ಭಾಗ -189
ಭಾರತೇಶ್ ಎಕ್ಕಾರ್

ಅರ್ಜುನ ಪ್ರಯಾಣ ಆರಂಭಿಸುವಾಗ ನಾರುವಸ್ತ್ರವನ್ನುಟ್ಟು, ಕೃಷ್ಣಾಜಿನವನ್ನು ಹೊದೆದು, ಕಿರುಗತ್ತಿಯನ್ನು ಸೊಂಟದಲ್ಲಿ ಸಿಕ್ಕಿಸಿ, ಎರಡೂ ಭುಜಗಳಿಗೆ ಬತ್ತಳಿಕೆ ಬಿಗಿದು, ಗಾಂಡೀವವನ್ನು ಹೆಗಲಿಗೇರಿಸಿ ಹೊರಟಿದ್ದನು.
ಸುದೀರ್ಘ ಪ್ರಯಾಣ ಬೆಳೆಸಿ ಇಂದ್ರಕೀಲಕದ ಬಳಿ ಸಾಗುತ್ತಿರುವಾಗ “ಯಾರು ನೀನು? ನಿಲ್ಲಲ್ಲಿ!” ಎಂಬ ಆಜ್ಞಾವಾಕ್ಯ ಕೇಳಿ ಅರ್ಜುನ ತಟಸ್ಥನಾದನು. ನೋಡಿದರೆ ಪ್ರಭಾವಿ ತಪಸ್ವಿಯೋರ್ವರಿದ್ದಾರೆ. “ಇದು ತಪಸ್ವಿಗಳು ತಪಸ್ಸನ್ನಾಚರಿಸುವ ಪ್ರದೇಶ. ಪ್ರಶಾಂತವೂ, ನೀರವವೂ ಆದ ಈ ಕ್ಷೇತ್ರದಲ್ಲಿ ಆಯುಧಗಳ ಟಂಕಾರ ಠೇಂಕಾರಗಳಿಂದ ಆಗಬಹುದಾದ ಅಶಾಂತಿಗೆ ಅವಕಾಶವಿಲ್ಲ. ಇಲ್ಲಿ ಆಯುಧ ಸಮೇತನಾಗಿ ಬಂದ ನಿನಗೇನು ಕೆಲಸ?” ಎಂಬ ಪ್ರಶ್ನೆ ಮತ್ತೆ ಬಂತು. ಆಗ ಶಾಂತ ಚಿತ್ತನಾಗಿ ಅರ್ಜುನ ಉತ್ತರ ನೀಡ ತೊಡಗಿದನು “ಪೂಜ್ಯರೇ ನಿಮಗೆ ಪ್ರಣಾಮಗಳು. ನಾನೂ ತಪಸ್ವಿಗಳ ಮಧ್ಯೆ ಸೇವೆ ಮಾಡುತ್ತಾ ಬೆಳೆದ ಕ್ಷತ್ರಿಯ. ಕ್ಷಾತ್ರವರ್ಣೀಯನಾಗಿದ್ದರೂ ತಪಗೈದು ಶಿವಾನುಗ್ರಹ ಪ್ರಾಪ್ತಿಗಾಗಿ ಬಂದಿದ್ದೇನೆ. ಇನ್ನು ನನ್ನಲ್ಲಿರುವ ಆಯುಧಗಳ ಬಗ್ಗೆ ಪ್ರಶ್ನೆಯೇ? ವರ್ಣಾಶ್ರಮ ಧರ್ಮದಂತೆ ಕ್ಷತ್ರಿಯರಿಗೆ ಸತ್ಪಾತ್ರರ ರಕ್ಷಣೆ ಪರಮ ಧ್ಯೇಯ. ಅಗತ್ಯ ಕಾಲದಲ್ಲಿ ಬಳಕೆಯ ಉದ್ದೇಶದಿಂದ ಈ ಆಯುಧಗಳು ಭೂಷಣವೆ ಆಗಿದೆ. ಇನ್ನು ತಪಗೈಯಲು ಬಂದ ನನಗೇಕೆ ಈ ಆಯುಧಗಳೆಂಬ ಜಿಜ್ಞಾಸೆಯಿದ್ದರೆ – ತಪಸ್ಸನ್ನಾಚರಿಸುವ ಯಾರೆ ಆಗಲಿ ಆತ ಆಸೆ, ಆಮಿಷ, ಪ್ರಲೋಭಗಳನ್ನು ಕಡಿ ಕಡಿದು ಚಿತ್ತಶುದ್ಧಿಯನ್ನು ಸಾಧಿಸಿ ಬರಬೇಕು. ಅಂತಹ ಚಿತ್ತ ಚಾಂಚಲ್ಯಗಳನ್ನು ಕಡಿದು ಬರುವ ಮನೋಬುದ್ಧಿಯೆಂಬ ಹರಿತವಾದ ಆಯುಧದ ಪ್ರತೀಕವೇ ಈ ಕಿರುಗತ್ತಿ. ಈ ದೇಹ ಎಂಬ ದಂಡವನ್ನು ಬಾಗಿಸಿ ತಪಸ್ಚರ್ಯೆ ಎಂಬ ಹಗ್ಗದಿಂದ ಕಟ್ಟಿ ಸ್ಥಿತಗೊಳಿಸಿ, ಚಿತ್ತ ಶುದ್ಧಿಯಿಂದ ಭಕ್ತಿಯ ಧ್ಯಾನಗಳೆಂಬ ಬಾಣಗಳನ್ನು ಅನುಸಂಧಾನಗೊಳಿಸಿ ಇಷ್ಟದೇವತೆಯ ಸಾನಿಧ್ಯದತ್ತ ಲಕ್ಷ್ಯವಿರಿಸಿ ಅನುಸಂಧಾನಗೊಳಿಸಿ, ಅನುಗ್ರಹವೆಂಬ ಗುರಿಯನ್ನು ಸಾಧಿಸುವ ಪ್ರಯೋಗದ ದ್ಯೋತಕವೇ ಈ ಧನುರ್ಬಾಣಗಳು. ಜನ್ಮಾಂತರದ ಕರ್ಮಫಲಗಳು ತುಂಬಿ ಕೊಂಡಿವೆ, ಅವೆಲ್ಲವನ್ನೂ ಒಂದೊಂದಾಗಿ ಭಗವಂತನಿಗೆ ಸಮರ್ಪಿಸಿ ಭವಭಯದ ಹೊರೆಯನ್ನು ಇಳಿಸಬೇಕು. ಅದರ ಸೂಚಕವೆ ತುಂಬಿರುವ ಈ ಬತ್ತಳಿಕೆಗಳು. ಈ ರೀತಿಯ ಸಿದ್ಧತೆಗಳಿಂದಲೆ ನಾನು ಬಂದಿರುವೆ” ಎಂದನು.
