29 C
Udupi
Wednesday, April 29, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 106

ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೧೦೭ ಮಹಾಭಾರತ

ಹೀಗೆ ಪಣದ ಸೂಕ್ಷ್ಮ, ಸಿದ್ಧತೆ, ಭೇದಿಸಬೇಕಾದ ಲಕ್ಷ್ಯ ಎಲ್ಲವನ್ನೂ ಧೌಮ್ಯರ ಜೊತೆ ಬಂದು ನೋಡಿಕೊಂಡರು. ವಿಪ್ರವೇಷದಲ್ಲೇ ತಿರುಗಾಡುತ್ತಾ, ಶೌಚ, ಸಂಧ್ಯಾನುಷ್ಠಾನಾದಿಗಳನ್ನು ಪೂರೈಸಿ, ಪಾಂಡವರು ತಾವು ವಾಸ್ತವ್ಯವಿದ್ದ ಕುಂಬಾರನ ಮನೆ ಸೇರಿದರು. ಧೌಮ್ಯರು ಪಾಂಡವರಿಗೆ ಮನೋಸಿದ್ಧತೆ, ಪೂರ್ವ ತಯಾರಿ, ಸೂಕ್ಷ್ಮಗಳನ್ನು ವಿವರಿಸಿ ಬಳಿಕ ವಿಶ್ರಾಂತರಾಗಲು ಅಪ್ಪಣೆ ನೀಡಿದರು.

ನಾಳಿನ ಬೆಳಿಗ್ಗೆ ಸುಮುಹೂರ್ತದಲ್ಲಿ ಸ್ಪರ್ಧಾ ಪಣ ಆರಂಭಗೊಂಡು ವಿಜೇತನಾದ ವೀರ ದ್ರುಪದಜೆ ಯಾಜ್ಞಸೇನೆ ದ್ರೌಪದಿಯ ಕರಗ್ರಹಣ ಮಾಡಲಿದ್ದಾನೆ.

