ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕೋತ್ಸವದ ದೈವವಾಣಿ

ಹೊಸಪೇಟೆ: ಈ ಬಾರಿಯ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪ “ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ದೈವ ವಾಣಿ ನುಡಿದಿದ್ದಾರೆ.
ಈ ಜಾತ್ರೋತ್ಸವದ ನಿಮಿತ್ತ ಡೆಂಕನಮರಡಿಯಲ್ಲಿ ಡಮರುಗದ ನಿನಾದ, ಪ್ರಜ್ವಲಿಸುತ್ತಿದ್ದ ದೀವಟಿಗೆ, ಬೆತ್ತ, ಸರಪಳಿಯ ನೂರಾರು ಗೊರವೊಪ್ಪರು, ಚಾಟಿಯ ಸದ್ದು, ನೆರೆದಿದ್ದ ಲಕ್ಷಾಂತರ ಭಕ್ತರು ಮೈಲಾರಲಿಂಗೇಶ್ವರ ಜಾತ್ರೆಗೆ ಮೆರಗು ನೀಡಿತು.
11 ದಿನ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ರಾಮಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತಂದು ಸಂಜೆ 5:27ಕ್ಕೆ ಬಿಲ್ಲನ್ನೇರಿ ಸದ್ದಲ್ಲೇ ಎನ್ನುತ್ತಿದ್ದಂತೆ ಮೆರೆದ ಲಕ್ಷಾಂತರ ಭಕ್ತರು ನಿಶ್ಯಬ್ದವಾದರು. ಮರುಕ್ಷಣವೇ ಆಕಾಶ ವೀಕ್ಷಿಸಿ “ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ಕಾರ್ಣಿಕ ನುಡಿದು ಬೀಳುತ್ತಿದ್ದ ರಾಮಪ್ಪನನ್ನು ಗೊರವ ಸಮೂಹ ಎತ್ತಿ ಹಿಡಿದರು.
ಇದನ್ನು ವಿಶ್ಲೇಷಿಸಿದ ಮೈಲಾರಲಿಂಗೇಶ್ವರ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ “ತುಂಬಿದ ಕೊಡವೆಂದರೆ ಪ್ರಸಕ್ತ ವರ್ಷದಲ್ಲಿ ಶ್ರೇಷ್ಠ, ವಿಪರೀತ ಮಳೆಯಿಂದಾಗಿ ಸಮೃದ್ಧಿ ಬೆಳೆದು ರೈತಾಪಿ ವರ್ಗಕ್ಕೆ ಹರ್ಷ ತರಲಿದೆ. ರಾಜ್ಯ ಮತ್ತು ರಾಷ್ಟ್ರ ಸುಭಿಕ್ಷೆಯಿಂದಿರಲಿದೆ” ಎಂದು ಹೇಳಿದರು.



















