
ಈಗಾಗಲೇ ಭಾರತವು ಪಾಕ್ ಉಗ್ರರಿಗೆ ಭಾರತದ ನಾಗರಿಕರನ್ನು ಹತ್ಯೆ ಮಾಡಿದ್ದಕ್ಕೆ ಆಪರೇಷನ್ ಸಿಂದೂರ್ ಮೂಲಕ ಭಾರತದ ಸೇನೆ ಸರಿಯಾದ ಉತ್ತರ ನೀಡಿದ್ದರೂ ಬುದ್ಧಿ ಕಲಿಯದ ಪಾಕ್ ಮತ್ತೆ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ವಸತಿ ಕಟ್ಟಡದ ಮೇಲೆ ಶನಿವಾರ ಮುಂಜಾನೆ ಶೆಲ್ ದಾಳಿಯನ್ನು ನಡೆಸಿದ ಪರಿಣಾಮ ಒಬ್ಬ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಾಜೌರಿ ಪಟ್ಟಣದಲ್ಲಿರುವ ಹೆಚ್ಚುವರಿ ಉಪ ಆಯುಕ್ತ (ರಾಜೌರಿ) ರಾಜ್ ಕುಮಾರ್ ಥಾಪಾ ಅವರ ಅಧಿಕೃತ ನಿವಾಸಕ್ಕೆ ಫಿರಂಗಿ ಶೆಲ್ ದಾಳಿ ನಡೆಸಲಾಗಿದ್ದು ಈ ದಾಳಿಯಲ್ಲಿ ಅವರ ಜತೆಗಿದ್ದ ಇಬ್ಬರು ಸಿಬ್ಬಂದಿಗಳಿಗೂ ಗಾಯಗಳಿವೆ. ರಾಜ್ ಕುಮಾರ್ ಥಾಪಾ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಇನ್ನು ಗಾಯಗೊಂಡಿರುವ ಇಬ್ಬರು ಸಿಬ್ಬಂದಿಗಳ ಸ್ಥಿತಿ ಗಂಭೀರವಾಗಿದೆ. ಇದೀಗ ಈ ಹಿರಿಯ ಅಧಿಕಾರಿಯ ಸಾವಿಗೆ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಇದೊಂದು ಆಘಾತಕಾರಿ ಸುದ್ದಿ, ನೆನ್ನೆಯಷ್ಟೇ ನಾನು ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯ ಬಗ್ಗೆ ಚರ್ಚೆಯನ್ನು ನಡೆಸಿದ್ದೆ. ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಅವರು ಕೂಡ ಅಲ್ಲಿದ್ದರು. ನನ್ನ ಅಧ್ಯಕ್ಷತೆಯಲ್ಲಿ ಆನ್ಲೈನ್ ಚರ್ಚೆಗಳನ್ನು ಕೂಡ ನಡೆಸಲಾಗಿತ್ತು. ಈ ಚರ್ಚೆಯಲ್ಲಿ ಅವರು ಕೂಡ ಭಾಗವಹಿಸಿದರು. ಆದರೆ ಇಂದು ಬೆಳಿಗ್ಗೆ ಪಾಕ್ ರಾಜೌರಿ ಪಟ್ಟಣವನ್ನು ಗುರಿಯಾಗಿಸಿಕೊಂಡು ನಮ್ಮ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ಶ್ರೀ ರಾಜ್ ಕುಮಾರ್ ಥಾಪ್ಪಾ ಅವರ ಮನೆಯ ಮೇಲೆ ಶೆಲ್ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ. ಈ ಭೀಕರ ಆಘಾತದ ಬಗ್ಗೆ ಮತ್ತು ದುಃಖವನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.



















