
ಬೆಂಗಳೂರು: ಕಾನೂನು ಇಲಾಖೆಯು ರಾಜ್ಯದಲ್ಲಿ ಜಾತಿ, ಧರ್ಮ, ಭಾಷೆ ಸೇರಿ ವಿವಿಧ ವಿಷಯಗಳ ಮೇಲೆ ದ್ವೇಷ ಹರಡುವ ಭಾಷಣ ಮಾಡುವುದನ್ನು ನಿಯಂತ್ರಿಸಲು ಮುಂದಿನ ಬಜೆಟ್ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡಿಸಲು ತಯಾರಿ ನಡೆಸಿದ್ದು ರಾಜ್ಯದಲ್ಲಿ ದ್ವೇಷ ಭಾಷಣ ಸಾಬೀತಾದರೆ 3 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ನಗದು ದಂಡ ವಿಧಿಸಲು ಅವಕಾಶ ಮಾಡಿಕೊಡುವಂತಹ ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ (ಹೋರಾಟ, ತಡೆಗಟ್ಟುವಿಕೆ ಮತ್ತು ಶಿಕ್ಷೆ) ವಿಧೇಯಕ-2025 ಕರಡನ್ನು ಕಾನೂನು ಇಲಾಖೆ ಸಿದ್ಧಪಡಿಸುತ್ತಿದೆ.
ಇದರಡಿ ಜಾತಿ, ಧರ್ಮ ಆಧರಿಸಿ ದ್ವೇಷ ಭಾಷಣ ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದ್ದು ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ಅಂಗವೈಕಲ್ಯ ಬುಡಕಟ್ಟುವಿನ ಕುರಿತು ದ್ವೇಷ ಭಾಷಣ ಮಾಡುವಂತಿಲ್ಲ ಎಂಬುದನ್ನು ಕರಡಿನಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ದತ್ತಾಂಶ, ಸಂದೇಶ, ಪಠ್ಯ ಚಿತ್ರಗಳು, ಧ್ವನಿ, ಧ್ವನಿ ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂ, ಸಾಫ್ಟ್‌ವೇರ್ ಮತ್ತು ಡೇಟಾಬೇಸ್ ಕೂಡ ಕಾನೂನು ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಇದರಡಿ ಯಾವುದೇ ರೀತಿಯಲ್ಲಿ ದ್ವೇಷ ಹರಡಲು ಬಳಕೆಯಾಗುವ ವ್ಯಕ್ತಿ, ಪ್ರಸಾರ ಮಾಡುವ ವಾಹಿನಿಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಚ್ ಎಂಜಿನ್‌ಗಳನ್ನು ಕೂಡ ಕಾನೂನು ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯಕ್ಕೆ ಕರಡು ಸಿದ್ಧಪಡಿಸಿದ್ದು, ಕರಡು ಪ್ರತಿ ಅಂತಿಮಗೊಳಿಸಿದ ಬಳಿಕ ಸಚಿವ ಸಂಪುಟದ ಅನುಮೋದನೆ ಪಡೆಯಲಾಗುವುದು. ಬಳಿಕ ಮುಂದಿನ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ವಿಧೇಯಕ ಮಂಡಿಸಲು ಉದ್ದೇಶಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಸದಸ್ಯರ ಅಭಿಪ್ರಾಯದಂತೆ ಮುಂದುವರೆಯಲು ನಿರ್ಧರಿಸಲಾಗಿದೆ.





















