28 C
Udupi
Saturday, April 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ -198

ಭರತೇಶ್ ಎಕ್ಕಾರ್

ಅರ್ಜುನ ತನಗಾಗಿ ವ್ಯವಸ್ಥೆ ಮಾಡಿದ್ದ ಶಯನಾಗಾರದಲ್ಲಿ ವಿಶ್ರಾಂತನಾಗಿದ್ದಾನೆ. ಗೂಢಾಕೇಶಿ ಅರ್ಜುನ ನಿದ್ರೆಯನ್ನು ಗೆದ್ದವನಾದರೂ, ಪರಶಿವನೊಡನೆ ಕಾದಾಡಿ ಬಸವಳಿದ ದಣಿವು, ಸ್ವರ್ಗಯಾನದ ಬಳಲಿಕೆ ತನು ಮನಗಳನ್ನು ತುಂಬಿತ್ತು. ಸ್ವರ್ಗದ ಮಹಿಮೆಯೊ ಏನೋ ಆತ ಬಯಸಿದ ಸುಖ ವಿಶ್ರಾಂತಿ ದೊರಕಿದ ಕಾರಣವೊ ಏನೋ! ಪರಸ್ಥಳವಾದರೂ ಮನಸ್ಸು ನಿರಾಳವಾಗಿದೆ. ತನ್ನನ್ನು ಅನುಗ್ರಹಿಸಿರುವ ಪಿತನಾದ ಇಂದ್ರನ ಆಸ್ಥಾನವೆಂಬ ಸ್ವಸ್ಥಾನ ಭಾವವೋ ಅಂತೂ ಅರ್ಜುನನಿಗೆ ಗಾಢ ನಿದ್ರೆ ಆವರಿಸುವಂತೆ ಮಾಡಿತ್ತು.

ಊರ್ವಶಿ ಸಖಿ ಸಮೇತಳಾಗಿ ಬಂದವಳು ಸೌಕರ್ಯ ವಸ್ತುಗಳನ್ನು ಎಳ್ಳಿನಿತೂ ಸದ್ದು ಮಾಡದೆ ಅರ್ಜುನನ ಶಯನಾಗಾರದಲ್ಲಿ ಇಟ್ಟು ಬರಲು ಹೇಳಿದಳು. ಅಂತೆಯೆ ಅವರು ಮರಳಿ ಬಂದಾಗ, ಅವರನ್ನು ಅಲ್ಲಿಯೆ ಹೊರಗೆ ನಿಂತಿರಲು ಹೇಳಿ ತಾನೊಬ್ಬಳು ಅರ್ಜುನನ ಬಳಿ ಹೋದಳು.

