
ಮಂಗಳೂರು: ಭಾರತೀಯ ಸೇನೆಯು ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಪ್ರತಿಕಾರವಾಗಿ ಆಪರೇಷನ್ ಸಿಂದೂರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಆದರೆ, ಮಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ಹಾಕಿದ ಪೋಸ್ಟ್ ಭಾರಿ ವಿವಾದ ಸೃಷ್ಟಿಸಿದೆ.
ಮೇ 8ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಎಂಬ ವಿದ್ಯಾರ್ಥಿನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ, ಅಲ್ಲಿ ನಂದಿ ಹೋಯಿತು ಬೆಳಕು” “ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದು ಕತಲು… ಎಲ್ಲೆಲ್ಲೂ ಕತ್ತಲು…!”#dikkaraoperationsindura ಹ್ಯಾಷ್ ಟ್ಯಾಗ್ ನಡಿ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೇಷ್ಮಾ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿರುವ ರೇಷ್ಮಾ ತಮ್ಮ ಈ ಪೋಸ್ಟ್ ಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದಾರೆ. “ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ, ಗೌರವ ನನಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ. ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ, ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ. ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ.
ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. ಭಯೋತ್ಪಾದನೆ ನಿರ್ಮೂಲನೆಯಾಗಲಿ. ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ” ಎಂದು ರೇಷ್ಮಾ ಹೊಸದಾಗಿ ಪೋಸ್ಟ್ ಮಾಡಿದ್ದಾರೆ.
ಸದ್ಯ ಸಾರ್ವಜನಿಕರು ಮತ್ತು ನೆಟ್ಟಿಗರು ರೇಷ್ಮಾ ಇನ್ಸಾಗ್ರಾಂ ಅಕೌಂಟ್ ಅನ್ನು ರಿಪೋರ್ಟ್ ಮಾಡುವಂತೆ ಒತ್ತಾಯಿಸುತ್ತಿದ್ದರಲ್ಲದೆ ರೇಷ್ಮಾ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.



















