
ಬೆಂಗಳೂರು: RCB ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು ವಿಚಾರಣೆಯ ಪ್ರಮುಖ ಭಾಗವಾದ ಅಮಾನತಾಗಿರುವ ಐಪಿಎಸ್ ಅಧಿಕಾರಿ ದಯಾನಂದ್ ಈ ಕುರಿತು ಮಾತನಾಡಿದ್ದು ಉಚಿತ ಟಿಕೆಟ್ ಎಂದು ಘೋಷಣೆ ಮಾಡಿದ್ದರಿಂದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿತು ಎಂದು ತಿಳಿಸಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಗುರುವಾರ ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ಹಾಜರಾಗಿ ಅಂದು ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ ದಯಾನಂದ್ ಅವರು ಘಟನೆ ನಡೆದ ದಿನ 21 ಗೇಟ್ಗಳಿಗೂ ನಾನೇ ಖುದ್ದಾಗಿ ಭೇಟಿ ನೀಡಿದ್ದೆ. ಸಂಪೂರ್ಣವಾಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಪ್ರತಿ ಬಾರಿ ಐಪಿಎಲ್ ಮ್ಯಾಚ್ ನಡೆಯುವಾಗ ಇರುವಷ್ಟು ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಆದರೆ ಅಂದು ಗೇಟ್ ತೆಗೆಯಲು ತಡಮಾಡಿದ್ದರು. ಉಚಿತ ಟಿಕೆಟ್ ಎಂದು ಘೋಷಣೆ ಮಾಡಿದ್ದರಿಂದ ಇಷ್ಟೆಲ್ಲ ಅವಾಂತರ ನಡೆದಿದೆ ಎಂದು ಹೇಳಿಕೆ ದಾಖಲಿಸಿದ್ದಾರೆ.






















