ಅರೇ! ಈ ಪುಣ್ಯಾತ್ಮನಿಗೆ ನಿದ್ದೆಯೆ? ಅದೂ ಸ್ವರ್ಗದ ವಿಲಾಸಿನಿ ಸುಖಕ್ಕಿಂತಲೂ ಯೋಗಮಾಯೆಯ ನಿದ್ದೆಯೆ ಹಿತವಾಯಿತೆ? ಮಲಗಿ ನಿದ್ರಿಸುತ್ತಿದ್ದ ಅರ್ಜುನನನ್ನು ಕಣ್ತುಂಬಾ ನೋಡಿಕೊಂಡು ಆನಂದಿಸಿದಳು. ಅಜಾನುಬಾಹು, ವಿಶಾಲ ವಕ್ಷ, ತೇಜಸ್ಸಿನ ಮುಖ. ಪ್ರತಿ ಇಂದ್ರನಂತೆ ಶೋಭಿಸುತ್ತಿದ್ದಾನೆ. ಕಾತರ ತಡೆಯಲಾಗದೆ ಎಚ್ಚರಿಸ ಬೇಕೆಂದು ತೀರ್ಮಾನಿಸಿದಳು ಊರ್ವಶಿ. ಅರ್ಜುನನ ಸನಿಹಕ್ಕೆ ಬಂದು ಬಗ್ಗಿ ತನ್ನ ಕಾಲ್ಗೆಜ್ಜೆಯನ್ನೆಳೆದಾಗ ಗೆಜ್ಜೆಯ ಜೊತೆ ಕೈ ಬಳೆಗಳು ಕಿಂಕಣ ದನಿಯೆಬ್ಬಿಸಿದವಾದರೂ ಅವನಿಗೆ ಪರಿವೆಯೇ ಇಲ್ಲ. ಎರಡೂ ಕರಗಳನ್ನೆತ್ತಿ ತನ್ನ ಕೇಶ ಸರಿ ಪಡಿಸುವಂತೆ ಮಾಡಲೆತ್ನಿಸಿದಾಗ ಬಳೆಗಳೆಲ್ಲ ಒಂದಕ್ಕೊಂದು ತಾಗುತ್ತಾ ಜಾರುವ ಸದ್ದು ಅರ್ಜುನನ ಕಿವಿಗೆ ಕೇಳಿಸಿತು. ಕಣ್ತೆರೆದು ನೋಡಿದರೆ ಸುಂದರ ನಾರಿ. ಯಾರು ಇವಳು ಎಂದು ತನ್ನ ಸ್ಮರಣೆಯೊಳಗೊಮ್ಮೆ ವಿಮರ್ಷಿಸಿದಾಗ ದೇವಲೋಕದ ಸುರನಾರಿಯರ ನರ್ತನದಲ್ಲಿ ತನ್ನ ಮನಸೆಳೆದಿದ್ದ ಊರ್ವಶಿ. ಎದ್ದು ನಿಂತು ಕೈ ಮುಗಿದು, “ತಾವು… ಇಲ್ಲಿ…” ಎಂದು ತಡವರಿಸುತ್ತಾ ಕೇಳಿದನು.

ಊರ್ವಶಿಗೆ ವಿಚಿತ್ರವಾದರೂ, ಪುಣ್ಯ ಸಂಚಯದಿಂದ ಯೋಗ ಪ್ರಾಪ್ತವಾಗಿದ್ದರೂ, ಅರ್ಜುನ ಭೂಲೋಕದವನಲ್ಲವೇ? ಸ್ವರ್ಗದ ವ್ಯವಹಾರ ತಿಳಿದಿರಲಿಕ್ಕಿಲ್ಲ. ಆತನಿಗೆ ವಿವರಿಸುವೆನೆಂದು ಹೇಳತೊಡಗಿದಳು “ದೇವೇಂದ್ರನ ಅಪ್ಪಣೆಯಂತೆ ಸುದ್ದಿವಾಹಕನಾಗಿ ಚಿತ್ರಸೇನ ನನ್ನ ಬಳಿ ಬಂದಿದ್ದ. ಇಂದಿನ ದಿನ ಅರ್ಜುನಾ ನಿನಗೆ ಸ್ವರ್ಗದ ಭೋಗಸುಖವೀಯಲು ರಾಜಾಜ್ಞೆಯಾಗಿದೆ. ಹಾಗೆ ಪ್ರಭು ಇಂದ್ರನ ಆಜ್ಞಾನುವರ್ತಿಯಾಗಿ ಬಂದವಳು ನಾನು. ನನಗೂ ನಿನ್ನ ಮೇಲೆ ಅನುರಾಗ ಉಂಟಾಗಿತ್ತು. ನಾಟ್ಯ ಪ್ರದರ್ಶನ ಸಮಯ ನೀನೂ ನನ್ನನ್ನು ಮೆಚ್ಚಿಕೊಂಡದ್ದನ್ನು ಗಮನಿಸಿರುವೆ. ಯೋಗವೋ ಭಾಗ್ಯವೋ ನನ್ನ ಆಸೆಯಂತೆ ದೇವರಾಜ ಇಂದ್ರ ನನಗೆ ನಿನ್ನ ಸೇವೆಯ ಅವಕಾಶ ಕಲ್ಪಿಸಿರುವುದು ನನ್ನ ಪಾಲಿನ ಸೌಭಾಗ್ಯವೇ ಹೌದು…” ಎನ್ನುತ್ತಾ ವಿಲಾಸಿನಿಯಾಗಿದ್ದರೂ ನಾಚಿ ನೀರಾದಳು.

