ಭಾಗ – 108
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೦೯ ಮಹಾಭಾರತ
ಈವರೆಗೆ ಶುಭಕಾರ್ಯದ ಸೂಚಕವಾಗಿ ಮೊಳಗುತ್ತಿದ್ದ ಗಟ್ಟಿಮೇಳ ನಿನಾದಗಳು ಜಟ್ಟಿಮೇಳದ ಅಂದರೆ ಯುದ್ಧದ ರಣಭೇರಿಗಳಂತೆ ಪರಿವರ್ತಿತ ಕಾರ್ಯ ಕಾರಣವಾಗಿ ಅನ್ವರ್ಥಗೊಂಡವೋ ಏನೋ ಎಂದೆನ್ನಬಹುದು! ದ್ರುಪದನ ಸೇನೆಯ ವ್ಯೂಹ ರಕ್ಷೆಯೊಳಗಿದ್ದಾರೆ ಅರ್ಜುನ ದ್ರೌಪದಿ ಮತ್ತು ಭೀಮ. ಹೊರಗಿರುವ ಕ್ಷಾತ್ರವೀರರ ಕಣ್ಣು, ವಚನಗಳು, ಆಂಗಿಕ ವರ್ತನೆ ಗಮನಿಸಿ ಇಲ್ಲಿ ಯುದ್ದ ಸಂಭವನೀಯ ಎಂದರಿತೋ ಏನೋ ಭೀಮ ಸ್ವಯಂವರ ಮಂಟಪದಲ್ಲಿ ಮತ್ಸ್ಯ ಯಂತ್ರ ಭೇದನಕ್ಕಾಗಿ ಇಟ್ಟಿದ್ದ ಬಾಣದ ಕಟ್ಟುಗಳನ್ನು ಒಟ್ಟು ಸೇರಿಸಿ ತನ್ನ ಉತ್ತರೀಯದಿಂದ ಹೊರಬಹುದಾದ ಹೊರೆಯಷ್ಟು ಕಟ್ಟಿಗೆಯ ಮೂಟೆ ಕಟ್ಟುವಂತೆ ಕಟ್ಟಿಕೊಂಡು ಬಿಟ್ಟನು. ಅಣ್ಣ ಭೀಮನ ಕೃತಿಯನ್ನೂ, ಬಾಹ್ಯ ಪ್ರಚೋದನೆಯನ್ನೂ ಗಮನಿಸಿದ ಅರ್ಜುನ ಶೀವಾರ್ಚಿತ ‘ಕಿಂಧುರ’ ಧನುಸ್ಸನ್ನು ಎತ್ತಿ ಹಿಡಿದುಕೊಂಡನು. ದ್ರುಪದ ಸೇನೆಯ ರಕ್ಷಾ ವ್ಯೂಹದೊಂದಿಗೆ ದ್ವಾರದತ್ತ ಹೊರ ಬರಲು ಮುಂದೆ ಸಾಗುತ್ತಿದ್ದಂತೆ ಭೀಮನ ಕೈಯಲ್ಲಿದ್ದ ಸಾಕಷ್ಟು ಶರಗಳನ್ನು ಅರ್ಜುನ ತನ್ನ ಬತ್ತಳಿಕೆಗೆ ಸೇರಿಸಿದರೆ, ಭೀಮ ಉಳಿದರ್ಧವನ್ನು ಬಿಗಿದು ನವವಧು ದ್ರೌಪದಿಯ ಕೈಗಿತ್ತನು. ರಕ್ಷಾ ವ್ಯೂಹದೊಳಗಿಂದಲೇ ದ್ವಾರದ ಹೊರ ಭಾಗ ತಲುಪುವಷ್ಟರಲ್ಲಿ ಸಂಘರ್ಷವೇ ಏರ್ಪಟ್ಟಿತು.
