ಭಾಗ – 70
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೭೦ ಮಹಾಭಾರತ
ಹುಟ್ಟಿದ ಕಂದ ಮುಕುಂದ ಮುರಾರಿ ಬಾಲ ಲೀಲೆ ತೋರಿ ತುಸುಕಾಲ ವಸುದೇವ ದೇವಕಿಯರಿಗೆ ಅಕ್ಷಯ ಸುಖ ನೀಡಿದ. ತಕ್ಷಣ ತನ್ನ ನಿಜರೂಪ ಧಾರಣೆ ಮಾಡಿ ಚತುರ್ಭುಜನಾಗಿ ದಿವ್ಯ ಶಂಖ, ಸುದರ್ಶನ ಚಕ್ರ, ಕೌಮೋದಕೀ ಗದೆ ಹಾಗು ಪದ್ಮಧರನಾಗಿ, ಕೌಸ್ತುಭ ಹಾರ, ಕೇಯೂರ, ಒಡ್ಯಾಣ, ಪೀತಾಂಬರ ವಸ್ತ್ರ ಧರಿಸಿ ಹಸನ್ಮುಖದಿಂದ ನೀಲವರ್ಣ ನಭದಲ್ಲಿ ಗೋಚರಿಸಿದ. ಹೆತ್ತವರಿಗೂ ಶ್ರೀ ಹರಿಯೇ ನಮ್ಮ ಕಂದನಾಗಿ ಬಂದ ಸತ್ಯದರ್ಶನವಾಯಿತು. ಸಾಷ್ಟಾಂಗ ನಮಸ್ಕರಿಸಿ ನಿಂತರು.
ಸುಶ್ರಾವ್ಯ ಸುಮಧುರ ಗಂಭೀರ ಸ್ವರದಲ್ಲಿ “ನಿಮ್ಮ ಮಗನಾಗಿ ಹುಟ್ಟಿ ಬರುವಲ್ಲಿ ಒದಗಿದ ಕಷ್ಟ ಸೈರಿಸಿದ ನಿಮಗೆ ಕೃತಜ್ಞತೆಗಳು. ಅತ್ತ ನಂದಗೋಕುಲದಲ್ಲಿ ಯಶೋದೆಗೆ ಒಂದು ಹೆಣ್ಣು ಮಗು ಹುಟ್ಟಿದೆ. ನನ್ನನ್ನು ಅವರ ಬಳಿ ಬಿಟ್ಟು ಆ ಹೆಣ್ಣು ಮಗುವನ್ನು ಶೀಘ್ರವಾಗಿ ಇಲ್ಲಿಗೆ ಕರೆ ತನ್ನಿ. ಮುಂದೆ ಎಲ್ಲವೂ ಶುಭವಾಗಲಿದೆ” ಎಂದು ಆಶೀರ್ವದಿಸಿ ಶ್ರೀಮನ್ನಾರಾಯಣ ಮತ್ತೆ ಮುದ್ದು ಮುಕುಂದನಾಗಿ ಪವಡಿಸಿದ. ದೇವಕಿ ವಸುದೇವರಿಗೆ ಮತ್ತೆ ಮತ್ತೆ ಆ ದಿವ್ಯ ರೂಪವನ್ನು ನೋಡುತ್ತಲೇ ಇರಬೇಕೆಂಬ ಆಶೆಯಾದರೂ, ದೇವನ ಆಜ್ಞೆಯಂತೆ ಎಳೆಕಂದನನ್ನು ಉತ್ತರೀಯದಲ್ಲಿ ಸುತ್ತಿ ಎದೆಗೊತ್ತಿಕೊಂಡು ಹೊರಡಲು ಎದ್ದು ನಿಂತ ವಸುದೇವ. ಮಗು ಹುಟ್ಟುವ ಕಾಲದಲ್ಲೇ ಬಿಗಿದ ಸಂಕಲೆಗಳು ಮುಕ್ತವಾಗಿದ್ದವು. ಈಗ ಕಾರಾಗ್ರಹದ ಬಾಗಿಲುಗಳು ತೆರೆದು ಕೊಂಡವು. ಕಾವಲು ಭಟರನ್ನು ನೋಡಿದರೆ ಸುಖನಿದ್ರೆಯಾವರಿಸಿ ಒರಗಿದ್ದಾರೆ. ದೇವನೇ ಜೊತೆ ಇರಬೇಕಾದರೆ ಇನ್ಯಾರ ಭಯ. ಮಥುರೆಯ ಕಾರಾಗ್ರಹದಿಂದ ಹೊರಬಂದ. ಸುರಿಯುತ್ತಿದೆ ಜಡಿ ಮಳೆ. ಕಾರ್ಗತ್ತಲು ದಿಕ್ಕೇ ತೋಚುತ್ತಿಲ್ಲ. ತನ್ನಿಂತಾನೆ ಮಂದ ಬೆಳಕು ಪಸರಿಸಿತು, ಬೆಳಗಿತು. ಹೊರಬಂದರೆ ಮಳೆಯ ಹನಿ ನೀರೂ ಮೈಗೆ ಸೋಕುತ್ತಿಲ್ಲ. ಇದೂ ದೇವನ ಲೀಲೆ ಎಂದೇ ಸಾಗಿ ಯಮುನೆಯ ತೀರ ಸೇರಿದರೆ ದಡ ದಾಟಿ ಹರಿಯುತ್ತಿದ್ದಾಳೆ ಯಮುನೆ. ನಾನು ಸೇರಬೇಕಾದದ್ದು ನಂದ ಗೋಕುಲ. “ನದಿಯನ್ನು ದಾಟಲೇ ಬೇಕು. ಭಯವೇಕೆ? ಭಗವಂತ ನೀನೆ ಕಾಪಾಡು…” ಎಂದು ನದಿಗೆ ಇಳಿದು ಸಾಗುತ್ತಿದ್ದಾನೆ ವಸುದೇವ… ನೀರ ಮಧ್ಯದಲ್ಲೆ ದಾರಿಯಾಗಿದೆ. ಮೇಲಿನ ನೀರು ಮೇಲಿಂದ ಹರಿಯುತ್ತಿದೆ. ಕೆಳಗೆ, ಎಡ ಬಲದಲ್ಲಿ, ಹಿಂದೆ – ಮುಂದೆ ಸುತ್ತಲೂ ನೀರು ಹರಿಯುತ್ತಲೇ ಇದೆ. ಯಮುನೆಯೊಡಲಲ್ಲಿ ಹೋಗಲು ದಾರಿಯಾಗಿದೆ. ಒದ್ದೆಯಾಗದೆ ನದಿ ದಾಟಿದ ವಸುದೇವ. ಕಾರಣ ಮಹಾಶೇಷನೆ ಕೊಡೆಯಂತೆ ಹೆಡೆಬಿಚ್ಚಿ ಅನುಸರಿಸಿ ತೆವಳುತ್ತಾ ಬರುತ್ತಿದ್ದಾನೆ. ಅರೆಕ್ಷಣದಲ್ಲಿ ಇಚ್ಚಾಗಮನ ಶಕ್ತಿ ಪ್ರಾಪ್ತವಾಯಿತೋ ಎಂಬಂತೆ ಸಾಗಿ ವಸುದೇವ ನಂದಗೋಕುಲ ಸೇರಿದ.
ಎಲ್ಲರೂ ಮಲಗಿದ್ದಾರೆ. ಕಪ್ಪೆ, ಹಾವು, ಕೀಟಗಳೂ ಸದ್ದಿಲ್ಲದೆ ಮೌನದಲ್ಲಿ ಭಗವತ್ ಧ್ಯಾನ ನಿರತವಾದಂತಿದೆ. ಸೂತಿಕಾ ಗ್ರಹ ದತ್ತ ಬಂದರೆ ಯಶೋದೆ ಪ್ರಸವೊತ್ತರ ಆಯಾಸದಿಂದ ಮಲಗಿದ್ದಾಳೆ. ಮುದ್ದಾದ ಹೆಣ್ಣು ಮಗು ಇವರನ್ನೇ ದಿಟ್ಟಿಸಿ ನೋಡುತ್ತಿದೆ. ಸನಿಹ ಇದ್ದವರು ಅತ್ತಿತ್ತ ಸಾಗಿದ್ದಾರೆ. ಮರಳಿ ಬರುವುದರೊಳಗೆ ತಾನು ತಂದ ದಿವ್ಯಮೂರ್ತಿಯನ್ನು ಯಶೋದೆಯ ಬಳಿ ಮಲಗಿಸಿ, ಆ ಹೆಣ್ಣು ಮಗುವನ್ನೆತ್ತಿಕೊಂಡು ಹೊರಟೇ ಬಿಟ್ಟ ವಸುದೇವ. ನಂದ ಗೋಕುಲದಿಂದ – ಮಥುರಾ ಪಟ್ಟಣಕ್ಕೆ… ಆಹೋರಾತ್ರಿ ನಡೆದು ಕ್ರಮಿಸುವ ಅಂತರವೇ? ಲೀಲಾ ಪ್ರಭಾವದ ಸಾಕ್ಷಿಯೋ ಎಂಬಂತೆ ನಿರಾಯಾಸ – ನಿರ್ವಿಘ್ನವಾಗಿ ಮತ್ತೆ ಕಾರಾಗ್ರಹ ಬಂದು ತಲುಪಿ ಮಗುವನ್ನು ದೇವಕಿಯ ವಶಕ್ಕೊಪ್ಪಿಸಿದ ವಸುದೇವನಿಗೆ ಈವರೆಗೆ ಆಗದ ದಣಿವು ಅನುಭವಕ್ಕೆ ಬಂತು. ಅಲ್ಲೇ ಮಗುವನ್ನು ನೋಡುತ್ತಾ ಮಲಗಿದ. ತಕ್ಷಣ ತೀಕ್ಷ್ಣವಾದ ಸ್ವರದಲ್ಲಿ ಮಥುರಾ ಪಟ್ಟಣವೇ ಪ್ರತಿಧ್ವನಿಸುವಂತೆ ಅತ್ತುಬಿಟ್ಟಿತು ಹೆಣ್ಣು ಮಾಯೆ. ಎಚ್ಚೆತ್ತರು ಭಟರು, ಕಂಸನಿಗೆ ಸುದ್ದಿಯನೊಯ್ದರೆ ಆತನಿಗೂ ನಿದ್ದೆ. ಕಾವಲು ಭಟರಿಂದ ಎಚ್ಚರಿಸಲ್ಪಟ್ಟು ವಿಚಾರ ತಿಳಿದು ಕಂಪಿಸಿ ನಡುಗಿದ. ಒಂದೆಡೆ ಇನ್ನು ನನ್ನ ಮರಣ ನಿಶ್ಚಿತ ಎಂಬ ಭಾವ ತಳೆದು ಬೆದರಿದ. ತಕ್ಷಣ ಧೈರ್ಯ ತಳೆದುಕೊಂಡನು ಕಂಸಾಖ್ಯ. ಹೆದರುವ ಜಾಯಮಾನ ಈ ಕಂಸನದ್ದಲ್ಲ ಎಂದು ತನಗೆ ತಾನೇ ಸಂತೈಸಿಕೊಂಡನು.ಬಮುಖ ತೊಳೆಯದೆಯೇ ನಿದ್ದೆಯ ಸರ್ವ ಲಕ್ಷಣ ಸಹಿತನಾಗಿ ಕಾರಾಗ್ರಹದತ್ತ ಧಾವಿಸಿದ. ಕಾರಾಗ್ರಹದ ಬಾಗಿಲು ತೆರೆದರು ಕಾವಲು ಭಟರು. ಸರ್ಪಗಾವಲಿನಂತೆ ಕಾರಾಗ್ರಹ ಸುತ್ತುವರಿದು ನಿಂತಿತ್ತು ರಕ್ಷಾ ಪಡೆ.
ಮಗುವನ್ನು ಕಂಡ ಕಂಸ. ಆತನ ಪಾಲಿಗೆ ಈ ಮಗು ಮೃತ್ಯು ದೇವತೆಯಾಗಿದ್ದರೂ, ಅರೆ ಕ್ಷಣ ಮಗುವಿನ ಸುಕೋಮಲತೆಗೆ ತನ್ಮಯನಾದ. ತಕ್ಷಣ ಹೂಂಕರಿಸಿ ಒರೆಯಿಂದ ಖಡ್ಗವನ್ನೆಳೆದು ಮುಂದೆ ಹೆಜ್ಜೆ ಹಾಕಿ ಸನಿಹ ಬಂದರೆ, ದೇವಕಿ ಎರಡೂ ಕಾಲುಗಳನ್ನು ಬಿಗಿದಪ್ಪಿ “ಅಣ್ಣಾ ಹೆಣ್ಣು ಮಗುವಿದು. ಈ ಹೆಣ್ಣು ಅಬಲೆ ನಿನಗೆ ಹೇಗೆ ಹಗೆಯಾದಾಳು! … ಬಿಟ್ಟು ಬಿಡಣ್ಣಾ ಈ ಹೆಣ್ಣು ಮಗುವಾದರೂ ಬದುಕಲಿ” ಎಂದು ಗೋಗರೆದಳು. ಎಡಗಾಲೆತ್ತಿ ಒದ್ದು ಚಿಮ್ಮಿದ ಭರಸಕ್ಕೆ ದೇವಕಿ ತುಸು ದೂರ ಜಾರಿ ಬಿದ್ದಳು. ಮಗುವನ್ನು ಕತ್ತಿನ ಭಾಗಕ್ಕೆ ಕೈ ಹಾಕಿ ಎತ್ತಿ ನೇತಾಡಿಸಿ ಹಿಡಿದ. ಖಡ್ಗ ಜಳಪಿಸಿ, ಭೀಕರವಾದ ಘರ್ಜನೆ ಮಾಡಿದನು ರಾಕ್ಷಸ ಕಂಸ. ಖಡ್ಗವನ್ನು ಬೀಸಿದ ವರಸೆಗೆ – ಇನ್ನೇನು ಮಗು ಪೆಟ್ಟೊಂದರಿಂದ ತುಂಡೆರಡಾಯಿತು ಎಂಬಂತಹ ರೀತಿ ಬಲಯುತವಾಗಿ ಸಾಗಿ ಬರುವ ಖಡ್ಗದ ಗಮನಕ್ಕೆ ಪ್ರತಿಯಾಗಿ ಮಗು ಜಗ್ಗಿ ಸೆಳೆದು – ಕಂಸನ ಎದೆಗೆ ಒದ್ದು ಮೇಲ್ಮುಖವಾಗಿ ಚಿಮ್ಮಿ ವ್ಯೋಮದಲ್ಲಿ ತೇಲುತ್ತಾ ನಿಂತಿತು.