ಅರ್ಜುನ ಧರ್ಮರಾಯನ ಅನುಜ. ಧರ್ಮ ಮೀರಿ ವ್ಯವಹರಿಸುವವನಲ್ಲ. ಊರ್ವಶಿಯನ್ನು ಉದ್ದೇಶಿಸಿ ಗೌರವ ಭಾವದಿಂದ ” ಅಮ್ಮಾ, ನಿನಗೆ ಪ್ರಣಾಮಗಳು. ನಿಮ್ಮ ನಾಟ್ಯವನ್ನು ಮನಸಾರೆ ಮೆಚ್ಚಿ, ತದೇಕ ಚಿತ್ತದಿಂದ ನೋಡಿ ಆನಂದಿಸಿದ್ದು ನಿಜ. ಅಲ್ಲಿ ಕಲೆಯ ಮೇರು ಪ್ರದರ್ಶನಕ್ಕೆ ಅಭಿನಂದನೆಯ ದೃಷ್ಟಿ ಮಾತ್ರ ಇತ್ತು ವಿನಃ ಅನ್ಯ ಯಾವ ಭಾವವೂ ಇರಲಿಲ್ಲ. ಮೇಲಾಗಿ ನಾನು ದೇವೇಂದ್ರನ ಅಂಶದಿಂದ ಹುಟ್ಟಿದವನು. ನೀವು ನನ್ನ ಪಿತೃ ಸ್ಥಾನಿಯಾದ ಸ್ವರ್ಗಾಧಿಪನ ವಿಲಾಸಿನಿ ಆಗಿದ್ದೀರಿ. ಹಾಗಾಗಿ ನನಗೆ ಮಾತೃ ಸಮಾನಳಾಗುವಿರಿ. ನನ್ನನ್ನು ಅನುಗ್ರಹಿಸಬೇಕು ಅಮ್ಮಾ” ಎಂದು ಕೈ ಮುಗಿದು ನಿಂತನು.

ಕೇಳಿದ ಊರ್ವಶಿಗೆ ಆಶಾಭಂಗ ಆದಂತಾದರೂ, ಪ್ರಯತ್ನ ಕೈಬಿಡದೆ ಅರ್ಜುನನಿಗೆ ತಿಳಿ ಹೇಳುವ ಪ್ರಯತ್ನ ನಿರತಳಾದಳು “ಅರ್ಜುನಾ! ನಾನು ಅಪ್ಸರೆ. ನನಗೆ ಮುಪ್ಪೆಂಬುದಿಲ್ಲ. ಚಿರ ಯೌವ್ವನೆಯಾಗಿರುವ ನಾನು, ಅತಿಶಯ ಪುಣ್ಯ ಸಂಚಯದಿಂದ ಸ್ವರ್ಗ ಪ್ರಾಪ್ತಿಯಾದವರಿಗೆ ಸುಖ ನೀಡುವುದು ನನ್ನ ಧರ್ಮ. ನೀನು ಹೇಳಿದಂತೆ ಪುಣ್ಯಾತ್ಮರಾಗಿ ಬರುವ ಭೂಲೋಕದ ಸಂಬಂಧದಲ್ಲಿ ಅಜ್ಜ, ಮೊಮ್ಮಗ ಈರ್ವರಿಗೂ ಇಲ್ಲಿ ಸಮಾನ ಸುಖ ಸಿಗುವುದು. ಮೊದಲು ಅಜ್ಜ ಸುಖಿಸಿದ್ದನೆಂದು ಬಳಿಕ ಬರುವ ಪುಣ್ಯಾತ್ಮ ಮೊಮ್ಮಗನಿಗೆ ನಾನು ಅಜ್ಜಿಯಾಗಲಾರೆ. ಇಲ್ಲಿ ಸಂಬಂಧಗಳಿಲ್ಲ. ಇಂದ್ರನಿಗೂ, ಆತನ ಪುತ್ರ ಜಯಂತನಿಗೂ ಸಮಯ ಒದಗಿದಾಗ ನಾನು ಸಮಾನಳೇ ಆಗಿರುವೆ. ಹಾಗಾಗಿ ಇಂತಹ ಗೊಂದಲಕ್ಕೊಳಗಾಗಬೇಡ” ಎಂದಳು.