ಅರ್ಜುನನ ಸಮರ್ಥನೆಯ ಉಪಮೆಗಳನ್ನು ಮೆಚ್ಚಿದ ತಪಸ್ವಿಯು “ಮಗನೇ, ನಿನ್ನ ಧೃಡತೆಯನ್ನು ಮೆಚ್ಚಿದ್ದೇನೆ” ಎಂದು ಹೇಳಿ ನಿಜರೂಪದಿಂದ ಇಂದ್ರ ಪ್ರಕಟನಾದನು. “ಅರ್ಜುನಾ, ನಿನಗೇನು ಬೇಕು ಕೇಳು, ಈ ಕ್ಷಣವೇ ಸ್ವರ್ಗ ಸುಖದ ಸರ್ವಸ್ವವನ್ನೂ ಅನಾಯಾಸವಾಗಿ ಕರುಣಿಸಬಲ್ಲೆ. ಆ ಸುಖ ಭೋಗ್ಯತೆಗೆ ನೀನು ಯೋಗ್ಯತಾವಂತನೇ ಆಗಿರುವೆ” ಎಂದು ಕರುಣಾದೃಷ್ಟಿ ಬೀರಿದನು ದೇವರಾಜನಾದ ಇಂದ್ರ. “ದೇವೇಶ, ನೀವು ಪ್ರಸ್ತಾಪಿಸಿದ ಅದ್ಯಾವುದನ್ನೂ ನಾನು ಅಪೇಕ್ಷಿಸಿ ಬಂದವನಲ್ಲ. ಭಗವಾನ್ ವ್ಯಾಸರಿಂದ ಉಪದೇಶಿಸಲ್ಪಟ್ಟ ದಿವ್ಯಮಂತ್ರಬಲದಿಂದ ಶಿವ ಪರಮಾತ್ಮನನ್ನು ಸಾಕ್ಷಾತ್ಕರಿಸಿ ಅನುಗ್ರಹ ಪ್ರಾಪ್ತಿಗಾಗಿ ಬಂದವನು. ಮಹಾದೇವನ ಒಲುಮೆ ಒಂದನ್ನು ಬಿಟ್ಟು ಅನ್ಯ ಯಾವ ಕಾಮನೆಗಳೂ ನನ್ನಲ್ಲಿಲ್ಲ. ನಿಮಗೆ ಕರುಣಿಸುವ ಆಶಯವಿದ್ದರೆ ಶಿವಾನುಗ್ರಹ ಪ್ರಾಪ್ತಿ ಸುಸಾಂಗವಾಗಿ ಸಿದ್ಧಿಸಲಿ ಎಂದು ಹರಸಿ ಆಶೀರ್ವಾದ ಮಾಡಿ. ನನಗದೇ ಮಹತ್ತರವಾದದ್ದು” ಎಂದನು. ಅರ್ಜುನನ ಸದೃಢ ಮನೋಬಲ, ಸಕ್ಷಮ ಸಂಕಲ್ಪ, ಆರ್ಜನೆಯ ತುಡಿತದ ಏಕಾಗ್ರ ಚಿತ್ತವನ್ನು ಪರೀಕ್ಷಿಸಿ ಸಂತುಷ್ಟನಾದ ದೇವೇಂದ್ರ “ಕುಮಾರಾ, ನಿನಗೇನು ಬೇಕೋ ಅದನ್ನು ಸಾಧಿಸಿ ಗಳಿಸಿಕೊಳ್ಳಬಲ್ಲಷ್ಟು ಸಮರ್ಥ ನೀನಾಗಿರುವೆ. ನಿನ್ನ ಅಪೇಕ್ಷೆಯಂತೆ ಇದೋ ನಾನು ಆಶೀರ್ವಾದ ಮಾಡುತ್ತಿದ್ದೇನೆ. ನನ್ನ ಪೂರ್ಣಾನುಗ್ರಹ ನಿನಗೆ ಶ್ರೀರಕ್ಷೆಯಾಗಲಿ, ಅತಿ ಶೀಘ್ರವಾಗಿ ಶಿವಾನುಗ್ರಹ ಪ್ರಾಪ್ತವಾಗಲಿ. ಸುಮನಸ್ಕನಾಗಿ ಹರಸುತ್ತೇನೆ” ಎಂದು ಆಶೀರ್ವದಿಸಿ ಅಂತರ್ಧಾನನಾದನು.
ಅರ್ಜುನನು ಅಲ್ಲೇ ಹರಿಯುತ್ತಿದ್ದ ತೊರೆಯಲ್ಲಿ ಸ್ನಾನಾದಿಗಳನ್ನು ಪೂರೈಸಿ ಶುಚಿರ್ಭೂತನಾದನು. ಪ್ರಶಸ್ತ ಸ್ಥಳವೊಂದನ್ನು ಆರಿಸಿ ತಪಸ್ಸನಾಚರಿಸಲು ಕುಳಿತುಕೊಳ್ಳಲು ಸಿದ್ಧತೆ ಮಾಡಿಕೊಳ್ಳತೊಡಗಿದನು.
ಮುಂದುವರಿಯುವುದು…



