ಕಂಸನ ಹಿಡಿತದಿಂದ ಹಾರಿದ ಶಿಶುವು ನೆಲಕ್ಕೆ ಬೀಳದೆ, ಗಗನಮಂಡಲದಲ್ಲಿ ನಿಂತು ನವನೂತನ ವಿಕಸಿತ ಪುಷ್ಪಮಾಲೆಗಳಿಂದಲೂ, ಕೆಂಬಣ್ಣದ ಸೀರೆಯಿಂದಲೂ, ಸುಗಂಧ ಪರಿಮಳಗಳಿಂದಲೂ, ರತ್ನಖಚಿತವಾದ ಆಭರಣಗಳಿಂದಲೂ ಅಲಂಕೃತ ಶೋಭಿತೆಯಾಗಿ, ತನ್ನ ಅಷ್ಟ ಭುಜ -ಕರಕಮಲದಲ್ಲಿ ಗದಾ- ಶಂಖ- ಚಕ್ರ- ಖಡ್ಗ, ಡಮುರುಗ, ಶೂಲ, ಬಿಲ್ಲು, ಬಾಣಾದಿ ಆಯುಧಗಳನ್ನು ಧಾರಣೆ ಮಾಡಿ ನಿಂತಳು. ಸುಮನಸರು ಪುಷ್ಪವೃಷ್ಟಿಗರೆದರು. ಸಿದ್ದ ಚಾರಣ ಗಂಧರ್ವಾದಿಗಳು ಸಮರ್ಪಿಸಿದ ಷೋಡಷ ಉಪಚಾರ ಆರತಿಗಳನ್ನು ಸ್ವೀಕರಿಸಿದಳು. ತೇಜೋಮಯಳಾಗಿ ಕಂಗೊಳಿಸಿದಳು. ಕಂಸನನ್ನು ಉದ್ದೇಶಿಸಿ ಹೂಂಕಾರಗೈದು,..
“ಎಲೈ ದುರಾತ್ಮನಾದ ಕಂಸನೆ ! ಒಡಹುಟ್ಟಿದ ತಂಗಿ ಎಂದೆಣಿಸದೆ ಮದೋನ್ಮತ್ತನಾಗಿ ಪೀಡಿಸಿದೆ. ದೇವಕಿಯ ಗರ್ಭದಲ್ಲಿ ಹುಟ್ಟಿದ ಆರುಮಂದಿ ಹಸುಳೆಗಳನ್ನು ಕೊಂದು ಕಳೆದೆ.
ಅಷ್ಟಕ್ಕೇ ಸುಮ್ಮನಿರದೆ ನನ್ನ ವಧೆಗೂ ಮುಂದಾದೆ. ಅಸಂಭವ ಕೃತಿಯದು ನಿನಗೆ. ಪಾಪಿ ! ಮದಾಂಧಾ ! ಹುಟ್ಟಿದ ಮಕ್ಕಳನ್ನು ಕೊಂದು ಶಿಶು ಹತ್ಯಾ ದೋಷಿಯಾದೆ. ಎಳೆಮಕ್ಕಳನ್ನು ಕೊಲ್ಲುವುದೊಂದು ಶೂರತ್ವವೆ ? ಎಲವೋ ದುರ್ಮತಿ ! ನಿನ್ನನ್ನು ಸಂಹರಿಸಿ ಭೂಭಾರ ಇಳುಹಿ ಸುಕ್ಷೇಮ ಕರುಣಿಸುವ ಮಹಾತ್ಮ ಅವತರಿಸಿದ್ದಾನೆ. ನಿನ್ನ ಪಾಪಕ್ಕೆ ದಂಡನೆಯಿತ್ತು ಸಂಹರಿಸುವ ಸುಮೂಹೂರ್ತ ಸನ್ನಿಹಿತವಾಗಿದೆ.
ನಿನ್ನ ವಿನಾಶಕಾಲವು ಸಮೀಪಿಸುತ್ತಿದೆ. ಮರೆಯದಿರು ! ಮೆರೆಯದಿರು!” ಎಂದು ಎಚ್ಚರಿಸಿ ಮಹಾಮಾಯೆ ಅಂತರ್ಧಾನಳಾದಳು.
ಮುಂದುವರಿಯುವುದು…



