ಕರ್ಣ, ದುರ್ಯೋಧನ, ಜರಾಸಂಧ, ಶಲ್ಯ, ಶಿಶುಪಾಲ, ದಂತವಕ್ತ್ರ, ಸುನೀತ, ಕ್ರೌಥ ಹೀಗೆ ಬಂದು ನೆರೆದಿದ್ದಂತಹ ಪಣ ಪರಾಜಿತ ಸ್ಪರ್ಧಿಗಳೆಲ್ಲಾ ಒಗ್ಗಟ್ಟಾಗಿ, ತಮ್ಮ ಜೊತೆ ಬಂದಿದ್ದ ಸೈನ್ಯವನ್ನು ಸುತ್ತುವರಿದು ಆಕ್ರಮಣ ಮಾಡಲು ಸೂಚನೆ ನೀಡಿದರು. ಕೃಷ್ಣ ಬಲರಾಮರು ಮಾತ್ರ ತಟಸ್ಥರಾಗಿ ಯುದ್ದ ಮಾಡದೇ ಉಳಿದರಾದರೂ, ತಮ್ಮ ಜೊತೆ ಬಂದಿದ್ದ ನಾರಾಯಣೀ ಸೇನೆಯನ್ನು ಅರ್ಜುನ ದ್ರೌಪದಿಯ ರಕ್ಷಣೆಗೆ ಕಳುಹಿಸಿ ತಾವೂ ಅತ್ತ ಮುನ್ನಡೆದರು.
ಇತ್ತ ಅತೃಪ್ತ ರಾಜರೆಲ್ಲರೂ ಸೈನ್ಯ ಸಮೇತ ದ್ರುಪದ ಸೇನೆಯ ಮೇಲೆ ಆಕ್ರಮಣ ಮಾಡಿದರು. ಅತಿಥೇಯರಾಗಿ ದೃಷ್ಟದ್ಯುಮ್ನ, ದ್ರುಪದಾದಿಗಳು ತಡೆಯುವ ಯತ್ನ ಮಾಡಿದರಾದರೂ ಆಗದೆ ತಮ್ಮ ಸೇನೆಗೂ ಪ್ರತಿಯಾಕ್ರಮಣಕ್ಕೆ ಆದೇಶ ನೀಡಿದರು. ಅಷ್ಟರಲ್ಲಾಗಲೇ ಭೀಮ ಪ್ರವೇಶ ದ್ವಾರದ ಸ್ವಾಗತ ಗೋಪುರದ ಕಾಷ್ಟ ಕಂಬವನ್ನೇ ಕಿತ್ತು ಎಳೆದು ಸೆಳೆದು ಎತ್ತಿ ಗದೆಯಂತೆ ಪ್ರಹಾರಗೈಯುತ್ತಾ ದುರ್ಯೋಧನ, ಜರಾಸಂಧ, ಶಲ್ಯಾದಿಗಳ ಗದಾಘಾತಗಳಿಗೆ ಪ್ರತಿಘಾತ ನೀಡುತ್ತಾ ಹೊಡೆದುರುಳಿಸತೊಡಗಿದನು. ಅತ್ತ ಅರ್ಜುನ ವಧುವರರ ಮೆರವಣಿಗೆಗೆ ಸಿದ್ಧವಾಗಿದ್ದ ರಥವೇರಿ ದ್ರೌಪದಿಯನ್ನು ಕುಳ್ಳಿರಿಸಿ ರಥಿಕನಾಗಿ ಕರ್ಣ, ಶಿಶುಪಾಲ, ದಂತವಕ್ತ್ರ, ಸುನೀತ, ಕ್ರೌಥಾದಿ ಉಳಿದ ವೀರರ ಕಂಗೆಡಿಸಿ ವರ್ಷೋಪಾದಿಯಲ್ಲಿ ಶರ ಪ್ರಯೋಗಗೈಯುತ್ತಾ ಧೃತಿಗೆಡಿಸಿದನು. ಅರೆಕ್ಷಣದಲ್ಲಿ ವೀರಾದಿವೀರರೆಲ್ಲಾ ಅರ್ಜುನನ ಶರಹತಿಗೆ ಚಲ್ಲಾಪಿಲ್ಲಿಯಾಗಿ ಗಾಯಾಳುಗಳಾಗಿ, ದಿಕ್ಕೆಟ್ಟು ಓಡತೊಡಗಿದರು. ಕರ್ಣ ವಿಕ್ರಮಿಯಾಗಿದ್ದರೂ ಅರ್ಜುನನ ಉಗ್ರರೂಪದೆದುರು ಅರೆಕ್ಷಣ ನಿಲ್ಲಲಾಗದೆ ನೇರ ಗುರಿಯಾಗಿ ಅತಿ ಎನ್ನಬಹುದಾದ ಮಟ್ಟಕ್ಕೆ ಜರ್ಜರಿತನಾದನು. ಇತ್ತ ಭೀಮ ಅಸದಳ ವೀರ ಜರಾಸಂಧನ ಜೊತೆ ಏಕಕಾಲದಲ್ಲಿ ಶಲ್ಯ, ದುರ್ಯೋಧನರನ್ನು ಬೆನ್ನಟ್ಟಿ ಹೊಡೆದು ಅಟ್ಟಾಡಿಸುತ್ತಾ ಓಡಿಸಿಕೊಂಡು ಹೋದಾಗ ಒಬ್ಬೊಬ್ಬರು ಒಂದೊಂದು ಕಡೆ ದಿಕ್ಕು ಪಾಲಾಗಿ ಓಡದೆ ವಿಧಿಯಿಲ್ಲ ಎಂಬಂತೆ ಪಲಾಯನಗೈಯತೊಡಗಿದರು. ನಕುಲ ಸಹದೇವರು ಅಣ್ಣ ಧರ್ಮಜನ ಜೊತೆಯಿದ್ದು ಹೋರಾಡುತ್ತಿದ್ದಾರೆ.
