈಶಂಪಾಯನರು ಜನಮೇಜಯನಿಗೆ ಉರಗಾಧ್ವರ ಮುಖೇನ ಬಾಧಿತವಾದ ಸರ್ಪಹತ್ಯಾ ದೋಷ ನಿವಾರಾಣಾರ್ಥವಾಗಿ ಮಹಾಭಾರತದ ಕಥಾಶ್ರವಣವನ್ನು ಬೋಧಿಸುತ್ತಿದ್ದರು. ಶೃದ್ಧಾಭಕ್ತಿಯಿಂದ ತನ್ನ ಮುತ್ತಾತಂದಿರ ಕಥೆ ಕೇಳುತ್ತಿದ್ದ ಜನಮೇಜಯ ಅಜ್ಞಾತವಾಸದ ಕುರಿತಾಗಿ ಕೌತುಕಪ್ರದನಾದನು. ಹೇಗೆ ಎಲ್ಲಿ ಒಂದು ವರ್ಷ ಕಳೆದರು? ಸಾಂಗವಾಗಿ ಪೂರೈಸುವಲ್ಲಿ ಏನಾದರು ಕಂಟಕಗಳು ಎದುರಾದವೆ? ಇತ್ಯಾದಿ ಸೂಕ್ಷ್ಮಗಳು ಸಂದೇಹ ರೂಪ ತಳೆದು ಮನದಲ್ಲಿ ಉತ್ಪತ್ತಿಯಾದವು. ಮುಂದಣ ಕಥಾ ನಿರೂಪಣೆಯನ್ನು ಮಾಡಿ ಕುತೂಹಲವನ್ನು ಪರಿಹರಿಸಬೇಕೆಂದು ಬೇಡಿಕೊಂಡನು. ವೈಶಂಪಾಯಣರು ಮತ್ತೆ ಮುಂದುವರಿಸುತ್ತಾ ಮಹಾಕಾವ್ಯ ಕಥನದಲ್ಲಿ ತೊಡಗಿದರು.

ಕಾಮ್ಯಕಾವನದಿಂದ ಬ್ರಾಹ್ಮಿ ಮುಹೂರ್ತಕ್ಕಿಂತ ಮೊದಲು ಹೊರಟ ಪಾಂಡವರು ಇನ್ನು ಎತ್ತ ಸಾಗುವುದೆಂದು ತರ್ಕಿಸುತ್ತಾ ಸಾಗಿ ಸೂರ್ಯ ನಡುನೆತ್ತಿಗೆ ಏರುವಷ್ಟರ ಹೊತ್ತಿಗೆ ಕಾನನ ಮಧ್ಯದಲ್ಲಿಯೆ ಇದ್ದಾರೆ. ದಣಿವಾರಿಸಲು ವಿಶಾಲವಾದ ಒಂದು ಆಲದ ಮರದಡಿ ವಿಶ್ರಾಂತರಾದರು.

ಧರ್ಮರಾಯ ಮಾತಿಗಾರಂಭಿಸಿ, “ಹನ್ನೆರಡು ಸಂವತ್ಸರ ಕಾಲ ಸುದೀರ್ಘ ವನವಾಸ ದೇವಾತಾನುಗ್ರಹದಿಂದ ನಿರ್ವಿಘ್ನವಾಗಿ ಪೂರೈಸಿದವರಿದ್ದೇವೆ. ಇನ್ನುಳಿದಿರುವುದು ಕೇವಲ ಒಂದು ವರ್ಷ ಮಾತ್ರ. ಆದರೆ ಇದು ಗುಪ್ತವಾಸ, ಯಾರಿಗೂ ನಾವು ಪಾಂಡವರೆಂದು ಜ್ಞಾತರಾಗುವಂತಿಲ್ಲ.”

