
ಬಲ್ಲಾಡಿ ಮಠದಲ್ಲಿ ವರ್ಧಂತ್ಯುತ್ಸವ, ಧಾರ್ಮಿಕ ಪ್ರವಚನ, ಅನ್ನಸಂತರ್ಪಣೆ
ಹೆಬ್ರಿ :ಭಾಗವತದಲ್ಲಿ ವಿಠ್ಠಲನ ಅಪಾರ ಮಹಿಮೆಯ ವರ್ಣನೆ ಇದೆ. ಭಕ್ತಿಯಿಂದ ಭಜಿಸುವ ಸಕಲರ ದುರಿತಗಳನ್ನು ಪರಿಹರಿಸುವ ವಿಠ್ಠಲ ದೇವರ ಆರಾಧನೆ ಮುದ್ರಾಡಿಯಲ್ಲಿ ನಡೆಯುತ್ತಿದೆ. ಕ್ಷಣಿಕ ಸುಖಕೋಸ್ಕರ ಕಾರಣವಾಗುವ ಲೌಕಿಕ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ನಿರಂತರವಾಗಿ ದೇವರ ದರ್ಶನವನ್ನು ಮಾಡುತ್ತಾ ದೇವರ ಧ್ಯಾನ, ಸಂಕೀರ್ತನೆಯಲ್ಲಿ ತೊಡಗಿಸಿಕೊಂಡು ದೇವರ ಕೃಪೆಗೆ ಪಾತ್ರರಾಗಿ ನಿತ್ಯವೂ ಸುಖ, ಶಾಂತಿ, ನೆಮ್ಮದಿಯ ಬದುಕನ್ನು ನಮ್ಮದಾಗಿಸಿಕೊಳ್ಳೋಣ. ವರ್ಧಂತ್ಯುತ್ಸವ ಕಾರ್ಯಕ್ರಮದಿಂದ ದೇವತಾ ಸಾನಿಧ್ಯ ವೃದ್ಧಿಯಾಗಿ ಸಕಲರಿಗೂ ದೇವರು ಒಳಿತನ್ನು ಉಂಟುಮಾಡುತ್ತಾನೆ. ಮಠ, ಮಂದಿರಗಳಲ್ಲಿ ನಡೆಯುವ ದೇವತಾ ಕಾರ್ಯದಿಂದ ಪುಣ್ಯಫಲ ಎಲ್ಲರಿಗೂ ದೊರೆಯುತ್ತದೆ ಎಂದು ಮುನಿಯಾಲು ಆಯುರ್ವೇದ ಮಹಾವಿದ್ಯಾಲಯ, ಮಣಿಪಾಲ ಇಲ್ಲಿನ ಉಪಪ್ರಾಂಶುಪಾಲರಾದ ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ಹೇಳಿದರು.
ಅವರು ಮುದ್ರಾಡಿ ಗ್ರಾಮದ ಶ್ರೀ ಪಾಂಡುರಂಗ ವಿಠ್ಠಲ ದೇವರ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧಾರ್ಮಿಕ ಪ್ರವಚನ ನೀಡಿದರು. ವಿದ್ವಾನ್ ಇರ್ವತ್ತೂರು ವಾಸುದೇವ ಭಟ್, ಗಿಲ್ಲಾಳಿ ಪದ್ಮನಾಭ ಆಚಾರ್ಯ ಮತ್ತು ಎಂ. ರಾಘವೇಂದ್ರ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.ದೇವರಿಗೆ ಕಲಶಾಭಿಷೇಕ, ಮೂಲ ಮಂತ್ರ ಹೋಮ, ವಿಷ್ಣು ಸಹಸ್ರನಾಮರ್ಚನೆ, ಚಂಡಿಕಾ ಹೋಮ,ಮಹಾಪೂಜೆ,ಅನ್ನ ಸಂತರ್ಪಣೆ, ಅಷ್ಟಾವಧಾನ ಸೇವೆ, ರಂಗಪೂಜೆ ನಡೆಯಿತು. ಶ್ರೀ ಅನಂತ ಪದ್ಮನಾಭ ಭಜನಾ ಮಂಡಳಿ, ಹೆಬ್ರಿ ಇವರಿಂದ ಲಕ್ಷ್ಮೀಶೋಭಾನೆ ಮತ್ತು ಭಜನಾ ಕಾರ್ಯಕ್ರಮ, ಕರುಣಾಕರ ಸೇರಿಗಾರ ಮುದ್ರಾಡಿ ಮತ್ತು ಸದಾಶಿವ ಸೇರಿಗಾರ ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಅರ್ಧನಾರೀಶ್ವರ ಭಜನಾ ಮಂಡಳಿ ಮತ್ತು ಮಹಿಳಾ ಭಜನಾ ಮಂಡಳಿ, ಬಲ್ಲಾಡಿ ಹಾಗೂ ಚತುರ್ಮುಖ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಮತ್ತು ಮಹಿಳಾ ಭಜನಾ ಮಂಡಳಿ ಅಡ್ಕ ಇವರಿಂದ ಭಜನಾ ಕಾರ್ಯಕ್ರಮ, ಹೆಬ್ರಿ ನಿತ್ಯಾನಂದ ಭಟ್ ಮತ್ತು ಬಳಗದವರಿಂದ ಭಕ್ತಿಗೀತೆ ನಡೆಯಿತು. ಅರ್ಚಕ ನಾರಾಯಣ ಭಟ್ ಸ್ವಾಗತಿಸಿ, ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಊರ, ಪರವೂರ ಭಗವದ್ಭಕ್ತರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.





