ಇತ್ತ ಪಾಂಚಾಲದ ಅರಮನೆಯಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಮದುಮಗಳು ದ್ರೌಪದಿಗೆ ಮಂಗಳ ಸ್ನಾನಾದಿಗಳು ಪ್ರಾರಂಭವಾದವು. ಕೇಶ ಸ್ನಾನದ ಬಳಿಕ ದೂಪದ ಮೇಲೆ ಕೇಶ ಹರಡಿ ತೇವವಾರಿಸಿ ಅಲಂಕಾರ ಆರಂಭಿಸಿದರು. ಹಸಿರು ಸೀರೆಯುಡಿಸಿ, ಪಾದದಿಂದ ಶಿಖದವರೆಗೆ ಕನಕ ಭೂಷಣಾದಿಗಳಿಂದ ಸ್ವಯಂವರ ವಧು ಸರ್ವಾಲಂಕೃತೆಯಾದಳು. ಕೃಷ್ಣ ವರ್ಣೆಯಾದರೂ ಕಣ್ಣಿನಂದಕ್ಕೆ ಕಾಡಿಗೆ, ತನುವಿಗೆ ಸುಗಂಧ ದ್ರವ್ಯ, ಕೇಶಕ್ಕೆ ಹೂವು ಮುಡಿಸಿ ಮದುಮಗಳು ಸಿದ್ಧಳಾದಳು. ಅರುಣೋದಯ ಕಾಲದಿಂದಲೇ ಸುಮಂಗಲ ವಾದ್ಯಘೋಷಗಳು ಮೊಳಗತೊಡಗಿದ್ದವು. ಶಿವ ಪಾರ್ವತಿ ಮಂದಿರದಲ್ಲಿ ಪೂಜೆ ಸಲ್ಲಿಸಿ, ಹಿರಿಯರ ಆಶೀರ್ವಾದ ಪಡೆದು ಗಜಾಲಯದಲ್ಲಿದ್ದ ಪಟ್ಟದ ಹೆಣ್ಣಾನೆಯೊಂದು ಅಂಬಾರಿ ಹೊತ್ತು ಸರ್ವಾಂಗಾಲಕೃತವಾಗಿ ವಧುವಿನ ದಿಬ್ಬಣಕ್ಕೆ ಸಿದ್ಧವಾಗಿತ್ತು. ರಕ್ಷಾತಿಲಕ ಧಾರಣೆ ಮಾಡಿ, ಸ್ವಯಂ ವರಣಮಾಲಿಕೆ ಹಿಡಿದು ಅಂಬಾರಿಯೇರಿ ದ್ರೌಪದಿ ವಿರಾಜಮಾನಳಾದಳು. ಚತುರ್ದಿಕ್ಕುಗಳಿಂದಲೂ ಗಜಪಡೆ, ತುರಗ ತುಕುಡಿ,ಮಹಾರಥಿಕರು, ಕಾಲಾಳು ಸೈನ್ಯ, ಹೀಗೆ ಚತುರಂಗ ಸೇನೆಯೂ ಸಿದ್ಧಗೊಂಡು ಹೊರಟಿತು. ಕನ್ಯೆಯರು ಸಿಂಗರಿಸಿಕೊಂಡು ಪೂರ್ಣಕುಂಭ ಸ್ವಾಗತ, ಪಣ್ಣೀರ ಸಿಂಚನ, ರಾಜಬೀದಿಯುದ್ದಕ್ಕೂ ಪುಷ್ಪವೃಷ್ಟಿಗರೆಯುತ್ತಿದ್ದಾರೆ. ಗಾಯಕರು, ವಾದಕರು, ನಾಟ್ಯ ಪಟುಗಳು ತಮ್ಮ ಕಲಾ ಪ್ರದರ್ಶನಗೈಯುತ್ತಿದ್ದರೆ, ವಿದೂಷಕರು ನೆರೆದ ಜನಸಾಗರವನ್ನು ರಂಜಿಸುತ್ತಾ ಮೆರವಣಿಗೆ ಸಾಗುತ್ತಾ ಸ್ವಯಂವರ ಸಭಾಭವನದತ್ತ ಸಾಗುತ್ತಿದೆ. ಮುಂಚೂಣಿಯಲ್ಲಿ ಶ್ವೇತ ರಾಜಾಶ್ವವನ್ನೇರಿ ಮುಕುಟಧರ ದೃಷ್ಟದ್ಯುಮ್ನ ತನ್ನ ಸೋದರಿಯ ವಧು ದಿಬ್ಬಣದ ಮೆರವಣಿಗೆಗೆ ದಿಗ್ದರ್ಶಕನಾಗಿ ಸಾಗುತ್ತಿದ್ದಾನೆ. ವಧುವಿನ ಅಂಬಾರಿಯ ಮುಂಭಾಗದಲ್ಲಿ ದಿವ್ಯರಥವೇರಿ ಮಹಾರಾಜ ದ್ರುಪದ ಸಪತ್ನೀಕನಾಗಿ ರಾಷ್ಟ್ರದ ಪ್ರಜೆಗಳಿಗೆ ಅಭಿನಂದಿಸುತ್ತಾ ಬರುತ್ತಿದ್ದಾರೆ.

