
ಕಾರ್ಕಳ: ಕರ್ನಾಟಕ ರಾಜ್ಯ ಹೈಕೋರ್ಟ್ ಕಳೆದ ವರ್ಷ ಅಕ್ಟೋಬರ್ 20 ರಂದು ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದ್ದ ಬಾಲಕೃಷ್ಣ ಪೂಜಾರಿ (44) ಅವರ ಸಂಚುಪೂರ್ವಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಪತ್ನಿ ಪ್ರತಿಮಾ (36) ಅವರಿಗೆ ಶರತ್ತುಬದ್ದ ಜಾಮೀನು ಮಂಜೂರುಗೊಳಿಸಿದೆ.
ಅಕ್ಟೋಬರ್ 25ರಂದು ಅಜೆಕಾರು ಪೊಲೀಸ್ ಠಾಣೆಯ ಪೊಲೀಸರು ಮೃತ ಬಾಲಕೃಷ್ಣ ಪೂಜಾರಿಯ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಎಂಬವರು ಸೇರಿ ಈ ಕೊಲೆ ಎಸಗಿದ್ದಾರೆ ಎಂಬ ಆರೋಪದಡಿ ಇಬ್ಬರನ್ನೂ ಬಂಧಿಸಿ ತನಿಖೆ ಸಂದರ್ಭದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅಜೆಕಾರು ಪೊಲೀಸರು ಆರೋಪಪತ್ರ ಸಲ್ಲಿಸಿದ್ದರು.
ಕಳೆದ ಕೆಲವು ತಿಂಗಳ ಹಿಂದೆ ಪ್ರಿಯಕರ ದಿಲೀಪ್ ಹೆಗ್ಡೆ ಕೂಡ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ಇದೀಗ ರಾಜ್ಯ ಹೈಕೋರ್ಟ್, ಪ್ರಕರಣದ ಪರಿಶೀಲನೆಯ ನಂತರ, ಪ್ರತಿಮಾಳಿಗೆ ನಿಗದಿತ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದೆ.



