ಊರ್ವಶಿಯಿಂದ ಸ್ವರ್ಗದ ಧರ್ಮ ವಿಚಾರ ತಿಳಿದು “ಅಮ್ಮಾ, ನೀವೀಗ ಹೇಳಿರುವುದು ದಿವ್ಯ ಶರೀರಿಗಳ ವ್ಯವಹಾರ. ಪುಣ್ಯಾತ್ಮರೂ ಭೌತಿಕ ಶರೀರ ತೊರೆದು ಭೂಮಿಯ ಜೀವನ ಮುಗಿಸಿ ಬರುವವರ ವಿಚಾರ. ನಾನು ಹಾಗಲ್ಲ, ಪಂಚಭೂತಾತ್ಮಕವಾದ ಭೌತಿಕ ಶರೀರವನ್ನು ಆಧರಿಸಿ, ಶಿವಾನುಗ್ರಹದ ಬಲದಿಂದ ಸುಯೋಗ ಪಡೆದು ಸ್ವರ್ಗಕ್ಕೆ ಸಶರೀರಿಯಾಗಿ ಬಂದವನು. ಮಾತ್ರವಲ್ಲ ಈ ಕಾಲದಲ್ಲಿ ವನವಾಸದ ದೀಕ್ಷಾ ಬದ್ಧನಾಗಿ, ಸುಖಭೋಗ ರಹಿತನಾಗಿ ಬದುಕಬೇಕಾದವನು. ಆದಷ್ಟು ಶೀಘ್ರವಾಗಿ ಕಾನನದಲ್ಲಿರುವ ನನ್ನ ಅಣ್ಣ ತಮ್ಮಂದಿರನ್ನು ಸೇರಬೇಕಾದ ಅನಿವಾರ್ಯತೆ ನನಗಿದೆ. ಹಾ! ಇನ್ನೂ ಒಂದು ವಿಚಾರವಿದೆ. ವಿಶೇಷವಾಗಿ ನಾವು ನಿಮ್ಮ ವಂಶದವರೆ ಹೌದು, ಹಾಗೆಂದು ಸ್ಪಷ್ಟವಾಗಿ ಹೇಳಬಹುದು. ಇದು ಸ್ವರ್ಗದ ಕಥೆಯಲ್ಲ, ನಿಮಗೆ ಗೊತ್ತಿದೆ ತಾನೆ! ನೀವೇ ಭುವಿಗಿಳಿದು ಬಂದು ನಮ್ಮ ವಂಶದ ಹಿರಿಯರು, ನಮಗೆ ಪಿತೃ ಆಗಿರುವ ಮಹಾತ್ಮ ಪುರು ರಾಜರ ಜೊತೆ ಸಂಸಾರ ಮಾಡಿದ್ದೀರಿ. ಆ ವಂಶವೃಕ್ಷವೇ ಬೆಳೆದು ವರ್ತಮಾನಕಾಲದಲ್ಲಿ ನಾವು ಭೂಮಿಯಲ್ಲಿದ್ದೇವೆ. ಭುವಿಯ ಆ ಸಂಬಂಧದಲ್ಲಿ ನೀವು ನಮಗೆ ಮಹಾ ಮಾತೆಯೇ ಆಗಿರುವಿರಿ. ತಾಯೇ, ನನ್ನನ್ನು ಅಧರ್ಮ ಕಾರ್ಯಕ್ಕೆ ಒತ್ತಾಯಿಸದೆ ಮುಂದೆ ನಮ್ಮಿಂದಾಗಬೇಕಾದ ದುಷ್ಟ ನಿಗ್ರಹ ಕಾರ್ಯಕ್ಕೆ ಅನುಗ್ರಹಿಸಬೇಕು” ಎಂದು ಬೇಡಿದನು.