ಯುವರಾಜ ದೃಷ್ಟದ್ಯುಮ್ನ ತನ್ನ ತಂಗಿ ದ್ರೌಪದಿಯ ಜೊತೆ ಸ್ವಯಂವರ ಮಂಟಪದತ್ತ ಸರ್ವ ವಾದಕ ವಾದನ, ಜಯಘೋಷ, ಪುಷ್ಪ ವೃಷ್ಟಿ, ಪನ್ನೀರ ಸಿಂಚನದೊಂದಿಗೆ ಆರ್ಯಾವರ್ತದ ಸ್ಪರ್ಧಾಳು ರಾಜ ಮಹಾರಾಜರಿಗೆ ಅಭಿವಂದಿಸುತ್ತಾ ಮುನ್ನಡೆಯುತ್ತಿದ್ದಾರೆ. ದ್ರೌಪದಿ ವರ ಮಾಲಿಕೆ ಹಿಡಿದು ಸ್ವಯಂವರ ಮಂಟಪದಲ್ಲಿ ಪುರೋಹಿತರ ಮಂತ್ರಘೋಷ, ದೇವತಾಪ್ರಾರ್ಥನೆಯ ಬಳಿಕ ವಧು ಪೀಠದಲ್ಲಿ ಶೋಭಾಯಮಾನಳಾದಳು.

ಆರ್ಯಾವರ್ತದ ರಾಜಕುಮಾರರು, ಮಹಾರಾಜರು, ಯುವರಾಜರು ಬಂದು ತಮಗೆ ನಿಗದಿಯಾಗಿರುವ ಉಚಿತಾಸನಗಳಲ್ಲಿ ಆಸೀನರಾಗಿದ್ದಾರೆ. ದ್ರೌಪದಿಯ ಅಪ್ರತಿಮ ಸೌಂದರ್ಯಕ್ಕೆ ಮನಸೋತು ಹೇಗಾದರೂ ಪಣ ಗೆಲ್ಲಲೇ ಬೇಕೆಂದುಕೊಂಡಿದ್ದಾರೆ. ಮನದಲ್ಲೇ ಇಷ್ಟ ದೇವರುಗಳಿಗೆ ಅರಿಕೆ – ಹರಕೆ ನಿವೇದಿಸಿಕೊಳ್ಳುತ್ತಲೂ ಇದ್ದಾರೆ. ದ್ರೌಪದಿಯ ಅದ್ವಿತೀಯ ಸೌಂದರ್ಯ ನೋಡಿದಷ್ಟೂ ತೃಪ್ತರಾಗದೆ ಮತ್ತೆ ಮತ್ತೆ ನೋಡುತ್ತಾ ಎಲ್ಲರ ದೃಷ್ಟಿಯೂ ಪಾಂಚಾಲಿಯತ್ತ ಕೇಂದ್ರೀಕೃತವಾಗಿದೆ.

ಪಾಂಡವರು ಧೌಮ್ಯರ ಜೊತೆ ಆಗಮಿಸಿ ಬಹುಕುಲ ಬ್ರಾಹ್ಮಣರಿಗೆ ರಚಿತವಾದ ಮಂಟಪದಲ್ಲಿ ತದ್ರೂಪಿನಲ್ಲೇ ಮಧ್ಯ ಪಂಕ್ತಿಯಲ್ಲಿ ಕುಳಿತು ಸ್ವಯಂವರಕ್ಕೆ ಬಂದು ಸೇರಿರುವ ರಾಜಾಧಿರಾಜರುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ದ್ವಾರಕೇಶ ಕೃಷ್ಣ ಬಲರಾಮರೂ ಬಂದಿದ್ದು, ಯೋಗ್ಯ ಆಸನದಲ್ಲಿ ಕುಳಿತಿರುವುದನ್ನು ನೋಡಿದರು.

ದ್ರುಪದನ ಅಪ್ಪಣೆಯಂತೆ ದೃಷ್ಟದ್ಯುಮ್ನ ಸ್ಪರ್ಧಾ ಮಂಟಪದತ್ತ ಬಂದು ಘೋಷಣಾ ಮಂಟಪವೇರಿ ನಿಂತು ಎಲ್ಲರಿಗೂ ನಮಸ್ಕರಿಸಿದನು. ಬಂದು ಸೇರಿದ್ದ ಋಷಿ ಮುನಿಗಳಿಗೂ, ಬ್ರಾಹ್ಮಣೋತ್ತಮರಿಗೂ, ಕ್ಷಾತ್ರ ವೀರರಿಗೂ, ಮಂತ್ರಿ, ಮಾಗದರಿಗೂ, ಮಾಂಡಲೀಕರಿಗೂ, ಪ್ರಜಾ ಜನರಿಗೂ ವಂದಿಸಿ ಸ್ವಾಗತಿಸಿದನು. ಸ್ಪರ್ಧಾರ್ತಿಗಳಾಗಿ ಬಂದವರನ್ನು ಪುರಸ್ಕರಿಸುವ ಕ್ರಮವೂ ನಡೆಯಿತು.