ಇನ್ನೂ ಯುದ್ದ ವಿರಮಿಸದೆ ಅಳಿದುಳಿದ ವೀರರು, ಕೆಲ ರಾಜಕುಮಾರರು ಅಂತಿಮ ಹರಸಾಹಸಗೈಯುತ್ತಾ ಹೆಣಗಾಡುತ್ತಿದ್ದಾರೆ. ಈ ವರೆಗೆ ಯುದ್ದದಲ್ಲಿ ಭಾಗಿಯಾಗದಿದ್ದರೂ ಶ್ರೀ ಕೃಷ್ಣ ಪರಮಾತ್ಮ ಅರ್ಜುನನಿಗೆ ರಥ ರಕ್ಷಕನಾಗಿ ನಿಂತು ಗಮನಿಸುತ್ತಲೇ ಇದ್ದನು. ಬೆಳವಣಿಗೆಗಳನ್ನೆಲ್ಲಾ ಅವಲೋಕಿಸಿ ಹತೋಟಿಗೆ ಬಂದಿರುವುದನ್ನು ಕಂಡ ಶ್ರೀ ಕೃಷ್ಣ ಇನ್ನು ಇಲ್ಲಿಂದ ತೆರಳು ಎಂದು ಅರ್ಜುನನಿಗೆ ಸನ್ನೆ ಮಾಡಿದನು. ಅರ್ಜುನನೂ ಸಂಜ್ಞೆಯರಿತು ರಥ ಸಾಗಲು ಆದೇಶ ನೀಡಿ ತಾವು ಬಿಡಾರವಿದ್ದ ಕುಂಬಾರನ ಮನೆಯತ್ತ ಗಮಿಸತೊಡಗಿದರು. ಸ್ವಯಂವರ ಮಂಟಪದ ಬಳಿ ಸೇರಿದ್ದ ಬ್ರಾಹ್ಮಣರು ತಮ್ಮ ಸೇವೆಯೂ ಇರಲಿ ನಮ್ಮವನಾದ ಗೆದ್ದ ವಿಪ್ರನ ಮೇಲೆ ಅತಿಕ್ರಮಿಸಿ ಪೆಟ್ಟು ತಿಂದು ಓಡುವ ವೀರರತ್ತ ಕೈಗೆ ಸಿಕ್ಕ ವಸ್ತುಗಳನ್ನೆತ್ತಿ ಎಸೆದು ಘಾಸಿಗೊಳಿಸುತ್ತಿದ್ದರು. ಅವರ ಮನಸ್ಸಿಗೆ ಅದೂ ಒಂದು ಸಾಧನೆಯಾಗಿತ್ತು.
ಇತ್ತ ಸಹಸ್ರ ಗಜತ್ರಾಣಿ ಭೀಮ ರುದ್ರಾವತಾರಿಯಾದನೋ! ಸಿಕ್ಕ ಸಿಕ್ಕವರನ್ನು ಸವರುತ್ತಾ ಸ್ವಯಂವರಕ್ಕೆ ಆಹ್ವಾನಿತ ಅತಿಥಿಗಳಾಗಿ ಬಂದು ಯುದ್ದನಿರತರಾದವರಿಗೆ ಅಂತಿಮ ತಿಥಿ ನಿಗದಿಪಡಿಸುತ್ತಿದ್ದಾನೋ ಎಂಬ ರೀತಿ ಅತ್ಯುಗ್ರ ಹೊಡೆತವಿಕ್ಕುತ್ತಾ ಒಬ್ಬರೂ ಅಲ್ಲಿ ನಿಲ್ಲಲಾಗದಂತೆ ಹೊಡೆದೋಡಿಸಿದನು.
