
ಭಾರತೀಯ ಕ್ರಿಕೆಟ್ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು instagram ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಕೊಹ್ಲಿ “ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ನೀಲಿ ಜೆರ್ಸಿ ಹಾಕಿ 14 ವರ್ಷಗಳಾಗಿವೆ. ನಿಜವಾಗಿಯೂ, ಇದು ನನ್ನನ್ನು ಇಲ್ಲಿಗೆ ಕೊಂಡೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಇದು ನನ್ನನ್ನು ಪರೀಕ್ಷಿಸಿದೆ, ರೂಪಿಸಿದೆ ಮತ್ತು ಜೀವನಪೂರ್ತಿ ನೆನಪಿನಲ್ಲಿರುವ ಪಾಠಗಳನ್ನು ಕಲಿಸಿದೆ. ನನ್ನ ಟೆಸ್ಟ್ ಜೀವನವನ್ನು ನೆನೆಸಿಕೊಂಡಾಗ ನಗು ಮೂಡುತ್ತದೆ.
ಬಿಳಿಯ ಉಡುಪಿನಲ್ಲಿ ಆಡುವುದರಲ್ಲಿ ಏನೋ ಆತ್ಮೀಯವಾದದ್ದು ಇದೆ. ಸದ್ದಿಲ್ಲದ ಕಠಿಣ ಶ್ರಮ, ದೀರ್ಘ ದಿನಗಳು, ಯಾರಿಗೂ ಕಾಣದ ಆದರೆ ಶಾಶ್ವತವಾಗಿ ನಿಮ್ಮೊಂದಿಗಿರುವ ಸಣ್ಣ ಕ್ಷಣಗಳು.
ಇದರಿಂದ ದೂರವಾಗುತ್ತಿರುವಾಗ, ಇದು ಸುಲಭವಲ್ಲ ಅಂತ ಗೊತ್ತಿದ್ದರೂ ಕೂಡ ನನಗೆ ಇದು ಸರಿಯೆನಿಸುತ್ತದೆ. ನಾನು ಎಲ್ಲವನ್ನೂ ನೀಡಿದ್ದೇನೆ, ಇದು ನಾನು ಆಶಿಸಿದ್ದಕ್ಕಿಂತ ಎಷ್ಟೋ ಹೆಚ್ಚಿನದನ್ನು ನನಗೆ ನೀಡಿದೆ.
ಆಟಕ್ಕಾಗಿ, ನಾನು ಮೈದಾನದಲ್ಲಿ ಹಂಚಿಕೊಂಡ ಜನರಿಗಾಗಿ, ಮತ್ತು ನನ್ನನ್ನು ಗಮನಿಸಿದ ಪ್ರತಿಯೊಬ್ಬ ವ್ಯಕ್ತಿಗಾಗಿ ನಾನು ಕೃತಜ್ಞತೆಯಿಂದ ತುಂಬಿದ ಹೃದಯದೊಂದಿಗೆ ಹೊರನಡೆಯುತ್ತಿದ್ದೇನೆ. ನಾನು ಯಾವಾಗಲೂ ನನ್ನ ಟೆಸ್ಟ್ ವೃತ್ತಿಜೀವನವನ್ನು ಖುಷಿಯೊಂದಿಗೆ ನೆನಪಿಸಿಕೊಳ್ಳುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಜೂನ್ 20, 2025 ರಿಂದ ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೇ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗುವ ತಮ್ಮ ಉದ್ದೇಶವನ್ನು ತಿಳಿಸಿದ್ದರು.




















