25.9 C
Udupi
Thursday, July 2, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 568

ಭರತೇಶ ಶೆಟ್ಟಿ, ಎಕ್ಕಾರು

ಭೀಮನು ಕ್ರೋಧಾವೇಶಕ್ಕೊಳಗಾಗಿ ಶ್ರೀ ಕೃಷ್ಣನೊಡನೆ ಮಾತನಾಡುವುದನ್ನು ದೂರದಿಂದ ಆಲಿಸಿ ಸ್ವರ ಗುರುತಿಸಿದ ಅನಿರುದ್ಧ, ಸಾತ್ಯಕಿ, ಪ್ರದ್ಯುಮ್ನರು ಅವರಿದ್ದಲ್ಲಿಗೆ ಬಂದು ಸೇರಿದರು. ಕೃಷ್ಣ – ಭೀಮ ಇಬ್ಬರಿಗೂ ವಂದಿಸಿ, ಬಳಿಕ ಬಬ್ರುವಾಹನನನ್ನು ಕೃಷ್ಣ ಮತ್ತು ಭೀಮ ಇಬ್ಬರಿಗೂ ಪರಿಚಯ ಮಾಡಿಸಿ ಕೊಟ್ಟರು. ನಡೆದಿದ್ದ ವೃತ್ತಾಂತವನ್ನೆಲ್ಲ ಸಾತ್ಯಕಿ ವಿವರಿಸಿ ಹೇಳತೊಡಗಿದ “ನಮ್ಮ ಅರ್ಜುನನಿಂದ ತಪ್ಪಾಗಿ ಹೋಯಿತೋ ಏನೋ ಎಣಿಸುತ್ತಿದೆ. ಯಾಕೆಂದರೆ ಶರಣಾಗತನಾಗಿ ಕಪ್ಪ ಕಾಣಿಕೆ ಒಪ್ಪಿಸಿದ ಬಬ್ರುವಾಹನನನ್ನು ಧಿಕ್ಕರಿಸಿ, ಕಪ್ಪವನ್ನು ಎಡಗಾಲಿನಿಂದ ಒದ್ದು ತಿರಸ್ಕರಿಸಿದ್ದು ನಮ್ಮ ಪಾರ್ಥ ಮಹಾಶಯ. ಕಾರಣ ಇಷ್ಟೇ ಈ ಬಬ್ರುವಾಹನ ಪಾರ್ಥನ ಪುತ್ರನಂತೆ. ಅರ್ಜುನ ಒಪ್ಪುವುದಕ್ಕೆ ಸಿದ್ಧನಿಲ್ಲದೆ ಯಾರಿಗೋ ಜಾರೆಯಲ್ಲಿ ಹುಟ್ಟಿದವನು ನನ್ನನ್ನು ಅಪ್ಪ ಎನ್ನುವೆಯಾ? ಈ ಹಿಂದೆ ಎಷ್ಟು ಜನರನ್ನು ಹಾಗೆ ಕರೆದಿರುವೆ? ಎಂಬಿತ್ಯಾದಿ ಅವಮಾನಕರ ಮಾತುಗಳಿಂದ ಪೀಡಿಸಿದ. ಕೆರಳಿದ ಬಬ್ರುವಾಹನ ನನ್ನನ್ನು ನಿನ್ನ ಮಗ ಹೌದೆಂದು ಒಪ್ಪಿಕೊಳ್ಳದೆ ಬಿಡಲಾರೆ. ನನ್ನ ತಾಯಿ ಪತಿವೃತೆ ಎಂದು ಪ್ರಮಾಣಿಕರಿಸಿಯೇ ಸಿದ್ಧ ಎಂದು ಪ್ರತಿಜ್ಞೆಗೈದು ಯುದ್ಧವನ್ನು ಮುಂದುವರಿಸಿದ. ಪರಿಣಾಮ ನಾವೆಲ್ಲ ಸೋತೆವು, ಇವರಿಬ್ಬರು ಶಿರಛೇದನಕ್ಕೊಳಗಾಗಿ ಬೀಳುವಂತಾಯಿತು.” ಎಂದು ಪೂರ್ಣ ವಿಚಾರ ವಿವರಿಸಿ ಹೇಳಿದ.

