ತಾಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿ ರಚನೆಗೆ, ಶಿಕ್ಷಣ ಇಲಾಖೆಯ ಆದೇಶ

ತಾಲೂಕು ಮಟ್ಟದಲ್ಲಿ ಶಾಲಾ ಕಾಲೇಜುಗಳ ಶಿಕ್ಷಣ ಗುಣಮಟ್ಟವನ್ನು ಸುಧಾರಿಸಲು ತಾಲೂಕು ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಯನ್ನು ರಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ, ಆದೇಶ ಹೊರಡಿಸಿದೆ.
ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಮತ್ತೊಂದು ಶಾಲೆಯ ಜೊತೆ ಸಂಯೋಜಿಸಿ ನಡೆಸಲು ಚಿಂತನೆ ನಡೆಸಲಾಗಿದೆ. ಈ ವಿಷಯ ಇದೀಗ ಕಳವಳಕ್ಕೆ ಕಾರಣವಾಗಿದೆ. ಬಿಜೆಪಿ ಸರಕಾರ ಸಂದರ್ಭದಲ್ಲಿ ಎರಡು ಮೂರು ಶಾಲೆಗಳನ್ನು ಸಂಯೋಜಿಸಲು ಸರಕಾರ ನಿರ್ಧರಿಸಿದ್ದು ,ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಇದೀಗ ಕಾಂಗ್ರೆಸ್ ಸರಕಾರ ಈ ಬಗ್ಗೆ ಚಿಂತನ ನಡೆಸಿದೆ ಎನ್ನಲಾಗಿದೆ.
ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಮಿತಿ ರಚನೆ ಮಾಡಿದ್ದು, ಶಾಲಾ ದಾಖಲಾತಿ, ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಹಾಜರಾತಿ, ಶಾಲೆಯ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆ ತರಲು ಸಮಿತಿ ಕಾರ್ಯ ನಿರ್ವಹಣೆ ಮಾಡಲಿದೆ. 14 ಸದಸ್ಯರನ್ನು ಒಳಗೊಂಡ ಸಮಿತಿ ಇದಾಗಿದೆ. ಪ್ರತಿ ತಾಲೂಕಿನ ಶಾಸಕರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ತಹಶೀಲ್ದಾರರು, ಬಿಇಓ, ಸರಕಾರದಿಂದ ನಾಮನಿರ್ದೇಶನಗೊಂಡ 5 ಜನ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು ಸಮಿತಿಯ ಸದಸ್ಯರಾಗಿರುತ್ತಾರೆ.























