ಕಾರ್ಕಳ ನಗರ ಠಾಣೆಯ ಸಹಯೋಗದಲ್ಲಿ, ಮಾದಕ ದ್ರವ್ಯ ವಿರೋಧಿ ಜಾಥಾ

ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ಹಾಗೂ
ಅದರ ರೋರ‍್ಸ್ ಮತ್ತು ರೇಂರ‍್ಸ್ ಘಟಕ, ಪ್ರೌಢಶಾಲಾ ವಿಭಾಗದ
ಸ್ಕೌಟ್ ಮತ್ತು ಗೈಡ್ಸ್ ಘಟಕ ಇವುಗಳ ವತಿಯಿಂದ ಕಾರ್ಕಳ
ನಗರ ಪೊಲೀಸ್ ಠಾಣೆಯ ನೇತೃತ್ವದಲ್ಲಿ ವಿಶ್ವ ಮಾದಕ ದ್ರವ್ಯ
ವಿರೋಧಿ ದಿನದ ಅಂಗವಾಗಿ ಜನ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ
ಮಾದಕ ದ್ರವ್ಯ ವಿರೋಧಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ರೋರ‍್ಸ್
ಮತ್ತು ರೇಂರ‍್ಸ್ ಹಾಗೂ ಪ್ರೌಢಶಾಲಾ ವಿಭಾಗದ ಸ್ಕೌಟ್ ಮತ್ತು
ಗೈಡ್ಸ್ ಘಟಕಗಳ ವಿದ್ಯಾರ್ಥಿಗಳು ಕಾರ್ಕಳದ ಬಂಡೀಮಠ ಬಸ್ಸು
ನಿಲ್ದಾಣದಿಂದ ಗಾಂಧಿ ಮೈದಾನವರೆಗೆ ಮಾದಕ ದ್ರವ್ಯ ವಿರೋಧಿ
ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಕಾರ್ಕಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್
ಅವರು ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಇತರ ಮಾದಕ ದ್ರವ್ಯಗಳ
ಅಪಾಯಗಳು ಹಾಗೂ ಅವುಗಳ ಬಗ್ಗೆ ವಹಿಸಬೇಕಾದ
ಎಚ್ಚರಿಕೆಗಳ ಕುರಿತಾಗಿ ಮಾಹಿತಿ ನೀಡಿದರು. ಅಲ್ಲದೆ ಮಾದಕ ದ್ರವ್ಯ
ಸೇವನೆ ಹಾಗೂ ಮಾರಾಟದ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ
ಕಾರ್ಕಳ ನಗರ ಠಾಣೆಯ ನೂತನ ಉಪ ನಿರೀಕ್ಷಕರಾದ
ಮುರಳೀಧರ ನಾಯ್ಕ್ ಹಾಗೂ ನಗರ ಠಾಣೆಯ ಸಿಬ್ಬಂದಿಗಳು
ಭಾಗವಹಿಸಿದ್ದರು.ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ
ಉಪನ್ಯಾಸಕರುಗಳಾದ ಉಮೇಶ್ ಬೆಳ್ಳಿಪ್ಪಾಡಿ, ದೀಪಕ್, ಶ್ರೀಮತಿ
ಸುಕನ್ಯಾ, ಕು.ಅಭಿನಯ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ
ಕೃಷ್ಣಪ್ರಸಾದ್ ರ‍್ಯಾಲಿಯ ನೇತೃತ್ವ ವಹಿಸಿದ್ದರು.






















































