
ಬೆಂಗಳೂರು: ಕರ್ನಾಟಕ ಸರ್ಕಾರವು ಮಹತ್ವದ ಆದೇಶವನ್ನು ಹೊರಡಿಸಿದ್ದು ಅದೇನೆಂದರೆ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕುಡಿಯುವ ನೀರು ಕೊಡುವಂತಿಲ್ಲ ಎಂಬ ಆದೇಶವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಜನವರಿ 31ರಂದೇ ಈ ಸುತ್ತೋಲೆ ಹೊರಡಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಬಗ್ಗೆಯೂ ಸಲಹೆ ನೀಡಲಾಗಿದೆ. ಪ್ಲಾಸ್ಟಿಕ್ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಸಚಿವಾಲಯ ಸೇರಿದಂತೆ ರಾಜ್ಯಾದ್ಯಾಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಸೌಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ನ ನೀರಿನ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ಉಳ್ಳ ಗ್ಲಾಸ್, ಸ್ಟೀಲ್, ಪೇಪರ್ ಮತ್ತಿತರ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮವಹಿಸುವಂತೆ ಅಧಿಸೂಚನೆ ಸುತ್ತೋಲೆ ಹೊರಡಿಸಲಾಗಿದೆ.
ಹೀಗಾಗಿ ಎಲ್ಲ ಇಲಾಖೆಗಳ ಮುಖ್ಯಸ್ಥರು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಕ್ಷೇತ್ರ, ಇಲಾಖೆ, ಮಂಡಳಿ, ನಿಗಮಗಳಿಗೆ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಬೇಕು ಎಂದೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.





