ಆಗ ಧರ್ಮ ಮತ್ತು ಶಕ್ತಿಯ ಪ್ರತಿರೂಪ ಇಂದ್ರಾನುಗ್ರಹದಿಂದ ಜನ್ಮವೆತ್ತಿ ಬಂದ ಕೌಂತೇಯ ಪಾರ್ಥ ಯೋಚಿಸಿ ಹೇಳಿದ “ಅಣ್ಣಾ! ನಾವ್ಯಾರು ಭಯಭೀತರಾಗುವ ಅಗತ್ಯವಿಲ್ಲ. ಧರ್ಮದೇವತೆ ಯಮರಾಯನ ವರ ಬಲದಂತೆ ನಾವು ನಿಜರೂಪದಲ್ಲಿ ರೂಪಾಂತರಗೊಂಡು ಈ ಒಂದು ವರ್ಷ ಕಳೆಯಬಲ್ಲೆವು. ಯಾರಿಗೂ ನಮ್ಮ ಗುರುತು ಹಿಡಿಯಲಾಗದಂತಹ ಅನುಗ್ರಹ ನಮ್ಮ ಪಾಲಿಗಿದೆ”

“ಅದು ನಿಜ, ಹಾಗೆಂದು ನಾವು ಯೋಚಿಸಿ ಸರಿಯಾದ ಸುಕ್ಷೇತ್ರವನ್ನು ಆರಿಸಿ ಅಲ್ಲಿಗೆ ಸೇರಬೇಕಾಗಿದೆ. ಯಾವ ಸ್ಥಳವಾದೀತು ಸೂಚಿಸುವಿರಾ” ಎಂದು ಧರ್ಮರಾಯ ತಮ್ಮಂದಿರೆಲ್ಲರಲ್ಲಿ ಅಭಿಪ್ರಾಯ ಕೇಳುತ್ತಾನೆ.

ಆಗ ಮತ್ತೆ ಅರ್ಜುನ ಎಲ್ಲರ ಯೋಚನಾಮಗ್ನರಾಗಿದ್ದ ಮೌನವನ್ನು ಮುರಿದು, ಭರತಖಂಡದೆಲ್ಲೆಡೆ ತೀರ್ಥಯಾತ್ರೆ, ರಾಜಾಸೂಯಾಧ್ವರ ಸಮಯ ದಿಗ್ವಿಜಯಗೈದು ಬಂದ ಅನುಭವದ ಆಧಾರದಿಂದ ಹೇಳುತ್ತೇನೆ “ಹಸ್ತಿನೆಯ ಸುತ್ತ ಸಮೃದ್ಧವೂ, ರಮ್ಯವೂ, ಅನ್ನ ಸಮೃದ್ಧವೂ ಆದ ಪಾಂಚಾಲ, ಚೇದಿ, ಮತ್ಸ್ಯ, ಶೂರಸೇನ, ಪಟ್ಟಚರ, ದಶಾರ್ಣ, ನವರಾಷ್ಟ್ರ, ಮಲ್ಲ, ಶಾಲ್ವ, ಯುಗಂಧರ ದೇಶಗಳಿವೆ. ಇವುಗಳಲ್ಲಿ ನಮಗ್ಯಾವುದಾದರೂ ಒಂದು ದೇಶವನ್ನಾರಿಸಬಹುದು” ಎಂದನು.

“ಹೌದು, ಈ ಎಲ್ಲಾ ದೇಶಗಳಿವೆ ನಿಜ. ಅಭಯಪ್ರದ, ಸುಖಕರ, ಕ್ಷೇಮಕರವೂ ಆದ ಪ್ರದೇಶ ಯಾವುದೆಂದು ಕಂಡುಕೊಳ್ಳಬೇಕು. ಪಾಂಚಾಲವೇನೊ ನಮಗೆ ಯೋಗ್ಯ ದೇಶ. ಅಲ್ಲಿ ದ್ರುಪದನ ಆಳ್ವಿಕೆಯಲ್ಲಿ ನಮಗೆ ಕ್ಷೇಮವಿರಬಹುದು. ಆದರೆ ಕೌರವರು ಸುಲಭವಾಗಿ ನಮ್ಮ ಇರವನ್ನು ಪತ್ತೆಹಚ್ಚಿದರೆ ದ್ರುಪದನಿಗೂ ನಮ್ಮಿಂದಾಗಿ ಅನಾವಶ್ಯಕ ಸಮಸ್ಯೆಯಾದಿತು. ಅದನ್ನುಳಿದು ಯಾವ ದೇಶವಾದೀತು ಎಂದು ತರ್ಕಿಸಬೇಕಾಗಿದೆ” ಎಂಬ ಅಭಿಪ್ರಾಯ ಧರ್ಮಜ ಪ್ರಕಟಿಸುತ್ತಾನೆ.