ಊರ್ವಶಿ ಗೆ ಒಮ್ಮೆ ಮೈಯೆಲ್ಲಾ ಉರಿದುಹೋದಂತೆ ಭಾಸವಾಯಿತು. ಅರೆ ಕ್ಷಣ ಸಿಟ್ಟೂ ಮನ ಮಾಡಿತು “ಅರ್ಜುನಾ! ಪರಮ ಧಾರ್ಮಿಕನಂತೆ ವ್ಯವಹರಿಸುತ್ತಿರುವೆ. ನಿಮ್ಮ ವೈಯಕ್ತಿಕ ಜೀವನದ ನಡೆ ಧರ್ಮ ಸಮ್ಮತವಾಗಿದೆಯೇ? ದ್ರೌಪದಿ ಓರ್ವಳನ್ನು ನೀವೈವರು ಸತಿಯೆಂದು ಸ್ವೀಕರಿಸಿಲ್ಲವೇ? ಅದು ಯಾವ ಧರ್ಮ? ಅಣ್ಣನ ಪತ್ನಿ ತಮ್ಮನಿಗೆ ಸಂಬಂಧಿಯಾಗಳಾರಲೇ? “

ಅರ್ಜುನನಿಗೆ ಈ ಪ್ರಶ್ನೆ ಕೇಳಿಸಿ ಊರ್ವಶಿಯ ಬಗ್ಗೆ ತಾತ್ಸಾರವೆ ಮೂಡಿತು. ಆದರೂ ತೋರಗೊಡದೆ, “ತಾಯೇ, ಈ ಪ್ರಶ್ನೆ ತೀರಾ ಮೂಢರು ಕೇಳಿದ್ದರೆ ಉತ್ತರಿಸದೆ ಉದಾಸೀನ ತೋರುತ್ತಿದ್ದೆ. ನಿಮಗಾಗಿ ವಿವರಿಸುವೆ. ಸ್ವಯಂವರ ಪಣದಲ್ಲಿ ನಾನು ಗೆದ್ದು ಜೊತೆಗೆ ಬಂದ ದ್ರೌಪದಿಯ ವಿಚಾರದಲ್ಲಿ ನಮ್ಮ ಮಾತೆ ಕುಂತಿದೇವಿಯ ಆದೇಶ ನಮಗೆ ಪಾಲಿಸಲೇ ಬೇಕಾಗಿ ಬಂತು. ಆದರೂ ದ್ರುಪದ ಮಹಾರಾಜರು ವಿವೇಚಿಸಿ, ಭಗವಾನ್ ವೇದವ್ಯಾಸ ಮಹರ್ಷಿಗಳು ಬಂದು ಈ ಸಂಬಂಧವನ್ನು ಸಾಧು ಎಂದು ಸಮರ್ಥಿಸಿದ ಬಳಿಕ ನಮ್ಮ ವಿವಾಹವನ್ನು ಮಾಡಿಸಿರುವುದು. ಧೌಮ್ಯರೂ, ದ್ರುಪದ ಕುಲಗುರುಗಳಾದ ಶತಾನಂದರೂ ಉಪಸ್ಥಿತರಿದ್ದು ಈ ವಿವಾಹ ಪ್ರಜಾವರ್ಗಕ್ಕೆ ಅನುಸರಣೀಯವಲ್ಲ ಎಂದೂ ಘೋಷಿಸಿದ್ದಾರೆ. ಮಹರ್ಷಿ ನಾರದರು ಬಂದು ಸೂಕ್ತ ನಿಯಮವನ್ನು ನಮ್ಮ ಜೀವನಕ್ಕೆ ರೂಪಿಸಿದ್ದಾರೆ. ಅಂತೆಯೇ ಧರ್ಮಸಮ್ಮತವಾಗಿ ನಮ್ಮ ಸಂಸಾರ ಸಾಗುತ್ತಿದೆ. ತುಸು ತಪ್ಪಿದ್ದಕ್ಕೆ ಶಿಕ್ಷೆಯಾಗಿ ನಾನು ತೀರ್ಥಯಾತ್ರೆಯನ್ನೂ ಮಾಡಿದವನಿದ್ದೇನೆ. ಪತಿವ್ರತೆಯಾದ ದ್ರೌಪದಿಯ ಬಗ್ಗೆ ವೃಥಾ ಗೊಂದಲ ತಾಳದಿರಿ” ಎಂದು ವಿನಂತಿಸಿದನು.