ಈ ರೀತಿ ಸಭೆಯ ಶಿಷ್ಟಾಚಾರದ ಬಳಿಕ ಸ್ಪರ್ಧೆಯ ನಿಯಮವನ್ನು ವಿವರಿಸಲು ತೊಡಗಿದನು. “ಸ್ಪರ್ಧಾಳು ರಾಜರೇ, ಕೆಲವೊಂದು ನಿಯಮ ಈ ಸ್ಪರ್ಧೆಗಿದೆ. ಸವಿವರವಾಗಿ ಘೋಷಿಸುತ್ತೇನೆ ನೀವೆಲ್ಲರೂ ಚಿತ್ತವಿಟ್ಟು ಕೇಳುವಂತವರಾಗಿ…
ಸ್ವಯಂವರ ಸ್ಪರ್ಧೆಯಲ್ಲಿ ಕುಲ, ಶೀಲ, ಬಲ, ಶೌರ್ಯ, ಜ್ಞಾನ ಸಂಪನ್ನರಾದ ಕ್ಷಾತ್ರೇಯರೂ, ವರ್ಣೋತ್ತಮರೂ ಭಾಗವಹಿಸಬಹುದು. ಪಣ ನಿಯಮದಂತೆ ವಿಜಯಿಯಾದ ವೀರನಿಗೆ ನನ್ನ ಸಹೋದರಿ ದ್ರೌಪದಿ ವರಮಾಲಿಕೆ ತೊಡಿಸುವ ಮುಖೇನ ಸ್ಪರ್ಧೆ ಸಂಪನ್ನಗೊಳ್ಳಲಿದೆ.
ಸ್ಪರ್ಧಾ ಮಂಟಪದಲ್ಲಿ ಗಗನಮುಖಿಯಾದ ಕೆಲವು ಮಾರು ಎತ್ತರದ ಕಂಬದ ತುದಿಯಲ್ಲಿ ತಿರುಗುವ ಯಂತ್ರವೊಂದಿದೆ. ತಿರುಗುತ್ತಿರುವ ಯಂತ್ರದ ಅಡಿಭಾಗದಲ್ಲಿ ಐದು ರಂಧ್ರಗಳಿವೆ. ಆ ಯಂತ್ರದ ಮೇಲ್ಭಾಗದಲ್ಲಿ ತೂಗುವಂತೆ ಕಟ್ಟಿರುವ ಸ್ವರ್ಣ ಮತ್ಸ್ಯವೊಂದಿದ್ದು ಅದರ ಕಣ್ಣು ನೀಲ ಮಣಿಯನ್ನು ಹೊಂದಿದೆ.
ಈ ಕಂಬದ ಬಲಭಾಗದ ಸ್ವರ್ಣಪೀಠದಲ್ಲಿ ಮಹಾದೇವ ಭಗವಾನ್ ಪರಶಿವನನ್ನು ಅರ್ಚಿಸಿ ಪೂಜಿಸಿ ಇಟ್ಟಿರುವ ಕಿಂಧುರ ಎಂಬ ಹೆಸರಿನ ದಿವ್ಯ ಧನುಸ್ಸಿದೆ. ಹಾಗೆಯೇ ಪಕ್ಕದ ತೂಣಿರಗಳಲ್ಲಿ ತಲಾ ಐದೈದು ಶರಗಳಿವೆ.