ಆಗ ಭೀಮನು ಯೋಚಿಸಿ ಹೇಳಿದ “ಅಣ್ಣಾ, ನಾವು ಮತ್ಸ್ಯ ದೇಶವನ್ನು ಆಯ್ಕೆ ಮಾಡುವುದು ಉತ್ತಮ. ಅಲ್ಲಿ ರಾಜಾಶ್ರಯ ಪಡೆದು ಯಾವುದಾದರು ಕೆಲಸಗಳನ್ನು ಮಾಡುತ್ತಾ ಕರ್ಮಿಗಳಾಗಿ ಕಾಲ ಕಳೆಯೋಣ. ಮತ್ಸ್ಯಾಧಿಪ ವಿರಾಟ ವೃದ್ಧನಾದರೂ ಧರ್ಮಶೀಲ, ಉದಾರಿ, ಹಾಗೆಯೆ ಮಹಾಧನವಂತನೂ ಹೌದು. ಅಲ್ಲಿ ಕೀಚಕನೆಂಬವ ಒಬ್ಬನಿದ್ದಾನೆ. ಮಹಾ ಬಲಶಾಲಿಯಾದ ಆತ ವಿರಾಟರಾಯನಿಗೆ ಸಂಬಂಧದಲ್ಲಿ ಭಾವ. ಹಾಗಾಗಿ ಅಲ್ಲಿಗೆ ಶತ್ರು ಬಾಧೆಯೂ ಇರದು. ನಮಗೇನಾದರೂ ತೊಂದರೆಯಾದರೆ ನಾನಿದ್ದೇನಲ್ಲ ಬಕ, ಹಿಡಿಂಬ, ಜಟಾಸುರರಿಗೆ ತೋರಿದ ದಾರಿ ತೋರಿಸುವೆ” ಎಂದನು.

ಭೀಮನ ಮಾತು ಕೇಳಿದ ಯುಧಿಷ್ಟಿರ ತಮ್ಮಂದಿರಾದ ಅರ್ಜುನ, ನಕುಲ, ಸಹದೇವರತ್ತ ನೋಡುತ್ತಾನೆ. ಅವರೂ ಆಗಬಹುದೆಂಬಂತೆ ತಲೆಯಲ್ಲಾಡಿಸಿದರು. ಆಗ “ದೇಶವೇನೋ ಗೊತ್ತು ಮಾಡಿದ್ದೇವೆ. ಅಲ್ಲಿ ನಾವೇನಾಗಿ ಕೆಲಸ ಮಾಡಿಕೊಂಡಿರುವುದು. ಈ ಬಗ್ಗೆ ನಿಮ್ಮ ಸಲಹೆಗಳೇನು?” ಎಂದು ಕೇಳುತ್ತಾನೆ.

ಅರ್ಜುನನಿಗೆ ವಿಶೇಷವಾದ ಒಂದು ಧರ್ಮ ಸಂಕಟ ಅಣ್ಣಧರ್ಮರಾಯನ ಕುರಿತಾಗಿ ಮನಮಾಡಿತು. “ಅಣ್ಣಾ, ಮೃದು, ಉದಾರ, ಲಜ್ಜಾನ್ವಿತ, ಪರಮ ಧಾರ್ಮಿಕ, ಸತ್ಯ ಸಂಧನಾದ ನೀನು ರಾಜಾಸೂಯಾಧ್ವರ ಕಲಶಾಭಿಷಿಕ್ತ ಚಕ್ರವರ್ತಿ. ಧರ್ಮಪಾಲಕನಾದ ನೀನು ಏನು ಮಾಡುವೆ? ನಾವಾದರೋ ಹೇಗೆ ಹೇಗೋ ಸಮಯ ಸಂದರ್ಭ ಬಂದಂತೆ ಹೊಂದಿಕೊಂಡು ಸುಧಾರಿಸಿಕೊಳ್ಳಬಲ್ಲೆವು.” ಎಂದು ಹೇಳಿದನು.