ಸಾತ್ಯಕಿಯು ಕಥೆ ಹೇಳುತ್ತಿದ್ದಂತೆ ಅತೀವ ದುಃಖಕ್ಕೊಳಗಾದ ಬಬ್ರುವಾಹನ ಭೀಮಸೇನನ ಕಾಲ ಬುಡದಲ್ಲಿ ಕೈ ಮುಗಿದು ಕುಳಿತನು. “ಹೇ ಮಹಾಬಲನೇ! ನನ್ನ ಜನ್ಮದಾತನನ್ನೇ ಕೊಲೆ ಮಾಡಿದ ಪಾತಕಿ ನಾನು. ಮೇಲಾಗಿ ನಿಮ್ಮ ಸೋದರನೂ ಹೌದು ಅರ್ಜುನ. ನಿಮ್ಮ ಗದೆಯನ್ನೆತ್ತಿ ನನ್ನ ತಲೆಗಪ್ಪಳಿಸಿ ಇಲ್ಲೇ ನನ್ನನ್ನು ಕೊಂದು ಬಿಡಿ. ನನಗದೇ ತಕ್ಕ ಪ್ರಾಯಶ್ಚಿತ್ತವಾಗಲಿ” ಎಂದು ಪಾದಮೂಲದಲ್ಲಿ ಶಿರವಿಟ್ಟು ಕಣ್ಣೀರ್ಗರೆದನು.

ಬಬ್ರುವಾಹನನ ಸ್ಥಿತಿಯನ್ನು ನೋಡಿ ಮರುಗಿದ ಆದಿಶೇಷ. ಮುಂದೊತ್ತಿ ಬಂದು ಶ್ರೀ ಕೃಷ್ಣ ಪರಮಾತ್ಮನಿಗೆ ಶಿರಬಾಗಿ “ದೇವರೇ ನಾನು ನಿಮ್ಮ ಸೇವಕ. ನಿಮ್ಮ ಶಕ್ತಿ ಸಾಮರ್ಥ್ಯಗಳೇನೆಂದು ತಿಳಿಯದವನೇನಲ್ಲ. ಆದರೂ ನಿಮ್ಮ ಸಖ ಪಾರ್ಥನ ಪ್ರಾಣವುಳಿಸಲು ಸಂಜೀವಕ ಮಣಿ ಕೇಳಿದಾಗ ನೀಡಲಾಗದ ಸ್ಥಿತಿ ನನ್ನದಾಗಿ ಹೋಯಿತು. ಪರಿಣಾಮ ವೀರ ಬಬ್ರುವಾಹನ ನಾಗಲೋಕವನ್ನೇ ಆಕ್ರಮಿಸಿ ಸರ್ಪಸೇನೆಯನ್ನೇ ಸೋಲಿಸಿ, ನಾಶಗೊಳಿಸಿ ಅರ್ಹತೆಯಿಂದಲೇ ಸಂಜೀವಕ ಮಣಿಯನ್ನು ಇಲ್ಲಿವರೆಗೆ ತರುವಂತೆ ಮಾಡಿದ್ದಾನೆ. ಆರಂಭದಲ್ಲೇ ನಾನು ಸಂಜೀವಕ ಮಣಿ ನೀಡಿದ್ದರೆ ಈ ಸ್ಥಿತಿ ನಮಗೂ ಒದಗುತ್ತಿರಲಿಲ್ಲ. ನಮ್ಮಿಂದಾದ ಅಪರಾಧಕ್ಕೆ ಪರಿಮಾರ್ಜನೆ ಮಾಡಬೇಕಾದರೆ ದೇವರಾದ ನಿಮ್ಮ ದರ್ಶನವಾಗಬೇಕೆಂಬ ಆಶಯದಿಂದ ಸ್ವಯಂ ನಾನೇ ಮಣಿಸಹಿತನಾಗಿ ಬಂದವನಿದ್ದೇನೆ. ಆದರೆ ಇಲ್ಲಿ ಬೇರೊಂದು ರೀತಿಯ ಅನಾಹುತ ಆಗಿ ಹೋಗಿದೆ. ಹೇ ಲೋಕಪಾಲಕನೇ, ನಿಮ್ಮ ಮೌನ, ನಗು, ಮುನಿಸು ಏನೇ ಭಾವ ಪ್ರಕಟವಾದರೂ ಅದರ ಹಿಂದೆ ಅಗೋಚರವಾದ ಕಾರಣವಿರುತ್ತದೆ. ಈಗ ಅದ್ಯಾವ ಕಾರಣದಿಂದ ಇಂತಹ ಲೀಲೆ ತೋರುತ್ತಿರುವೆಯೋ ಅರಿಯದಾಗಿದ್ದೇವೆ. ಸ್ವಯಂ ನಿಮ್ಮ ಸಾಕ್ಷಾತ್ಕಾರ ಆದ ಮೇಲೆ ಇನ್ನು ಯಾವ ತೊಂದರೆಯೂ ಇಲ್ಲಿ ಉಳಿದಿಲ್ಲ ಎಂದೇ ನಾನು ತಿಳಿದಿದ್ದೇನೆ. ನಮ್ಮಿಂದಾದ ಅಪರಾಧವನ್ನು ಮನ್ನಿಸಿ ಅರ್ಜುನನ ಪ್ರಾಣವನ್ನು ಮರಳಿ ಪಡೆಯುವಲ್ಲಿ ತಾವು ಕಾರ್ಯೋನ್ಮುಖರಾಗಬೇಕೆಂದು ಪ್ರಾರ್ಥಿಸುತ್ತೇನೆ. ಅಂದು ಸಮುದ್ರ ಮಂಥನ ಕಾಲದಲ್ಲಿ ರಾಹುವಿನ ಕಂಠವನ್ನು ಕ್ಷಣಮಾತ್ರದಲ್ಲಿ ಕತ್ತರಿಸಿದಂತೆ ಇಂದು ಯಾರಿಂದ ಆಪತ್ತು ಬಂದೊದಗಿದೆಯೋ ಅವರನ್ನು ಸುದರ್ಶನ ಚಕ್ರದಿಂದ ಕತ್ತರಿಸಿ ಪಾರ್ಥನ ಶಿರವನ್ನು ಮರಳಿ ತರಿಸಿಕೊಳ್ಳಿರಿ” ಎಂದು ಬೇಡಿದನು.

ಇಷ್ಟೆಲ್ಲಾ ಆಗುತ್ತಿರುವಾಗ ಕುಂತಿದೇವಿಯು ಚಿತ್ರಾಂಗದೆ ಉಲೂಪಿಯರ ಬಳಿಯಿಂದೆದ್ದು, ಕೃಷ್ಣನನ್ನು ಕುರಿತು “ಹೇ ಗೋವಿಂದಾ! ಬಹಳ ಹಿಂದೆಯೇ ನಿನ್ನ ಬಳಿ ನನ್ನ ಮಕ್ಕಳ ರಕ್ಷಣೆಯ ಬಗ್ಗೆ ವಚನ ಪಡೆದಿದ್ದೆ. ಆದರೆ ಈಗ ನಮ್ಮ ಕಣ್ಮುಂದೆಯೇ ಪಾರ್ಥನ ಪಾರ್ಥಿವ ಶರೀರ ನೋಡುತ್ತಿದ್ದೇವೆ. ನನ್ನ ಮಗನೇ ಆದರೂ ವೀರಕರ್ಣ ಅಧರ್ಮದ ಪಕ್ಷದಲ್ಲಿದ್ದ ಎಂಬ ಕಾರಣದಿಂದ ಕೊಲ್ಲಲ್ಪಟ್ಟ. ಆತನ ಮಗ ವೃಷಕೇತುವಿನ ಮುಖದಲ್ಲಿ ನನ್ನ ಮಗ ಕರ್ಣನನ್ನು ಕಾಣುತ್ತಾ ಸಹಿಸಿಕೊಳ್ಳುತ್ತಿದ್ದೆ. ಇಂದು ನನ್ನ ಇಬ್ಬರೂ ಮಕ್ಕಳು ಹತಪ್ರಾಣರಾಗಿ ಬಿದ್ದು ಬಿಟ್ಟರಲ್ಲಾ!. ಇನ್ನೂ ನಾನು ಬದುಕಬೇಕೇ? ಯಾಕಾಗಿ ಬದುಕಬೇಕು? ನೀನು ನನಗಿತ್ತ ವಚನ ಸುಳ್ಳಾಯಿತೇ?” ಎಂದು ಗೋಗರೆದು ಪ್ರಶ್ನಿಸತೊಡಗಿದಳು.