ಈ ಯಂತ್ರಗಂಬದ ಪಾದದಲ್ಲಿ ವೃತ್ತಾಕಾರದ ಬಂಗಾರದ ವಿಶಾಲ ಪಾತ್ರದಲ್ಲಿ ನೀರು ತುಂಬಿಡಲಾಗಿದೆ. ಕೆಳಗಿರುವ ಜಲ ನೋಟಕರಾಗಿ ಏಕಾಗ್ರತೆಯಿಂದ ಅದರಲ್ಲಿ ಗೋಚರಿಸುವ ಯಂತ್ರದ ಪ್ರತಿಬಿಂಬ ನೋಡುತ್ತಾ ತದ್ವಿರುದ್ದ ದಿಕ್ಕಿಗೆ ಬಾಣ ಪ್ರಯೋಗಿಸಿ ಲಕ್ಷ್ಯ ಭೇದಿಸಬೇಕು

ಸ್ಪರ್ಧಿಸುವ ಸ್ಪರ್ಧಾಳು ದಿವ್ಯ ಧನುಸ್ಸನ್ನು ಹೆದೆಯೇರಿಸಿ ಐದು ಶರಗಳಿಂದ ಒಂದೇ ಗಮನದಲ್ಲಿ ತಿರುಗುತ್ತಿರುವ ಯಂತ್ರದ ಪಂಚ ರಂಧ್ರಗಳ ಮೂಲಕ ಬಾಣ ಹಾಯಿಸಿ ಸ್ವರ್ಣ ಮತ್ಸ್ಯದ ಅಕ್ಷಿಯ ಲಕ್ಷ್ಯವನ್ನು ಭೇದಿಸಬೇಕು. ರಂಧ್ರ ಹಾದು ಹೋಗುವ ಐದೂ ಬಾಣಗಳು ಮತ್ಸ್ಯದ ಗುರಿ ತಪ್ಪಬಾರದು.”

ಹೀಗೆ ಪಣದ ಕ್ಲಿಷ್ಟ ಪರೀಕ್ಷೆಯ ನಿಯಮವನ್ನು ದೃಷ್ಟದ್ಯುಮ್ನ ವಿವರಿಸಿ, ಎಲ್ಲಾ ಸ್ಪರ್ಧಾಳುಗಳಿಗೂ ಶುಭ ಹಾರೈಸಿ ಶುಭಪ್ರದವಾದ ಮುಹೂರ್ತದಲ್ಲಿ ಸ್ಪರ್ಧೆ ಆರಂಭಗೊಂಡಿತು.

ಶೂರ, ವೀರ, ಧೀರ ರಾಜರು ಬಂದು ತಮ್ಮ ತಮ್ಮ ರಾಜ್ಯ, ಕುಲ, ಅಧಿಕಾರ, ಸಾಧನೆ, ವಿದ್ಯಾ ಪಾರಂಗತ ವಿಶೇಷಗಳನ್ನು ಪರಿಚಯಿಸಿ ಸ್ಪರ್ಧೆಯಲ್ಲಿ ತೊಡಗಿದರೂ ಕೈ ಸಾಗದೆ ಸೋತು ತಲೆ ತಗ್ಗಿಸುತ್ತಾ ಮರಳಿ ಯಥಾ ಪೂರ್ವ ಸ್ಥಾನಿಗಳಾಗತೊಡಗಿದರು. ಹಸ್ತಿನೆಯ ಕೌರವನೂ ಸೋತ. ಆತನ ಸೋದರ ದುಶ್ಯಾಸನ ಅಣ್ಣ ಸೋತ ಬಳಿಕ ತನಗಾಗದು ಎಂದು ಸುಮ್ಮನುಳಿದ. ವಯೋವೃದ್ಧ ಮಾದ್ರಾಧೀಶ ಶಲ್ಯನೂ ಒಂದು ಕೈ ನೋಡುವ ಆದೀತೋ ಎಂಬ ಹಾಗೆ ಪ್ರಯತ್ನಿಸಿ ಆಗಲಿಲ್ಲವೆಂದು ಹಿಂದೆ ಸರಿದ. ಸಾಲ್ವ, ವಂಗ, ಕಳಿಂಗ, ಮಗಧದ ಜರಾಸಂಧ, ಶಿಶುಪಾಲ, ದಂತವಕ್ತ್ರ, ಸುನೀತ, ಕ್ರೌಥ ಹೀಗೆ ಅಗಣಿತ ವೀರ ರಾಜರು ಉತ್ಸಾಹಿತರಾಗಿ ಸ್ಪರ್ಧಿಸಿ ಕೈ ಸಾಗದೆ ನೆಲನೋಟಕರಾಗಿ ಕುಳಿತಿದ್ದಾರೆ.