ಅರ್ಜುನನ ತರ್ಕದಲ್ಲೂ ಸತ್ಯವಿತ್ತು. ಧರ್ಮರಾಯನ ಗುಣ ಧರ್ಮಗಳು, ಆಚಾರ ನಿರ್ಬಂಧಗಳು ಆತ ನಿಜ ಮರೆಸಿ ಬದುಕ ಬೇಕಾದ ಬದುಕಿಗೆ ತೊಡಕುಂಟು ಮಾಡಬಲ್ಲವುಗಳೆ ಆಗಿದ್ದವು.

ಧರ್ಮರಾಯ ವಿವೇಚಿಸಿ ಹೇಳಿದ “ತಮ್ಮಂದಿರೆ, ವಿರಾಟರಾಯ ಪಗಡೆಯಾಟದ ಬಗ್ಗೆ ಅತಿಯಾದ ಒಲವುಳ್ಳವನು. ಮೊದಲು ಪಗಡೆಯಾಟದ ನೈಪುಣ್ಯತೆ ನನಗಿತ್ತು. ಈಗ ಅಕ್ಷ ಹೃದಯ ವಿದ್ಯೆಯೂ ಅನುಗ್ರಹಿತವಾಗಿದೆ. ವಿನೋದ ಪ್ರಿಯನಾದ ವಿರಾಟನ ಅರಮನೆಯಲ್ಲಿ “ಕಂಕ” ಎಂಬ ದ್ವಿಜನಾಗಿ ಆ ಮಹಾತ್ಮನಾದ ರಾಜನ ಆಸ್ಥಾನಿಕನಾಗುವೆ. ದಂತದಿಂದ ಮಾಡಿದ ಮನೋಹರವಾದ, ಹೊಳೆಯುವ ಬಣ್ಣಗಳಾದ ಹಸಿರು, ಹಳದಿ, ಕಪ್ಪು ಮತ್ತು ಕೆಂಪು ಪಗಡೆಕಾಯಿಗಳನ್ನು ನಡೆಸುವೆನು. ಬ್ರಾಹ್ಮಣ ವರ್ಣಿಯಾಗಿ ಕಾಣಿಸಿಕೊಳ್ಳುವ ಕಾರಣ ನನ್ನ ಆಚಾರ ಪಾಲನೆಗೂ ಧಕ್ಕೆಯಾಗದು. ಒಂದೊಮ್ಮೆಗೆ ಆತ ನನ್ನ ಹಿನ್ನೆಲೆ ಕೇಳಿದರೆ, ಹಿಂದೆ ಯುಧಿಷ್ಠಿರನ ಪ್ರಾಣಸಮನಾಗಿದ್ದೆ ಎಂದು ಸತ್ಯವನ್ನು ನುಡಿಯುವೆ. ಪಗಡೆಯಾಟದಲ್ಲಿ ಸೋತು ರಾಜ್ಯ ತೊರೆದು ಹೋದ ಕಾರಣ ನಾನು ರಾಜಾಶ್ರಯ ಅರಸುತ್ತಾ ಇಲ್ಲಿ ಬಂದಿದ್ದೇನೆ ಎಂದು ಪರಿಚಯ ಹೇಳುವೆ” ಎಂದು ತನ್ನ ಉಪಾಯ ಹೇಳಿದನು. “ನನ್ನ ವಿಚಾರವಾಯಿತು, ಭೀಮ ವೃಕೋದರನೂ, ಸಹಸ್ರ ಗಜ ತ್ರಾಣಿಯೂ ಆದ ನಿನ್ನ ಯೋಚನೆ ಏನು? ನೀನೇನು ಮಾಡುವೆ” ಎಂದು ಕೇಳಿದನು.