ಹೀಗೆ ಎಲ್ಲರೂ ಅವರವರ ಭಾವ ಪ್ರಕಟಿಸಿದಾಗ ಸುಮ್ಮನೆ ಉಳಿದಿದ್ದ ಶ್ರೀಕೃಷ್ಣ ಪರಮಾತ್ಮ ಮೌನ ಮುರಿದು ಉಗ್ರವಾದ ಪ್ರತಿಜ್ಞೆ ಮಾಡಿದ “ಈ ಭೂಮಿಯಲ್ಲಿ ನಾನು ಜನಿಸಿದ ದಿನದಿಂದ ಈ ವರೆಗೆ ಅಲೌಕಿಕವಾಗಿ ನನ್ನ ಇಂದ್ರಿಯಗಳನ್ನು ಬ್ರಹ್ಮಚರ್ಯದಲ್ಲಿಯೇ ಪೋಷಿಸಿರುವುದು ಹೌದೇ ಆದರೆ, ಅಂದರೆ ಈ ಜೀವಿತದಲ್ಲಿ ಕಣ್ಣು, ಕಿವಿ, ನಾಲಗೆ, ಮೂಗು, ಚರ್ಮ, ಮನಸ್ಸು [ಮನಸ್ಸನ್ನು ಆರನೆಯ ಇಂದ್ರಿಯ ಎನ್ನುವರು] ಇವು ಪ್ರಾಪಂಚಿಕ ವ್ಯವಹಾರದಲ್ಲಿದ್ದರೂ, ಬ್ರಹ್ಮಪರವಾಗಿ ಅಥವಾ ಬ್ರಹ್ಮತತ್ವದಲ್ಲೇ ನೆಲೆಗೊಳಿಸಿಯೇ ಇದ್ದುದೇ ಹೌದಾದರೆ ಪಾರ್ಥನ ಶಿರ ಎಲ್ಲಿ, ಹೇಗೆ ಇದ್ದರೂ, ಮರಳಿ ಇಲ್ಲಿಗೆ ಬರಲಿ. ಪಾರ್ಥನ ಶಿರವನ್ನು ಅಪಹರಿಸುವ ದುಷ್ಕೃತ್ಯಗೈದವರ ಸಂಹಾರವಾಗಲಿ” ಎಂದು ಬಲಗೈ ಎತ್ತಿ ಸುದರ್ಶನ ಚಕ್ರವನ್ನು ಆಹ್ವಾನಿಸಿ ಉದ್ದೇಶಿತ ಸತ್ಯ ಪರೀಕ್ಷೆಯ ಕಾರ್ಯಕ್ಕೆ ಕಳುಹಿಸಿದನು.

