31.9 C
Udupi
Wednesday, May 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 78

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೭೮ ಮಹಾಭಾರತ

ಇಂದಿನ ಸಂಜೆ ಕಳೆದು ರಾತ್ರಿ ಬೆಳಗಾದರೆ ಕೃಷ್ಣ ಬಲರಾಮರು ಮಥುರೆಗೆ ಹೋಗುವರೆಂಬ ಸುದ್ದಿ ತಿಳಿದ ನಂದ ಗೋಕುಲದ ಅಬಾಲ ವೃದ್ದರೆಲ್ಲರೂ ದುಃಖದ ಮಡುವಿನಲ್ಲಿ ಮುಳುಗಿದರು. ಓಡೋಡಿ ಬಂದು ಕೃಷ್ಣನನ್ನು ಸುತ್ತುವರಿದು ಪ್ರಶ್ನೆಗಳ ಸುರಿಮಳೆ ಸುರಿದರು. ಸಾತ್ವಿಕ ಅಕ್ರೂರ ರಾಜಾಜ್ಞೆಯ ಹೊಣೆ ಹೊತ್ತು ಬಂದವನಾದರೂ, ಕೃಷ್ಣನನ್ನು ಕರೆದೊಯ್ಯಲು ಬಂದಿರುವುದರಿಂದ ಗೋಕುಲವಾಸಿಗಳಿಗೆ ಕ್ರೂರಿಯಾಗಿ ಗೋಚರಿಸಿದ. ಮಕ್ಕಳಿಗೆ ಇನ್ನು ನಾವ್ಯಾರೊಂದಿಗೆ ಆಟವಾಡಲಿ ಎಂಬ ಮೈತ್ರಿಯ ವೇದನೆ, ವೃದ್ದರಿಗೆ ಬೆಳೆದ ಮಗ ತಮ್ಮನ್ನು ಅನಾಥನಾಗಿಸಿ ಹೋಗುತ್ತಿದ್ದಾನೆ ಎಂಬ ಭಯ, ಗೋಪಿಕೆಯರದ್ದು ವಿಭಿನ್ನ ಸ್ಥಿತಿ ಎಳೆ ಬಾಲಕ ಕೃಷ್ಣನ ಮೇಲೆ ಅಧಮ್ಯ ಅನನ್ಯ ಪ್ರೀತಿ, ಭಕ್ತಿ, ಮೋಹ ಎಲ್ಲಾ ಸೇರಿ ಬಳಿ ಇರಲಾರ ಎಂಬ ವಿರಹದ ಉರಿ ಸುಡುತ್ತಿದೆ. ಗೋವುಗಳು ಮೂಕವೇದನೆಯ ಜೊತೆ, ಕಣ್ಣೀರು ಸುರಿಸುತ್ತಾ ಇವೆ. ಮಾತೆ ರೋಹಿಣಿ ಯಶೋದೆಯರಂತೂ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ಕೃಷ್ಣ ಬಲರಾಮರನ್ನು ಒಂದು ದಿನವೂ ಬಿಟ್ಟಿರಲಾಗದ ಬಾಂಧವ್ಯ. ಎಲ್ಲರನ್ನೂ ಸಂತೈಸಿ, ಗೋವುಗಳಿಗೆ ಮೇವು ತಿನಿಸಿದ ಕೃಷ್ಣ. ಜೇನುಗೂಡಿನಲಿ ರಾಣಿ ಜೇನಿನ ಹಿಂದೆ ಮುತ್ತಿಕ್ಕಿ ಗೂಡು ಕಟ್ಟುವ ಬಳಗದಂತೆ ಕೃಷ್ಣ ಆವರಿಸಲ್ಪಟ್ಟಿದ್ದ. ಮನದೊಳಗೆ ಉರಿಯೇರಿ ಇಳಿಯುತ್ತಿದ್ದ ಬೆವರು, ಕಣ್ಣಾಲಿಗಳು ಸೆಳೆದು ಸುರಿಸುವ ಅಶ್ರುಧಾರೆಗೆ ಗೋಕುಲದ ನೆಲವೂ ಪಸೆಯಾಗಿ ಬಿಟ್ಟಿತು. ಭಗವಂತ ಶ್ರೀ ಕೃಷ್ಣ ಸುಶ್ರಾವ್ಯವಾಗಿ ವೇಣುಗೀತೆಯನೂದಿ ತನ್ನವರ ಕಣ್ಣೀರು ತಡೆದ, ಸಂತೈಸಿದ. ಮರಳಿ ಬರುವೆನೆಂಬ ಭರವಸೆಯ ಮಾತುಗಳನ್ನೂ ನುಡಿದನು. ಬ್ರಾಹ್ಮೀ ಮುಹೂರ್ತ ಬಂದೇ ಬಿಟ್ಟಿತು ಶುಚಿರ್ಭೂತನಾಗಿ ಪ್ರಾತಃವಿಧಿಗಳನ್ನು ಪೂರೈಸಿ ನಂದಗೋಪ, ಯಶೋದೆ, ಮಾತೆ ರೋಹಿಣಿಯರ ಬಳಿ ಬಂದು ಶಿರಬಾಗಿ ನಮಿಸಿದನು. ತಾನು ಮಥುರೆಗೆ ಹೋಗಲೇ ಬೇಕಾದ ಕಾಲ ಬಂದಿದೆ. ಕಳುಹಿಸಿ ಕೊಡಿ ಎಂದು ಬೇಡಿ ಅನುಮತಿ ಕೇಳಿದ.

ಮಾತೆ ಯಶೋದೆ – ರೋಹಿಣಿಯರು, ಅಯ್ಯೋ! ಕೊರಳಸೆರೆಗಳು ಹಿಗ್ಗಿ, ಕಣ್ಣೀರಿಳಿಸುತ್ತಾ ಒಂದು ಶಬ್ದವನ್ನೂ ಆಡದಷ್ಟೂ ವಿವಶರಾಗಿ, ಕಡು ದುಃಖಿಗಳಾಗಿ ಆಂಗಿಕ ಭಾವದಿಂದಲೇ ಕೈಯೆತ್ತಿ ಆಶೀರ್ವದಿಸಿದರು. ಬರಸೆಳೆದು ಕೃಷ್ಣ ಬಲರಾಮರನ್ನು ಬಿಗಿದಪ್ಪಿ ತಲೆ ನೇವರಿಸಿ ಮುತ್ತಿಕ್ಕಿ ಮುದ್ದಾಡಿದರು. ನಂದಗೋಪನೂ ಜಾಗರೂಕತೆಯನ್ನು ಪಿತೃ ಸ್ಥಾನದ ನೆಲೆಯಲ್ಲಿ ನುಡಿದು, ರಾಜಾಜ್ಞೆಗೆ ಮಣಿದು ಮಕ್ಕಳನ್ನು ಕರೆದುಕೊಂಡು ಸಜ್ಜಾಗಿದ್ದ ಬಂಡಿ, ರಥಗಳ ಮುಂದೆ ಸಾಗಿದನು. ಕ್ಷೀರ ಉತ್ಪನ್ನಗಳು ಬಂಡಿಗಳಲ್ಲಿ ತುಂಬಿಸಲ್ಪಟ್ಟು ರಾಜನಿಗೆ ಕಾಣಿಕೆಯಾಗಿ ಕೃಷ್ಣ ಬಲರಾಮರ ಜೊತೆ ಮಥುರೆಗೆ ಸಾಗಲು ಅಣಿಯಾಗಿತ್ತು. ಅಳುವ ಗೋಪಿಕೆಯರು, ಗೆಳೆಯರು, ಹಿರಿಯರು, ಗೋವುಗಳು.. ಎಲ್ಲರಿಗೂ ನಮಿಸಿ ಬಲರಾಮ ಕೃಷ್ಣರು ರಥವೇರಿದರು. ಬಲಯುತ ಗೋಪಾಲಕರು ಅಂಗರಕ್ಷಕರಾಗಿ ಆಯುಧ ಸಹಿತ ರಾಜಕಾಣಿಕೆಯ ಬಂಡಿಗಳಲ್ಲಿ ಉಪವಿಶರಾದರು. ರಥ ಸಾಗುವಾಗ ಗೋಕುಲವಾಸಿಗಳು ಬೆನ್ನಟ್ಟಿ ಓಡಿ ಬಂದರು. ದೇವನ ಬಳಿ ಭಕ್ತರು ಧಾವಿಸುವುದು ಸಹಜವಲ್ಲವೇ! ಆದರೆ ರಥದ ಗಮನ ವೇಗ – ಇವರ ಓಟದ ವೇಗದ ನಡುವೆ ಅಂತರ ವಿಸ್ತರಿಸಿತು. ಕೆಂಧೂಳು ಆವರಿಸಿತು.. ರಥವು ಸಾಗಿ ಕಣ್ಮರೆಯಾಗುವವರೆಗೂ ನೋಡಿದರು…

ಹೊತ್ತು ಮುಳುಗುವ ಹೊತ್ತಿಗೆ ಯಮುನೆಯನ್ನು ದಾಟಿ ನಗರ ದ್ವಾರದ ಬಳಿ ತಲುಪಿದರು. ವಿಶ್ರಾಂತಿಯನ್ನು ಬಯಸಿದ ಬಲರಾಮ ಕೃಷ್ಣರು ನಗರದ ಹೊರ ವಲಯದಲ್ಲೇ ಸಂಗಡಿಗರ ಜೊತೆ ವಿಶ್ರಾಂತಿ ಪಡೆಯುವುದೆಂದು ನಿರ್ಧರಿಸಿದರು. ಅಕ್ರೂರನಿಗೆ ಅವನ ಮನೆಗೆ ಹೋಗಲು ಅನುಮತಿ ನೀಡಿದರು. ಬಿಟ್ಟು ಹೋಗಲು ಒಪ್ಪದ ಅಕ್ರೂರನನ್ನು ಸಂತೈಸಿ ಕಳುಹಿಸಿದರು.

ನಗರ ದ್ವಾರದ ಬಳಿಯ ಉದ್ಯಾನದಲ್ಲಿ ತಾವು ತಂದಿದ್ದ ಊಟವನ್ನುಂಡು ಸಂಗಡಿಗರ ಜೊತೆ ವಿಶ್ರಾಂತಿ ಪಡೆದರು.
ಬೆಳಗ್ಗೆದ್ದು ನಿತ್ಯಕರ್ಮ ಪೂರೈಸಿ ವಸನಾಲಂಕಾರಗೈದು ಬಲರಾಮ ಕೃಷ್ಣರು ಸಿದ್ದರಾದರು. ತನ್ನೊಂದಿಗಿದ್ದ ಗೋಕುಲದ ಬಲಿಷ್ಠ ಗೋಪಾಲಕರನ್ನು ಕರೆದು ನೀವು ಮಾರುವೇಷದಲ್ಲಿ ನಮ್ಮಿಂದ ಅನತಿ ಅಂತರದಲ್ಲಿ ಹಿಂಬಾಲಿಸುತ್ತಾ ಬರಬೇಕು. ವಿಪತ್ಕಾಲದಲ್ಲಿ ಸೂಚನೆ ನೀಡಿದಾಗ ಅನುಸರಿಸಿ ಒದಗಬೇಕು ಎಂಬ ಮಾರ್ಗದರ್ಶನ ನೀಡಿದನು ಕೃಷ್ಣ. ಹೀಗೆ ಸಂಪೂರ್ಣ ತನು ಮನದ ಸಿದ್ಧತೆಯೊಂದಿಗೆ ಹೊರಟರು. ಧನುರ್ಯಾಗದ ನೆಪದಲ್ಲಿ ಸರ್ವಾಲಂಕೃತ ನಗರದ ಸೊಬಗನ್ನು ಸವಿಯುತ್ತಾ, ಸ್ಪಟಿಕ ಗೋಪುರ, ಸ್ವರ್ಣ ದ್ವಾರ, ತಳಿರು ತೋರಣ, ಉದ್ಯಾನ, ಉಪವನ, ಚತುರ್ವಿಧ ಪ್ರಾಸಾದ – ಪ್ರಾಕಾರಗಳು, ಸತ್ರ ಸಭೆಗಳು, ಧ್ವಜ ಪತಾಕೆಗಳು, ಹೀಗೆ ಕಂಗೊಳಿಸುವ ಮಥುರೆಯ ಚೆಲುವಿನ ವೈಭವ, ವಿಶೇಷಗಳನ್ನು ಅವಲೋಕಿಸುತ್ತಾ, ಕಂಸನ ಯೋಜನೆ ಯೋಚನೆಗಳನ್ನು ಗ್ರಹಿಸುತ್ತಾ ನಡೆದು ಸಾಗಿ ನಗರ ದ್ವಾರದಿಂದ ಕೋಟೆ ಬಾಗಿಲವರೆಗೆ ಬಂದು ಮುಟ್ಟಿದರು.

ರಾಜನ ವಸ್ತ್ರಗಳ ಮೂಟೆ ಹೊತ್ತುಕೊಂಡು ಬರುತ್ತಿದ್ದ ರಾಜರಜಕ ಎದುರಾದ. ಗಮನಿಸಿದ ರಾಮ -ಕೃಷ್ಣರು ಆತನ ಗುಣ ಪರೀಕ್ಷೆಗೆ ಮುಂದಾದರು. ಅದರೊಳಗಿಂದ ತಮಗೆ ಉತ್ತಮ ವಸನಗಳನ್ನುಡಲು ಕೊಡುವೆಯ. ನಾವು ಮಹಾರಾಜನ ಅಳಿಯಂದಿರು ಎಂದು ವಿನಯದಿಂದ ಬೇಡಿದರು. ಹೀಗೆ ಬೇಡಿದ ಪೂರ್ಣೈಶ್ವರ್ಯನಾದ ಲಕ್ಷ್ಮೀಪತಿಯನ್ನು ಅವನು ಉಪೇಕ್ಷಿಸಿದನು. ಮದವೇರಿದ ರಜಕ “ಎಲವೋ ಗುಡ್ಡಗಾಡಿನ ಹಳ್ಳಿ ಕೋಮರರೇ ಅಯೋಗ್ಯರು ನೀವು. ರಾಜಯೋಗ್ಯವಾದ ಉಡುಪುಗಳನ್ನು ಧರಿಸುವುದು ಬಿಡಿ, ಮುಟ್ಟುವ ಯೋಗ್ಯತೆಯೂ ನಿಮಗೆ ಇಲ್ಲ. ಕನಿಷ್ಟ ನೋಡುವ ಭಾಗ್ಯ ಸಿಕ್ಕಿದರೆ ಅದೇ ಹೆಚ್ಚು. ರಾಜದ್ರವ್ಯವನ್ನು ಬೇಡುವಾಗ ಏನು ಕೇಳುತ್ತಿದ್ದೇವೆ ? ನಮ್ಮ ಯೋಗ್ಯತೆ ಏನು ಎಷ್ಟು ಎಂಬ ಅರಿವೂ ನಿಮಗಿಲ್ಲವೇ? ಅಲ್ಪರು ನೀವು… ಎಂಬಿತ್ಯಾದಿ ಇನ್ನೂ ನೀಚ ದುರ್ವಚನಗಳಿಂದ ನಿಂದಿಸಿ ಅಹಂ ಪ್ರದರ್ಶಿಸಿದ. ರಜಕನ ವಸ್ತ್ರದ ಮೂಟೆಗೆ ಕೈಯಿಕ್ಕಿ ಎಳೆದು ಕಸಿದರು ಕೃಷ್ಣ ರಾಮರು. ತಕ್ಷಣ ಆಕ್ರಮಣಕ್ಕೆ ಮುಂದಾದ ರಜಕ ಕೈಯೇರಿಸಿ ಹೊಡೆಯಲು ಮುಂದೋಡಿ ಬಂದು, ಹೊಡೆದೇ ಬಿಟ್ಟ ಎನ್ನುವಾಗ ಅದಕ್ಕೆ ಪ್ರತಿಯಾಗಿ ಕೃಷ್ಣ ಅವಕಾಶ ನೀಡದೆ ರಕ್ಷಣಾತ್ಮಕವಾಗಿ ತಡೆದು ಹೇಳಿದ, “ಅಯ್ಯಾ ನಾವು ರಾಜನ ಅಳಿಯಂದಿರು ಎಂಬ ಕಾರಣಕ್ಕೂ ಗೌರವವೂ ನೀಡದೆ ಸತ್ಕರಿಸಬೇಕಾದ ಅತಿಥಿಗಳನ್ನು ಅವಮಾನಿಸಿದೆಯಾ? ಕನಿಷ್ಟ ಸೌಮ್ಯವಚನಗಳಿಂದ ನೀನು ಹೇಳುತ್ತಿದ್ದರೂ ನಮಗಷ್ಟೇ ಸಾಕಾಗುತ್ತಿತ್ತು. ನಿನ್ನ ತಲೆಗಡರಿದ ಮದ ಇಳಿಯಲೇ ಬೇಕು” ಎಂದು ಆತನ ಘಾತಕ್ಕೆ ಪ್ರತಿಘಾತವೀಯಲು – ರಜಕ ಹತಪ್ರಾಣನಾಗಿ ಬಿಟ್ಟ. ಸೇವಕನ ವ್ಯಾಪ್ತಿ ಅತಿಕ್ರಮಿಸಿ, ಬಂದಂತಹ ಅಭ್ಯಾಗತರ ಜೊತೆ ಸತ್ಕಾರದ ಸವಿ ಮಾತಿನ ಸಂಸ್ಕಾರ ಮರೆತು ದೌಷ್ಟ್ಯ ತೋರಿದ ರಜಕನಿಗೂ ದೇವರ ಕೈಯಲ್ಲಿ ಜೀವನ ಯಾತ್ರೆ ಮುಗಿಸುವ ಯೋಗ ಪ್ರಾಪ್ತವಾಯಿತು. ಈ ಪ್ರಕರಣ ಸೂಕ್ಷ್ಮವಾಗಿ ಯಥಾ ರಾಜಾ ತಥಾ ಪ್ರಜಾ ಎಂಬುವುದಕ್ಕೆ ಪ್ರಮಾಣವಾಗಿ ಹೋಯಿತು. ರಾಜ ರಜಕನ ವಸ್ತ್ರದ ಗಂಟು ಬಿಚ್ಚಿ ರಾಜ ಪೋಷಾಕುಗಳಿಂದ ಪೀತಾಂಬರವನ್ನು ಕೃಷ್ಣನೂ, ಬಲರಾಮ ನೀಲಾಂಬರವನ್ನೂ ಉಟ್ಟುಕೊಂಡರು.

ಪರೋಕ್ಷವಾಗಿ ಕಂಸನಿಗೆ ಬಲರಾಮ – ಕೃಷ್ಣರಾಗಮನದ, ಅರಮನೆ ಪ್ರವೇಶದ ಸೂಚನೆಯನ್ನೂ ನೀಡಿದಂತಾಯಿತು.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page