
ನವದೆಹಲಿ: ಭಾರತವು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಸಿಂಧೂ ನದಿ ಒಪ್ಪಂದ ಸೇರಿದಂತೆ ಹಲವು ಪ್ರಮುಖ ನಿರ್ಧಾರ ಕೈಗೊಂಡಿದ್ದು ಇದೀಗ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ಮಾಡಿದೆ.
ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತ ತಡರಾತ್ರಿ 1:44ಕ್ಕೆ ದಾಳಿ ನಡೆಸಿದ್ದು ರಫೇಲ್ ಯುದ್ಧ ವಿಮಾನಗಳನ್ನು ಬಳಸಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಏರ್ ಸ್ಟ್ರೈಕ್ ನಡೆದಿದೆ. ಪರಿಣಾಮ ಮೂವತ್ತಕ್ಕೂ ಹೆಚ್ಚು ಉಗ್ರರು ಮೃತಪಟ್ಟಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಭಾರತೀಯ ಸೇನೆ ಉಗ್ರರ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದೇವೆ. ಯಾವುದೇ ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ. ಗುರಿ ಮಾಡಲಾದ 9 ಸ್ಥಳಗಳಲ್ಲಿ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಸೇರಿವೆ ಎಂದು ತಿಳಿಸಿವೆ.
ಭಾರತದ 26 ಸಹೋದರಿಯರ ಕುಂಕುಮ ಅಳಿಸಿದ್ದಕ್ಕೆ ನಡೆಸಿದ ಪ್ರತೀಕಾರಕ್ಕೆ ʼಆಪರೇಷನ್ ಸಿಂಧೂರʼ ಎಂಬ ಹೆಸರನ್ನು ಇಡಲಾಗಿದ್ದು ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲಾಗಿರುವ ವಿಡಿಯೋಗಳು ಹರಿದಾಡುತ್ತಿವೆ.













