
ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಕುರಿತು ಚರ್ಚೆ ನಡೆದಿದ್ದು ಪ್ರಸಕ್ತ 2025-26ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಇದೇ 15ರಿಂದ ಒಂದು ತಿಂಗಳ ಕಾಲ ನಡೆಯಲಿದೆ ಎಂದು ನಿರ್ಧರಿಸಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ ಶೇ.6ರಷ್ಟು ಮೀರದಂತೆ ವರ್ಗಾವಣೆ ಪ್ರಕ್ರಿಯೆ ನಡೆಸುವಂತೆ ಸಂಬಂಧ ಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ. ಇದೇ 15 ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜೂ14ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿ ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದ್ದು ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದವರಿಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅಧಿಕಾರ ವಹಿಸಲಾಗುವುದು. ವರ್ಗಾವಣೆ ಅವಧಿ ವಿಸ್ತರಿಸುವುದು ಮತ್ತು ವರ್ಗಾವಣೆ ಮಾರ್ಗಸೂಚಿ ಪರಿಷ್ಕರಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ.
ಆರೋಗ್ಯ, ಶಿಕ್ಷಣ ಇಲಾಖೆ ಸೇರಿ ಕೆಲವು ಇಲಾಖೆಯಲ್ಲಿ ಮಾತ್ರ ಕೌನ್ಸೆಲಿಂಗ್ ವರ್ಗಾವಣೆ ವ್ಯವಸ್ಥೆಯಿದ್ದು ಇದೀಗ ಅಬಕಾರಿ ಇಲಾಖೆಯಲ್ಲಿಯೂ ಕೌನ್ಸೆಲಿಂಗ್ ಮೂಲಕ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.



