“ಅಣ್ಣಾ! ಪಾಕಶಾಸ್ತ್ರ ನನ್ನ ಬಹು ಆಸಕ್ತಿಯ ವಿಷಯಗಳಲ್ಲಿ ಒಂದು. ಪಾಕ ನಿಪುಣನೂ ಹೌದು. ವಿರಾಟನ ಬಳಿ ಸಾಗಿ ಉದ್ಯೋಗವರಸಿ ಬಂದವನು ನಾನು. “ವಲಲ” ನಾಮಕನು. ನಾನು ಇಂದ್ರಪ್ರಸ್ಥದಲ್ಲಿ ಪಾಂಡವರ ಪಾಕಶಾಲಾಧ್ಯಕ್ಷನಾಗಿದ್ದೆ. ಜೊತೆಗೆ ಕುಸ್ತಿ ವಿದ್ಯೆ ಬಲ್ಲವನೂ ಆಗಿರುವೆ, ಮಹಾ ಬಲಯುತ ಗೂಳಿ , ಮದಗಜಗಳನ್ನು ನಿಗ್ರಹಿಸಿ ಪಳಗಿಸುವ ಚಾತುರ್ಯವನ್ನೂ ಕಲಿತವನಿದ್ದೇನೆ ಎಂದು ನನ್ನ ಕುರಿತಾಗಿ ಹೇಳಿ ಮೆಚ್ಚಿಸಿ ಉದ್ಯೋಗ ಪಡೆಯುವೆ. ಭಾರವಾದ ಕಟ್ಟಿಗೆಗಳನ್ನು ಹೊರುವುದೋ, ಅಡುಗೆ ಮಾಡುವುದೋ, ಭಕ್ಷ, ಭೋಜ್ಯ, ಪೇಯಾದಿಗಳ ತಯಾರಿಯೋ ಮಾಡಿಕೊಂಡು ರಾಜಾಸ್ಥಾನದ ಜನರ ಮೆಚ್ಚುಗೆ ಗಳಿಸುತ್ತಾ ಕಾಲ ಕಳೆಯಬಲ್ಲೆ” ಎಂದನು.

ಈಗ ಯುಧಿಷ್ಠಿರನ ಕಂಗಳು ಅರ್ಜುನನತ್ತ ತಿರುಗಿತು. “ಅರ್ಜುನಾ, ಬಿಲ್ವಿದ್ಯೆಯಲ್ಲಿ ನೀನು ಅತಿಸಾಹಸಿಯೇ ಹೌದು. ಏಕರಥಿಯಾಗಿ ವಾಸುದೇವನ ಜೊತೆ ಇಂದ್ರನನ್ನು ಮಣಿಸಿ ಅಗ್ನಿಯನ್ನು ಸಂತೃಪ್ತಗೊಳಿಸಿ, ಧನು ಗಾಂಡೀವ ಮತ್ತು ದಿವ್ಯ ರಥ ಗಳನ್ನು ಪಡೆದವನು ನೀನು. ಗಂಧರ್ವನಿಂದ ಚಾಕ್ಷುಷ ವಿದ್ಯೆ- ಶ್ವೇತ ದಿವ್ಯಾಶ್ವಗಳನ್ನೂ ಗಳಿಸಿಕೊಂಡವನು. ಮುನಿ, ಋಷಿ ಗಳಿಂದ ಹನ್ನೆರಡನೆಯ ರುದ್ರ – ಹದಿಮೂರನೆಯ ಆದಿತ್ಯನೆಂದು ಭಾವಿಸಲ್ಪಟ್ಟವನು. ಪರ್ವತಗಳಲ್ಲಿ ಹಿಮವಂತನಂತೆ, ಜಲಾಶಯಗಳಲ್ಲಿ ಸಮುದ್ರನಂತೆ, ದೇವತೆಗಳಲ್ಲಿ ಇಂದ್ರನಂತೆ, ವಸುಗಳಲ್ಲಿ ಅಗ್ನಿಯಂತೆ, ಪಕ್ಷಿಗಳಲ್ಲಿ ಗರುಡನಂತೆ ಇರುವ ಯೋಧಶ್ರೇಷ್ಠ ಅರ್ಜುನಾ ನೀನೇನು ಮಾಡುವೆ?” ಎಂದು ಕೇಳುತ್ತಾನೆ.

ಮುಂದುವರಿಯುವುದ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page