
ವಿಜಯಪುರ: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪವಿದೆ, ಹಗರಣ ಮಾಡಿದ ಕುಟುಂಬ ಅದು. ಹಗರಣ ಮಾಡಿದ ಕುಟುಂಬವನ್ನು ಮುಂದುವರೆಸಿದರೆ ರಾಜ್ಯದ ಜನರು ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಜನ ಜಾಗೃತಿ ಶುರು ಮಾಡುತ್ತೇವೆ ಎಂದು ಹೈಕಮಾಂಡ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ .
ಜನರ ಅಭಿಪ್ರಾಯ ಸಂಗ್ರಹಿಸಿ ಒಂದು ಹಿಂದು ಪಕ್ಷ ಆಸ್ತಿತ್ವಕ್ಕೆ ತರಬೇಕಾಗುತ್ತದೆ. ಬಹಳಷ್ಟು ಜನರು ಬಿಜೆಪಿಯಿಂದ ಹಿಂದು ರಕ್ಷಣೆ ಮಾಡುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದು ಯಡಿಯೂರಪ್ಪ ಕುಟುಂಬ ಹೊಂದಾಣಿಕೆ ರಾಜಕೀಯ ಮಾಡಿ ಪಕ್ಷವನ್ನು ದುರ್ಬಲ ಮಾಡಿದೆ. ಹೀಗಾಗಿ ಹಿಂದುಗಳ ರಕ್ಷಣೆ, ದೇಶಕ್ಕಾಗಿ ಹಿಂದು ಪಕ್ಷ ಆಸ್ವಿತ್ವ ತರಬೇಕಾಗಿದೆ. ನಾವು, ಬಿಜೆಪಿ-ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳಲ್ಲ. ಯಡಿಯೂರಪ್ಪ ಬಿಟ್ಟು ನಮಗೆ ಬೇರೆ ಗತಿಯಿಲ್ಲ ಎಂದು ನೀವು ಹೇಳಿದರೆ ನಮ್ಮ ದಾರಿ ನಾವು ಕಂಡುಕೊಳ್ಳಬೇಕಾಗುತ್ತದೆ. ಹಿಂದು ಪಕ್ಷ ಕಟ್ಟುವ ಬಗ್ಗೆ ಬೀದರ್‌ನಿಂದ ಹಿಡಿದು ಚಾಮರಾಜನಗರವರೆಗೂ ಒತ್ತಾಯಿಸಿದ್ದಾರೆ. ಹೀಗಾಗಿ ಹೊಸ ಪಕ್ಷದ ಬಗ್ಗೆ ನಾವು ಜನಾಭಿಪ್ರಾಯ ಸಂಗ್ರಹಿಸುತ್ತೇವೆ ಎಂದು ಹೇಳಿ ಈ ಮೂಲಕ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ.
ಬಿಎಸ್‌ವೈ-ವಿಜಯೇಂದ್ರ ತಮ್ಮ ಸ್ವಾರ್ಥಕ್ಕಾಗಿ ಹಿಂದುತ್ವವಾದಿಗಳನ್ನ ತುಳಿಯುತ್ತಾ ಬಂದಿದ್ದಾರೆ. ಅದಕ್ಕೆ ನಾನು ಈಗ ಬಲಿಯಾಗಿದ್ದಾನೆ. ಪಕ್ಷದಲ್ಲಿ ವಂಶಪಾರಂಪರ್ಯ ಮುಂದುವರಿಸಲು ಬಿಎಸ್‌ವೈ ಕುಟುಂಬ ಮುಂದಾಗಿದ್ದು ಇದೇ ರೀತಿ ಮುಂದುವರಿದರೆ ನಾವು ಪರ್ಯಾಯ ಮಾರ್ಗ ಕಂಡು ಕೊಳ್ಳಬೇಕಾಗುತ್ತದೆ. ಹೈಕಮಾಂಡ್ ಪಕ್ಷದಲ್ಲಿ ವಂಶಪಾರಪರ್ಯ ಭ್ರಷ್ಟಚಾರಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಪರ್ಯಾಯವಾಗಿ ನಾವು ನಿಲ್ಲಬೇಕಾಗುತ್ತದೆ ಎಂದು ಹೇಳಿದರು.