ಅರ್ಜುನನ ರಥ ಹೊರವಲಯದತ್ತ ತುಸು ದೂರ ಸಾಗಿ ಹೋದಾಗ, ಪುನಶ್ಚೇತನಗೊಂಡು, ತನ್ನ ಕಾಯದ ಶಕ್ತಿಯನ್ನು ಕ್ರೋಢೀಕರಿಸಿದ ಕರ್ಣ ರೋಷಗೊಂಡು ರಥವೇರಿ ಮತ್ತೆ ಬೆಂಬತ್ತಿ ಶರಪ್ರಯೋಗ ಮಾಡಿದನು. ಪಥ ಮಧ್ಯದಲ್ಲೇ ಕರ್ಣನ ಶರಗಳನ್ನು ಖಂಡಿಸಿದ ಅರ್ಜುನನು ಸರಸರನೆ ಪ್ರತಿಯಾಗಿ ಶರಪ್ರಯೋಗ ಮಾಡತೊಡಗಿದನು. ದ್ರೌಪದಿ ತನ್ನ ಬಳಿ ಭೀಮ ಕೊಟ್ಟಿದ್ದ ಶರಗಳನ್ನೆತ್ತಿ ಯುದ್ದ ಪೂರಕಳಾದಳು. ಈಗ ಇಲ್ಲಿ ಕರ್ಣಾರ್ಜುನರಿಗೆ ನೇರ ಹಣಾಹಣಿಗೆ ವೇದಿಕೆಯಾಯಿತು. ಅರ್ಜುನನ ವಿಕ್ರಮದೆದುರು ಕರ್ಣ ತಡೆದು ನಿಲ್ಲಲು ಒದ್ದಾಡಿದನು. ಅರ್ಜುನನ ಶರಗಳು ಕರ್ಣನ ಧನುಸ್ಸಿನ ಪ್ರತ್ಯಂಚ, ಧನುಸ್ಸು, ರಥ ಪತಾಕೆಗಳನ್ನೆಲ್ಲಾ ಛೇದಿಸಿ, ಕರ್ಣನ ಕಿರೀಟವನ್ನೂ ಹಾರಿಸಿತು. ಅಪಮಾನ ತಾಳಲಾರದೆ ಕರ್ಣ ಸಾವರಿಸಿಕೊಂಡು ರಥದಲ್ಲಿದ್ದ ಬದಲಿ ಧನುರ್ಬಾಣಗಳನ್ನೆತ್ತಿ ಯುದ್ದನಿರತನಾದರೂ, ಅರೆಕ್ಷಣದ ಕಾಲಾವಕಾಶವೂ ನೀಡದೆ ಆತನನ್ನು ಹಿಗ್ಗಾಮುಗ್ಗ ದಂಡಿಸಿದ ಅರ್ಜುನ ಪೌರುಷ ಮೆರೆದನು. ಶರಾಘಾತಗಳಿಂದ ಕಣ್ತೆರೆದು ನಿಲ್ಲಲೂ ಆಗದೆ ಕರ್ಣ ಅನಿವಾರ್ಯವಾಗಿ ವೀರೋಚಿತವಲ್ಲದಿದ್ದರೂ ಅನ್ಯ ದಾರಿಯಿಲ್ಲದೆ ರಥ ತಿರುಗಿಸಿ ಹಿಂದಿರುಗಲೇ ಬೇಕಾಯ್ತು. ಬದುಕಿದ್ದು ಶರೀರದಲ್ಲಿ ಪ್ರಾಣ ಉಳಿದರೆ ಇಂದಲ್ಲಾ ಎಂದಾದರೊಂದು ದಿನ ನೋಡಿಕೊಂಡೇನು ಎಂದು ಕರ್ಣ ಕಾಲ್ಕಿತ್ತು ಓಡಲೇ ಬೇಕಾಯ್ತು. ಪರೀಕ್ಷಾರಂಗದಲ್ಲಿ ಅರ್ಜುನನಿಗೆ ಸಮಾನ ವೀರ ಎಂಬ ಭ್ರಮೆ ಹುಟ್ಟಿಸಿದ್ದ ಕರ್ಣನ ವಿಕ್ರಮದ ಗುಟ್ಟು ಗುಟ್ಟು ಇಂದು ಬಯಲಾದಂತಾಯಿತು.