ಶ್ರೀ ಕೃಷ್ಣ ಪರಮಾತ್ಮನು ಹೀಗೆ ಸಾರಲು, ತಲೆಯನ್ನು ಕದ್ದೊಯ್ದಿದ್ದ ನಾಗ ಧೃತರಾಷ್ಟ್ರನ ದುಷ್ಟ ಮಕ್ಕಳಿಬ್ಬರನ್ನೂ ಬೆಂಬತ್ತಿದ ಸುದರ್ಶನ ಕತ್ತರಿಸಿ ತುಂಡು ತುಂಡಾಗಿಸಿ ಕೊಂದು ಹಾಕಿತು. ಘೋರ ಕಾಂತಾರದೊಳಗೆ ಎಸೆಯಲ್ಪಟ್ಟಿದ್ದ ಪಾರ್ಥನ ತಲೆಯನ್ನು ಅರೆ ಕ್ಷಣದಲ್ಲಿ ಹುಡುಕಿದ ಸುದರ್ಶನ ಚಕ್ರವು, ಅದನ್ನೆತ್ತಿಕೊಂಡು ಮಣಿಪುರದ ರಣಭೂಮಿಗೆ ತಂದಿತು. ಅರ್ಜುನನ ತಲೆಯು ಬಂದುದನ್ನು ನೋಡಿ ಅಲ್ಲಿದ್ದವರೆಲ್ಲರೂ ಜಯಘೋಷ ಕೂಗತೊಡಗಿದರು. ಕೂಡಲೆ ಉರಗಾಧಿಪತಿ ಶೇಷನು ಹರ್ಷದಿಂದ ಶ್ರೇಷ್ಠವಾದ ಸಂಜೀವಕ ಮಣಿಯನ್ನು ಶ್ರೀಹರಿಯ ಕೈಯಲ್ಲಿ ಕೊಟ್ಟು ಮುಂದಿನ ಮಹತ್ಕಾರ್ಯ ಸಾಧನೆ ಕಣ್ತುಂಬಿಕೊಳ್ಳಲು ವಂದಿಸಿ ನಿಂತನು.

ಶ್ರೀಕೃಷ್ಣನು ಮೊದಲು ವೃಷಕೇತುವಿನ ದೇಹ ಮತ್ತು ತಲೆಗಳನ್ನು ಜೋಡಿಸಿ, ಸಂಜೀವಕ ಮಣಿಯನ್ನು ಅವನ ಎದೆಯ ಮೇಲೆ ಇರಿಸಿದನು. ಬಳಿಕ ಅರ್ಜುನನ ದೇಹಕ್ಕೆ ಅವನ ಶಿರವನ್ನು ಹೊಂದಿಸಿ, ಹೃದಯವಿದ್ದ ಭಾಗದಲ್ಲಿ ಆ ದಿವ್ಯರತ್ನವನ್ನು ಹೊಂದುವಂತೆ ಇರಿಸಿ, ಮಹಾದೇವ ಈಶ್ವರನನ್ನು ಪ್ರಾರ್ಥಿಸಿ ಅನುಗ್ರಹಿಸುವಂತೆ ಬೇಡಿದನು. ಪರಮೇಶ್ವರನೇ ವರಪ್ರಸಾದವಾಗಿ ನೀಡಿರುವ ಸಂಜೀವಕ ಮಣಿಯಲ್ಲವೇ? ವಿನಿಯೋಗಿಸುವಾಗ ಮಹಾದೇವನನ್ನು ಭಕ್ತಿಯಿಂದ ಸಂಪ್ರಾರ್ಥಿಸಿ ಇಬ್ಬರೂ ಬದುಕಲಿ ಎಂದು ಹರಸಿದನು. ಆಗ ಅರ್ಜುನ ಮತ್ತು ವೃಷಕೇತುವಿನ ಕಣ್ಣಾಲಿಗಳು ನಿಧಾನಕ್ಕೆ ಅರಳಿ ತೆರೆದವು, ದೇಹದೊಳಗೆ ಪ್ರಾಣವು ವ್ಯಾಪಿಸತೊಡಗಿತು. ಸುಂದರ ಮುಖ ಕಾಂತಿಪಡೆದು ಪ್ರಕಾಶ ಹೊಂದತೊಡಗಿತು. ಅವಯವಗಳಲ್ಲಿ ಶಕ್ತಿತುಂಬಿತು. ಚಿನ್ಮಯನಾದ ಶ್ರೀ ಕೃಷ್ಣನ ಸಚ್ಚಿದಾನಂದ ಸಾಕಾರಮೂರ್ತಿಯನ್ನು ನೋಡುತ್ತಾ, ಮೆಲ್ಲನೆ ಮೈಮುರಿದು ಅರ್ಜುನ ಮತ್ತು ವೃಷಕೇತು ನಿದ್ದೆಯಿಂದ ಎಚ್ಚರಗೊಂಡವರಂತೆ ಎದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page