
ನವದೆಹಲಿ: ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಂಗ್‌ಪುರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವೂ ಅಧಿಕಾರ ಉಳಿಸಿಕೊಂಡಿರೆ ಮನೀಶ್ ಸಿಸೋಡಿಯಾ ಮತ್ತೆ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.
ಹಾಲಿ ಎಎಪಿ ಸರ್ಕಾರದ ಬಹುಪಾಲು ಅವಧಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಉಪನಾಯಕರಾಗಿ ಸೇವೆ ಸಲ್ಲಿಸಿದ ಮನೀಶ್ ಸಿಸೋಡಿಯಾ ಅವರನ್ನು ಮಾರ್ಚ್ 2023ರಲ್ಲಿ ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ನಂತರ ಅವರು ರಾಜೀನಾಮೆ ನೀಡಿದ್ದು ಪ್ರಸುತ್ತ ಪತ್ಪರ್‌ಗಂಜ್‌ನಿಂದ ಶಾಸಕರಾಗಿದ್ದಾರೆ. ಆದರೆ ಈ ವಿಧಾನಸಭಾ ಚುನಾವಣೆಯಲ್ಲಿ ಜಂಗ್‌ಪುರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದರು.
ಮನೀಷ್ ಸಿಸೋಡಿಯಾ ಮತ್ತು ನಾನು ಒಟ್ಟಾಗಿ ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗಳನ್ನು ಅತ್ಯುತ್ತಮವಾಗಿ ಮಾಡಿದ್ದೇವೆ. ಈಗ ತಮ್ಮ ಸರ್ಕಾರ ರಚನೆಯಾದರೆ ಇಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಎಎಪಿ ಸರ್ಕಾರಿ ಶಾಲೆಗಳನ್ನು ನಿರ್ಮಿಸುತ್ತದೆ. ಬಿಜೆಪಿ ‘ಅವುಗಳನ್ನು ಮುಚ್ಚುವ’ ನಿರ್ಧಾರ ಮಾಡಿದೆ. ಯಾರನ್ನು ಆಯ್ಕೆ ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಜಂಗ್‌ಪುರದಲ್ಲಿ ಆಪ್ ಗೆದ್ದರೆ ಇಲ್ಲಿನ ಪ್ರತಿಯೊಬ್ಬ ಸಹೋದರ ಸಹೋದರಿಯರೂ ಉಪಮುಖ್ಯಮಂತ್ರಿ ಆಗುತ್ತಾರೆ. ಇಲ್ಲಿನ ಜನರ ಕೆಲಸವನ್ನು ತಡೆಯುವ ಧೈರ್ಯ ಯಾರಿಗೂ ಬರುವುದಿಲ್ಲ ಎಂದು ಹೇಳಿದರು.





















