
ಕಾರವಾರ: ಜಿಲ್ಲೆಯ ಪುರಾಣ ಪ್ರಸಿದ್ಧ ಸ್ಥಳವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಈಗಾಗಲೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದ್ದು ಇದರ ಬೆನ್ನಲ್ಲೇ ಇದೀಗ ಭಟ್ಕಳ ತಾಲೂಕಿನ ಪ್ರಸಿದ್ಧ ಶಿವ ಕ್ಷೇತ್ರವಾದ ಮುರುಡೇಶ್ವರ ಶಿವಾಲಯದಲ್ಲೂ ವಸ್ತ್ರ ಸಂಹಿತೆ ಜಾರಿ ಮಾಡಿದೆ.
ಇಲ್ಲಿನ ಜಲಸಾಹಸ ಕ್ರೀಡೆ, ಸ್ಕೂಬಾ ಡೈವ್‌ಗಳು ಪ್ರಸಿದ್ಧವಾಗಿದ್ದು, ಬೃಹತ್ ಶಿವನ ಮೂರ್ತಿ ವಿಶ್ವ ಪ್ರಸಿದ್ಧಿ ಪಡೆದಿದೆ. ಹೀಗಾಗಿ ಲಕ್ಷಾಂತರ ಜನ ಪ್ರವಾಸಿಗರು ಮುರುಡೇಶ್ವರಕ್ಕೆ ಭೇಟಿ ನೀಡುತ್ತಾರೆ. ಶಿವನ ದೇವಾಲಯಕ್ಕೆ ಭೇಟಿ ನೀಡುವ ವೇಳೆ ಪುರುಷರು ಚಡ್ಡಿ, ಬನಿಯನ್‌ನಲ್ಲಿ ಬಂದರೆ, ಮಹಿಳೆಯರು ಸಹ ಧಾರ್ಮಿಕ ಸ್ಥಳದಲ್ಲಿ ಧರಿಸಬೇಕಾದ ವಸ್ತ್ರ ಧರಿಸದೇ ಆಕ್ಷೇಪಾರ್ಹ ರೀತಿಯಲ್ಲಿ ದೇವರ ದರ್ಶನಕ್ಕೆ ಬರುತಿದ್ದರು. ಆಸ್ತಿಕ ಭಕ್ತರು ಈ ಬಗ್ಗೆ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿ ತರುವಂತೆ ಮನವಿ ಮಾಡಿದ್ದರು.
ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಪುರುಷರಿಗೆ ಪಂಚೆ ಮತ್ತು ಮಹಿಳೆಯರಿಗೆ ಸೀರೆ, ಚೂಡಿದಾರ ಧರಿಸಿದರೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸಲಿದೆ. ದೇವಾಲಯದ ಎದುರುಭಾಗ ಸೂಚನ ಫಲಕ ಹಾಕಲಾಗಿದ್ದು, ಯಾವ ವಸ್ತ್ರ ಧರಿಸಬೇಕು ಎಂದು ಫಲಕದಲ್ಲಿ ನಮೂದಿಸಲಾಗಿದೆ.






















