ಅಂಗಾಧಿಪ ಕರ್ಣ ಎದ್ದು ಸ್ಪರ್ಧಾ ಮಂಟಪದತ್ತ ಬಂದು ತನ್ನ ಪರಿಚಯ, ಸಾಧನೆ ಹೇಳಿ ಇನ್ನೇನು ಧನುಸ್ಸಿನತ್ತ ಕೈ ಚಾಚಬೇಕೆನ್ನುವಷ್ಟರಲ್ಲಿ ಸ್ವಯಂವರ ವಧು ದ್ರೌಪದಿ ಎದ್ದು ನಿಂತು ತಡೆದಳು. “ಕ್ಷತ್ರಿಯ ರಾಜಕುಮಾರಿಯಾದ ನಾನು ಸೂತಪುತ್ರನನ್ನು ವರಿಸಲಾರೆನೆಂದಳು.” ಇದನ್ನು ಕೇಳಿದ ಕರ್ಣ ನಿರಾಶೆಗೊಳಗಾದ. ಸ್ಪರ್ಧೆಯ ನಿಯಮವೂ ಹಾಗೇ ಇತ್ತು ವರ್ಣೋತ್ತಮರು, ಕ್ಷಾತ್ರ ಕುಲ ವೀರರು ಸ್ಪರ್ಧಿಸಿ ಗೆದ್ದವರಿಗೆ ಸ್ಪರ್ಧಾವಧು. ಹೀಗಿರಲು ತಾನು ಈ ಪಣ ಗೆಲ್ಲ ಬಲ್ಲೆನೆಂಬ ವಿಶ್ವಾಸ ಧನುರ್ವೇದ ಪ್ರವೀಣನಾದ ವಸುಸೇನ ಕರ್ಣನಿಗಿದ್ದರೂ.. ಗೆದ್ದೇನು ಪ್ರಯೋಜನ? ಸ್ಪರ್ಧಾ ವಿಜೇತನಾಗಲಾರೆ. ದುರ್ಯೋಧನನತ್ತ ನೋಡಿ ಖಿನ್ನ ವದನನಾಗಿ ಹಿಂದಿರುಗಿದ.
ಇನ್ನುಳಿದ ಕೆಲವರು ಸ್ಪರ್ಧಿಸಿದರಾದರೂ ಯಾರಿಗೂ ಲಕ್ಷ್ಯ ಭೇದನ ಸಾಧ್ಯವಾಗದೇ ಉಳಿಯಿತು.

ಇನ್ಯಾರು, ಇನ್ಯಾರು? ಎಂಬ ಎಲ್ಲರ ಹುಡುಗಾಟದ ಕಂಗಳಿಗೆ ಗೋಚರಿಸಿದ್ದು ದ್ವಾರಕೆಯಿಂದ ಬಂದ ಕೃಷ್ಣ ಬಲರಾಮರು. ಕೃಷ್ಣ ತನ್ನ ಅಣ್ಣ ಬಲಭದ್ರನತ್ತ ವಾಲಿ ಕಿವಿಯಲ್ಲೇನೋ ಉಸುರಿದ. ಕ್ಷಣಹೊತ್ತು ಕಳೆದು ಆತ ಬ್ರಾಹ್ಮಣರ ಮಧ್ಯೆ ವಿಪ್ರವೇಷದಲ್ಲಿ ಕುಳಿತಿದ್ದ ಪಾಂಡವರನ್ನು ಗಮನಿಸಿ ಸುಮ್ಮನೆ ಕುಳಿತು ಬಿಟ್ಟ. ಕೃಷ್ಣ ಮುಗುಳ್ನಗೆ ಸೂಸುತ್ತಾ ಸುಮ್ಮನೆ ಕುಳಿತಿದ್ದಾನೆಯೇ ಹೊರತು ಸ್ಪರ್ಧಿಸುವ ಸೂಚನೆ ಇಲ್ಲ.

ಸ್ಪರ್ಧಾ ಮಂಟಪ ಸ್ಪರ್ಧಾಳುಗಳಿಲ್ಲದೆ ಖಾಲಿ ಉಳಿದಾಗ ದೃಷ್ಟದ್ಯುಮ್ನ ಘೋಷಣಾ ಮಂಟಪವೇರಿ ವೀರ ಸ್ಪರ್ಧಾಳುಗಳನ್ನು ಉದ್ದೇಶಿಸಿ, “ಇನ್ನು ಯಾರಾದರು ಇಲ್ಲಿ ಕ್ಷತ್ರಿಯ ವೀರರು ಸ್ಪರ್ಧಿಸುವವರಿದ್ದೀರೆ?” ಎಂದಾಗ ಕ್ಷಣಹೊತ್ತು ನೀರವ ಮೌನವೇ ಉತ್ತರವಾಯಿತು. ಕೌರವಾದಿಗಳು ಈ ಸ್ಪರ್ಧೆ ಕೇವಲ ಬಿಲ್ಗಾರರಿಗೆ ಮಾತ್ರ. ಗದಾಯುದ್ದ ಪ್ರವೀಣರು, ಖಡ್ಗಧರ ವೀರರಿಗೆ ಮಾನ್ಯತೆ ಇಲ್ಲವೇ ಎಂಬ ಹಾಗೆ ಚರ್ಚಿಸತೊಡಗಿದರು. ಮತ್ತೆ ಉಳಿದವರು “ಆಗುವಂತಹ ಪಣವಿರಿಸಿದ್ದರೆ ಸರಿ, ಇಂತಹ ಹುಚ್ಚು ಪ್ರಯತ್ನದಿಂದಾಗಿ ಈ ಅನರ್ಘ್ಯ ಸುಂದರಿ ಹೆಣ್ಣಿಗೆ ಮದುವೆಯಿಲ್ಲದಂತೆ ಮಾಡಿದರು!” ಎಂದು ಹೇಳುತ್ತಾ ಸೋತ ಅಪಮಾನ ಮರೆತೂ ದ್ರೌಪದಿಯ ಸೌಂದರ್ಯ ನೋಡುವ ಚಪಲದೃಷ್ಟಿಯ ನೋಟ ಬೀರತೊಡಗಿದರು.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಭಾಮಂಟಪದ ಸುತ್ತಲೂ ಕಣ್ಣು ಹಾಯಿಸುತ್ತಾ ದೃಷ್ಟದ್ಯುಮ್ನ ಬ್ರಾಹ್ಮಣರ ಸಾಲಿನತ್ತ ನೋಡಿ, “ವರ್ಣೋತ್ತಮರಲ್ಲಿ ಯಾರಾದರೂ ಸ್ಪರ್ಧಾಳುಗಳಿದ್ದೀರೇ? ಇದ್ದರೆ ಪ್ರಯತ್ನಿಸಬಹುದು” ಎಂದು ಆಹ್ವಾನಿಸಿದ.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page