“ಆಯಿತು ಆ ವಿಚಾರ ಬಿಡೋಣ. ನಿನ್ನ ಪ್ರಕಾರ ಸ್ವರ್ಗ ಸುಖಭೋಗ ಅಧರ್ಮ, ಪಾಪಕೃತ್ಯವೆಂದು ಒಪ್ಪಿಕೊಳ್ಳೋಣ. ನೀನು ಅತ್ಯಂತ ಮಹತ್ತರವಾದ ಪುಣ್ಯ ಸಂಚಯದಿಂದ ಅತಿ ದುರ್ಲಭವಾದ ಸಶರೀರಧಾರಣೆಯಿಂದಲೆ ಸ್ವರ್ಗಕ್ಕೆ ಬಂದವನು. ಶತಯಾಗ ಪುಣ್ಯ ಬಲದಿಂದ ತ್ರಿಮೂರ್ತಿಗಳ ಪೂರ್ಣಾನುಗ್ರಹದಿಂದ ಸ್ವರ್ಗ ಸಿಂಹಾಸನ ಏರಬಹುದು. ನಿನಗೆ ಅದೂ ಸಾಧ್ಯವಾಯಿತು. ಅಂತಹ ಮಹಿಮಾ ವಿಶೇಷನೂ ಆಗಿರುವ ನೀನು ನನ್ನ ಬೇಡಿಕೆಯಂತೆ ಸುಖ ಪಡೆದೆ ಎಂದಾದರೆ ಅದು ನಿನ್ನ ಜೀವನ ಪರ್ಯಂತರ ಸವಿ ನೆನಪಾಗಿ ಉಳಿದೀತು. ನೀನು ಬಯಸಿದರೆ ಭವಿಷ್ಯದಲ್ಲೂ ನಿನಗಾಗಿ ಒಲಿದು ಬರುವೆ. ಈಗ ನಿನ್ನ ಅಭಿಮತದಂತೆ ಈ ಕೆಲಸ ಪಾಪ ಹೌದೇ ಆದರೂ, ನಿನ್ನ ಸಂಚಿರ ಪುಣ್ಯದಲ್ಲಿ ಅಲ್ಪ ಪ್ರಮಾಣ ನಷ್ಟವಾದೀತೇ ಹೊರತು, ಮತ್ತೇನೂ ತೊಂದರೆಯಾಗದು. ಹಾಗಾಗಿ ಒದಗಿದ ಸುವರ್ಣಾವಕಾಶವನ್ನು ಎಡಗಾಲಿಂದ ಒದ್ದು ಕಳೆದುಕೊಳ್ಳಬೇಡ” ಎಂದು ಎಚ್ಚರಿಸಿ ತನ್ನ ವಾಂಛೆಯನ್ನು ಮುಂದಿಟ್ಟಳು.

ಅರ್ಜುನನಿಗೆ ಧರ್ಮಸಂಕಟವಾಗಿ ಯೋಚಿಸತೊಡಗಿದನು.

ಮುಂದುವರಿಯುವುದು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page