
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆ ಮೈದಾನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘದ 25ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದು ಈ ವೇಳೆ ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಕೆಲಸ ಕಾಯಂಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮೇ 1ರ ಕಾರ್ಮಿಕ ದಿನದಂದು ಕಾಯಂಗೊಳಿಸಿದ ಆದೇಶ ಪತ್ರವನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದರು.
ಈ ಹಿಂದೆ ನಮ್ಮ ಸರ್ಕಾರವಿದ್ದಾಗಲೇ ಅವರನ್ನು ಕಾಯಂಗೊಳಿಸುವ ಕುರಿತು ಘೋಷಿಸಲಾಗಿತ್ತು ಮತ್ತು ಪ್ರಕ್ರಿಯೆಯನ್ನೂ ಆರಂಭಿಸಲಾಗಿತ್ತು. ಇದೀಗ ಕಾಯಂಗೊಳಿಸಲು ಅಗತ್ಯವಿರುವ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ 20 ಸಾವಿರಕ್ಕೂ ಹೆಚ್ಚಿನ ಪೌರಕಾರ್ಮಿಕ ಆದೇಶ ಪತ್ರ ನೀಡಲಾಗುವುದು. ಮಾತ್ರವಲ್ಲದೆ ಪೌರಕಾರ್ಮಿಕರ ಜತೆಗೆ ಒಳಚರಂಡಿ ಸ್ವಚ್ಛತಾ ಕೆಲಸ ಮಾಡುವ ಕಾರ್ಮಿಕರನ್ನೂ ಕಾಯಂಗೊಳಿಸಲಾಗುವುದು. ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡುವ ಗುತ್ತಿಗೆ ಚಾಲಕರು, ಹೆಲ್ಪರ್, ಲೋಡರ್‌ಗಳನ್ನು ಗುತ್ತಿಗೆ ಪದ್ಧತಿಯಿಂದ ಹೊರತಂದು ನೇರ ವೇತನ ಪಾವತಿ ವ್ಯವಸ್ಥೆ ಅಡಿ ತರಲಾಗುವುದು. ಆಯಾ ನಗರ ಪಾಲಿಕೆ ಸೇರಿದಂತೆ ಸ್ಥಳೀಯ ಆಡಳಿತದಿಂದಲೇ ವೇತನ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಅದರೊಂದಿಗೆ ಪೌರಕಾರ್ಮಿಕರಿಗೆ ನಗದು ರಹಿತ ಚಿಕಿತ್ಸೆ ಸೇವೆಯನ್ನೂ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ವಿಚಾರದಲ್ಲಿ ಒಂದಷ್ಟು ಅಧಿಕಾರಿಗಳು ಸಿಂಧುತ್ವ ಪ್ರಮಾಣಪತ್ರ ನೀಡುವಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರಿದೆ. ಯಾವ ಪೌರಕಾರ್ಮಿಕರೂ ಯಾವುದೇ ಅಧಿಕಾರಿಗೂ ಒಂದು ರು. ಲಂಚ ನೀಡಬಾರದು. ಹಣ ಕೇಳಿದ ಬಗ್ಗೆ ಲಿಖಿತ ದೂರು ನೀಡಿದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಹಾಗೆಯೇ, ಸಿಂಧುತ್ವ ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.





