ಸ್ವಯಂವರ ಮಂಟಪ ಪ್ರಶಾಂತವಾದ ಬಳಿಕ ಭೀಮನೂ ತಮ್ಮ ಸದ್ಯದ ವಾಸಸ್ಥಾನ ಕುಂಬಾರನ ಕರ್ಮಶಾಲೆಯತ್ತ ಮುಖ ಮಾಡಿದನು. ಧರ್ಮರಾಯ, ನಕುಲ ಸಹದೇವರು ಈಗಾಗಲೇ ಮನೆಯತ್ತ ಮುಂದುವರಿದಿದ್ದಾರೆ. ಸಹೋದರರೆಲ್ಲರೂ ಅನತಿ ದೂರದಲ್ಲಿ ಬರುತ್ತಿರುವುದನ್ನು ಗಮನಿಸಿದ ಅರ್ಜುನ ಪರಿಸ್ಥಿತಿ ಪೂರ್ಣ ಶಾಂತಗೊಂಡಿದೆ ಎಂದರಿತು ಮನದಲ್ಲೇ ಮಹಾದೇವ ಶಿವನಿಗೂ, ಕೃಷ್ಣ ಪರಮಾತ್ಮನಿಗೂ ವಂದಿಸಿದನು. ಗುರು ಹಿರಿಯರನ್ನು ಸ್ಮರಿಸಿ ಕೃತಜ್ಞತೆ, ಧನ್ಯತಾ ಭಾವದಿಂದ ನಮಿಸಿದನು. ಆ ಹೊತ್ತಿಗೆ ಸಹೋದರರೂ ನಿವಾಸದ ಸನಿಹ ಸಮೀಪಿಸಿದ್ದಾರೆ.
ಮನೆಯ ಹೊರಗೆ ನಿಂತು ಮಾತೆ ಕುಂತಿಯನ್ನು ಕಾಣುವ ಹೆಬ್ಬಯಕೆಯಿಂದಲೂ, ತಾನು ಪಣದಲ್ಲಿ ಗೆದ್ದು ತಂದ ಅಮ್ಮನ ಸೊಸೆಯನ್ನು ತೋರಿಸುವ ಕಾತರದಿಂದಲೂ ಮನೆಯೊಳಗಿದ್ದ ಅಮ್ಮನನ್ನು ಕೂಗಿ “ಅಮ್ಮಾ ಅಮ್ಮಾ… ಅಮ್ಮಾ…… ಬಾರಮ್ಮಾ ಇಂದಿನ ದಿನದ ಸತ್ಫಲ ವನ್ನೊಮ್ಮೆ ನೋಡಮ್ಮಾ” ಎಂದು ತಾನು ಗೆದ್ದು ತಂದ ಹೆಣ್ಣನ್ನು ಉಪಮೆಯಾಗಿ ಹೇಳಿದನು. ಮನೆಯೊಳಗೆ ಮನದ ದುಗುಡಗಳ ಉಪಶಮನಕ್ಕಾಗಿ ಧ್ಯಾನಸ್ಥಳಾಗಿ ಕುಳಿತಿದ್ದ ಮಾತೆ ಕುಂತಿಗೆ ಏನು ಕೇಳಿತೋ! ಧ್ಯಾನಸ್ಥಳಾಗಿ ಕುಳಿತಿದ್ದಲಿಂದಲೇ “ಐದು ಮಂದಿಯೂ ಹಂಚಿಕೊಳ್ಳಿ” ಎಂದು ಬಿಟ್ಟಳು. ಅರ್ಜುನನ ದ್ವಂದ್ವ ಸತ್ಫಲ ಎಂಬ ಮಾತಿನ ಅರ್ಥ ‘ಹೆಣ್ಣು’ ಎಂಬುವುದಾಗಿದ್ದರೂ ಕುಂತಿ ಫಲವೆಂದರೆ ತಿನ್ನುವ ಹಣ್ಣು ಎಂದು ಭಾವಿಸಿ ಐವರೂ ಸಮನಾಗಿ ಹಂಚಿಕೊಳ್ಳಿ ಎಂದು ಧ್ಯಾನ ಪೀಠದಿಂದಲೇ ಆದೇಶ ನೀಡಿದ್ದಳು.
ಮುಂದುವರಿಯುವುದು…













